ಮೈತ್ರಿ ಸರಕಾರದಿಂದ ರಾಜ್ಯದವಿಕಾಸ ಅಸಾಧ್ಯ: ಅಮಿತ್‌ ಶಾ

Team Udayavani, Feb 15, 2019, 8:41 AM IST

ಬಳ್ಳಾರಿ: ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಘಟಬಂಧನ್‌ ಸರ್ಕಾರವಿದೆ. ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರೇ “ನಾನು ಈ ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ ಪಕ್ಷದ, ರಾಹುಲ್‌ ಗಾಂಧಿಯವರ ಮುಲಾಜಿನಲ್ಲಿರುವೆ’ ಎನ್ನುತ್ತಾರೆ. ಇಂಥ ಸರ್ಕಾರದಿಂದ ರಾಜ್ಯದ ವಿಕಾಸ ಅಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಹೊಸಪೇಟೆಯ ವಿಜಯಶ್ರೀ ಹೆರಿಟೇಜ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರಬುದ್ಧರ ಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ಧ ವಾಗ್ಧಾಳಿ ನಡೆಸಿದರು.

ಕರ್ನಾಟಕದಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ದೋಷವಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬೇಕಾಗುವ ಮ್ಯಾಜಿಕ್‌ ನಂಬರ್‌ಗಿಂತ ಕಡಿಮೆ ಸೀಟ್‌ಗಳು ಬಂದಿದ್ದು ಪಕ್ಷದ ದುರ್ದೈವ. ಆದರೆ, ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ ವಿರೋಧ ಪಕ್ಷದಲ್ಲಿದೆ. ಕಡಿಮೆ ಸ್ಥಾನ ಗೆದ್ದಿರುವ ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. 

ಮುಖ್ಯಮಂತ್ರಿ ಕುಮಾರಸ್ವಾಮಿಯವರು, “ನಾನು ರಾಜ್ಯದ ಜನರಿಂದ ಆಯ್ಕೆಯಾಗಿಲ್ಲ. ಕಾಂಗ್ರೆಸ್‌ ಕೃಪೆಯಿಂದ ಸಿಎಂ ಆಗಿದ್ದೇನೆ’ ಎನ್ನುತ್ತಾರೆ. ಇದಕ್ಕಿಂತ ನಾಚಿಕೆ ಇನ್ನೇನಿದೆ ಎಂದ ಶಾ, ಸಿಎಂ ಕುಮಾರಸ್ವಾಮಿಯವರೇ ಹೇಳುವಂತೆ ಅವರು ನಿಜಕ್ಕೂ ವಿಷಕಂಠನಾಗಿದ್ದಾರೆ. ಕಾರಣ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಭ್ರಷ್ಟಾಚಾರದ ವಿಷವನ್ನು ಗಂಟಲಲ್ಲಿಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. 

ರಾಜ್ಯಕ್ಕೆ ಸಾಕಷ್ಟು ಅನುದಾನ: ಕೇಂದ್ರ ಸರ್ಕಾರ ದಿಂದ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಿದ್ದರೂ, ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಮಾತೂ ಆಡಲ್ಲ. ಈ ಹಿಂದೆ ಯುಪಿಎ ಆಡಳಿತಾವಧಿಯಲ್ಲಿ 13ನೇ ಹಣಕಾಸು ನಿಧಿಯಡಿ 88 ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಅದನ್ನು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 14ನೇ ಹಣಕಾಸು ನಿಧಿಯಡಿ 2,19,506 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಉಜ್ವಲ ಯೋಜನೆಗೆ 4300 ಕೋಟಿ ರೂ. ಮತ್ತು ಇನ್ನಿತರೆ ಯೋಜನೆಗಳಿಗೆ ರಾಜ್ಯಕ್ಕೆ ಒಟ್ಟು 3,88,971 ಕೋಟಿ ರೂ. ನೀಡಲಾಗಿದೆ. ಮುದ್ರಾ ಯೋಜನೆಯಡಿ 72 ಸಾವಿರ ಕೋಟಿ ರೂ., ರೈಲ್ವೆಗೆ 21 ಸಾವಿರ ಕೋಟಿ ರೂ., ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ 12 ಸಾವಿರ ಕೋಟಿ ರೂ, ಅಮೃತ್‌ ಯೋಜನೆಗೆ 4900 ಕೋಟಿ ರೂ, ಬೆಂಗಳೂರು ಮೆಟ್ರೋ ಯೋಜನೆಗೆ 2600 ಕೋಟಿ ರೂ. ಮತ್ತು ಸಡಕ್‌ ಯೋಜನೆಗೆ 27 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಬುದ್ಧರ ಗೋಷ್ಠಿ ಎಂಬ ಕಲ್ಪನೆ ವಿಶಿಷ್ಟವಾಗಿದೆ. ಜನರ ಜೊತೆಗೆ ಸಂವಾದ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದ ಅಮಿತ್‌ ಶಾ, ಇದರಿಂದ ಯಾವ ಪಕ್ಷಕ್ಕೆ ಮತ ಹಾಕಬೇಕು ಎನ್ನುವ ಸ್ಪಷ್ಟತೆ ಜನರಿಗೆ ಬರಲಿದೆ. ಪರಿಣಾಮ 2019ರ ಲೋಕಸಭಾ ಚುನಾವಣೆಯಲ್ಲಿ ಯಾವ ಸರ್ಕಾರ ಬೇಕು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ದೊರೆಯಲಿದೆ ಎಂದರು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮೊದಲು ಕುಟುಂಬ ರಾಜಕಾರಣವನ್ನು ಬದಲಾಯಿಸಿದ್ದಾರೆ. ಕುಟುಂಬ ರಾಜಕಾರಣದಿಂದ ದೇಶ ಅಭಿವೃದ್ಧಿಯಾಗಲ್ಲ. ಜನಾದೇಶದಿಂದ ನಾಯಕ ಆಗಬೇಕು. ದೇಶ, ರಾಜ್ಯವನ್ನು ಕಾಡುತ್ತಿರುವ 70 ವರ್ಷದ ದುರಾಡಳಿತಕ್ಕೆ ಸಂಪೂರ್ಣವಾಗಿ ಅಂತ್ಯ ಹಾಡಬೇಕಿದೆ ಎಂದರು.

ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌, ಸಂಘಟನಾ ಕಾರ್ಯದರ್ಶಿ ಸಂತೋಷ್‌ಜೀ, ಶಾಸಕ ಬಿ.ಶ್ರೀರಾಮುಲು, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಮೃತ್ಯುಂಜಯ ಜಿನಗಾ, ಕಿರಣ ಮಹೇಶ್ವರಿ ಸೇರಿದಂತೆ ಕಾರ್ಯಕರ್ತರು ಇದ್ದರು. ಶಾಸಕ ಸಿ.ಟಿ.ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಸ್ವಾಗತಿಸಿದರು. ಯರ್ರಂಗಳಿ ತಿಮ್ಮಾರೆಡ್ಡಿ ವಂದಿಸಿದರು.

ಸಂಗೀತ ಕಾರ್ಯಕ್ರಮ: ಕಾರ್ಯಕ್ರಮ ಪ್ರಾರಂಭವಾಗುವ ಮುಂಚೆ ಯಲ್ಲಪ್ಪ ಭಂಡಾರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. “ಕಾಣದ ಕಡಲಿಗೆ’, “ಜಾತಿ ಏಕೆ ಬೇಕು’ ಎಂಬ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಮತ್ತೂಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ಬೇಕಾಗಿದೆ ಈಗಾಗಲೇ ಒಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಲಾಗಿದೆ. ಆದರೂ, ವೈರಿಗಳಿಗೆ ಬುದ್ಧಿ ಬಂದಿಲ್ಲ. ಈಗ ಮತ್ತೂಮ್ಮೆ ಸೈನಿಕರ ಮೇಲೆ ದಾಳಿ ನಡೆದಿದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಆದರೆ, ಹುತಾತ್ಮ ಸೈನಿಕರ ಕುಟುಂಬದವರ ದುಃಖದಲ್ಲಿ ನಾವೆಲ್ಲರೂ ಇದ್ದೇವೆ ಎಂಬ ಸಂದೇಶವನ್ನು ಸಾರಬೇಕಾಗಿದೆ. ವೈರಿಗಳಿಗೆ ಇದೀಗ ಮತ್ತೂಮ್ಮೆ ಪಾಠ ಕಲಿಸಬೇಕಾದ ಸ್ಥಿತಿ ಬಂದಿದೆ. 
 ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ರಾಜ್ಯಾಧ್ಯಕ್ಷ ಯಡಿಯೂರಪ್ಪ ಗೈರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗೈರು ಹಾಜರಿ ಎದ್ದು ಕಾಣುತ್ತಿತ್ತು. ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಅಪರೇಷನ್‌ ಆಡಿಯೋ-ವಿಡಿಯೋದಿಂದ ಪಕ್ಷಕ್ಕೆ ಮುಜುಗರವಾಗಿದೆ. ಇದರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಅಮಿತ್‌ ಶಾ ಅವರಿಂದ ಅಂತರ ಕಾಯ್ದುಕೊಂಡಿರಬಹುದು. ಈ ಕಾರಣಕ್ಕಾಗಿಯೇ ಬಿಎಸ್‌ವೈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದವು.

ರಾಷ್ಟ್ರೀಯ ಅಧ್ಯಕ್ಷರಿಲ್ಲದೇ ಕಾರ್ಯಕ್ರಮ ಪ್ರಾರಂಭ ಸಿಂಧನೂರ ಕಾರ್ಯಕ್ರಮ ಮುಗಿಸಿಕೊಂಡು ಅಮಿತಾ ಶಾ ಅವರು ಬರುವುದು ತಡವಾಯಿತು. ಅವರಿಗೋಸ್ಕರ ಗಣ್ಯರು ಕಾಯದೆ ಶ್ಯಾಮಚಂದ್ರ ಮುಖರ್ಜಿ ಹಾಗೂ ದೀನದಯಾಳ್‌ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಸಿ.ಟಿ. ರವಿ ಪ್ರಾಸ್ತಾವಿಕ ಮಾತನಾಡಿದರು. ನಿಗದಿಯಂತೆ ಸಂಜೆ 6.15ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಅಮಿತ್‌ ಶಾ ರಾತ್ರಿ 8.25ಕ್ಕೆ (2 ಗಂಟೆ ತಡವಾಗಿ) ಆಗಮಿಸಿದರು.

ಅಭಿಪ್ರಾಯ ಸಂಗ್ರಹ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದವರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಎಲ್ಲರಿಗೂ ಖಾಲಿ ಹಾಳೆಯನ್ನು ನೀಡಿ ಅಭಿಪ್ರಾಯ ಬರೆಯುವಂತೆ ಸೂಚಿಸಲಾಯಿತು. ನಂತರ ಎಲ್ಲವನ್ನೂ ಒಂದು ಬಾಕ್ಸ್‌ ನಲ್ಲಿ ಸಂಗ್ರಹಿಸಿಡಲಾಯಿತು. 

ಕಾದು ಸುಸ್ತಾದ ಜನ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನವೇ ಬಂದು ಆಸೀನರಾಗಿದ್ದರು. ಆದರೆ ಅಮಿತ್‌ ಶಾ ಅವರು ಬಾರದೆ ಕಾದು ಕಾದು ಸುಸ್ತಾದರು.

ಮೌನಾಚರಣೆ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಗುರುವಾರ ಹುತಾತ್ಮರಾದ ಯೋಧರಿಗೆ ಎರಡು ನಿಮಿಷ ಮೌನ ಆಚರಣೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. 


ಈ ವಿಭಾಗದಿಂದ ಇನ್ನಷ್ಟು

  • ಹೂವಿನಹಡಗಲಿ: ಪಟ್ಟಣದ ಪುರಸಭೆಗೆ ಮೇ 29ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆ ದಿನವಾಗಿದ್ದು, ಒಟ್ಟು 18 ಅಭ್ಯರ್ಥಿಗಳು ನಾಮಪತ್ರ...

  • ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿ ಮತ್ತು ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿ ಪರಿಣಾಮ...

  • ಕೂಡ್ಲಿಗಿ: ಬರಗಾಲಕ್ಕೆ ತುತ್ತಾಗುವ ಮೂಲಕ ಅತೀ ಹಿಂದುಳಿದ ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಯಾಗುವವರೆಗೂ ಹೋರಾಟದ ಕಿಚ್ಚು ನಿಲ್ಲುವುದಿಲ್ಲ ಎಂದು ಕಾನಮಡುಗು...

  • ಸಂಡೂರು: ಅಪಘಾತಗಳಿಗೆ ವೇಗದ ಚಾಲನೆ, ಚಾಲಕನ ನಿರ್ಲಕ್ಷ್ಯ ಮನೋಭಾವ, ಉದಾಸೀನತೆಯೇ ಕಾರಣವಾಗಿದ್ದು, ತಾಲೂಕಿನಲ್ಲಿ 3 ತಿಂಗಳಲ್ಲಿ 15 ರಿಂದ 20 ಅವಘಡಗಳು ಜರುಗಿದ್ದು,...

  • ಕುರುಗೋಡು: ಕುಡತಿನಿ ಪಟ್ಟಣದಲ್ಲಿ ಸಮರ್ಪಕವಾಗಿ ನೀರು ದೊರಕದೆ ಜನರು ಹೈರಾಣಾಗಿದ್ದಾರೆ. ನಿತ್ಯ ಖಾಸಗಿ ಶುದ್ಧ ಘಟಕಗಳಿಗೆ ತೆರಳಿ ಹಣ ಕೊಟ್ಟು ನೀರು ಖರೀದಿ ಮಾಡಬೇಕಾದ...

ಹೊಸ ಸೇರ್ಪಡೆ