ಆಂಬ್ಯುಲೆನ್ಸ್‌ಗಳಿವೆ, ಸೌಲಭ್ಯಗಳೇ ಇಲ್ಲ

Team Udayavani, Dec 16, 2018, 3:33 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ತಕ್ಕಷ್ಟು ಆ್ಯಂಬುಲೆನ್ಸ್‌ಗಳಿವೆಯಾದರೂ,
ವೆಂಟಿಲೇಟರ್‌ ಸೌಲಭ್ಯಗಳಿಲ್ಲ. ಈಚೆಗೆ ತಾಲೂಕಿನ ಮೋಕಾ ಗ್ರಾಮದ ಬಳಿ ಸಮಯಕ್ಕೆ ಆಂಬ್ಯುಲೆನ್ಸ್‌ ಚಾಲಕನಿಲ್ಲದ್ದರಿಂದ ರೋಗಿಯೊಬ್ಬ ಮೃತಪಟ್ಟಿದ್ದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗಳು ಆಗಿಲ್ಲ.

ಆಂಬ್ಯುಲೆನ್ಸ್‌ ಕೊರತೆ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸದಿರುವುದು, ಚಾಲಕರ ಕೊರತೆ, ಕೆಟ್ಟು ನಿಂತಿರುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ದೊರೆಯದ್ದರಿಂದ ಸಾಕಷ್ಟು ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಕೆಲವೊಮ್ಮೆ ಆಂಬ್ಯುಲೆನ್ಸ್‌ ತಡವಾಗಿ ಆಗಮಿಸಿದ್ದರಿಂದ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ರಸ್ತೆಯಲ್ಲೇ ಮೃತಪಟ್ಟಿರುವ ಉದಾಹರಣೆಗಳು ಇವೆ.

8 ಆಂಬ್ಯುಲೆನ್ಸ್‌ ಖರೀದಿ: ಜಿಲ್ಲೆಯ ಜಿಲ್ಲಾ ಖನಿಜ ನಿಧಿಯಿಂದಲೂ ಈಚೆಗೆ ಒಟ್ಟು 8 ಆಂಬ್ಯುಲೆನ್ಸ್‌ಗಳನ್ನು ಖರೀದಿಸಲಾಗಿದ್ದು, ಕಳೆದ ಆಗಸ್ಟ್‌ 15 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದರು. ಸದ್ಯ ಕೇವಲ ಆಂಬ್ಯುಲೆನ್ಸಗಳನ್ನಷ್ಟೇ ಖರೀದಿಸಲಾಗಿದ್ದು, ಬಳ್ಳಾರಿ, ಹೊಸಪೇಟೆ, ಸಂಡೂರು ತಾಲೂಕುಗಳಿಗೆ ತಲಾ 2, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಿಗೆ ತಲಾ 1 ಆಂಬ್ಯುಲೆನ್ಸ್‌ ವಾಹನಗಳನ್ನು ನೀಡಲಾಗಿದೆ. ಈ ವಾಹನಗಳಲ್ಲಿ ವೆಂಟಿಲೇಟರ್‌, ಡಿ μಬ್ರಿಲೇಟರ್‌ ಸಾಧನಗಳು ಇರಲಿವೆ. ಇದಕ್ಕಾಗಿ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ವಾಹನಗಳಲ್ಲಿ ಶೀಘ್ರ ಅಳವಡಿಸಲಾಗುತ್ತದೆ. ಜತೆಗೆ ಒಬ್ಬ ವೈದ್ಯರು, ಸ್ಟಾಫ್‌ ನರ್ಸ್‌ ನಿಯೋಜಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ಸ್ಪಷ್ಟಪಡಿಸುತ್ತವೆ.

ಮೋಕಾ ಘಟನೆ: ತಾಲೂಕಿನ ಮೋಕಾ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿನ ಆಂಬ್ಯುಲೆನ್ಸ್‌ ಕೆಟ್ಟು ನಿಂತಿದ್ದರಿಂದ ಅದರ ಚಾಲಕ ಅಂದು ಆಸ್ಪತ್ರೆಗೆ ಆಗಮಿಸಿರಲಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ಕೂಡಲೇ 108 ಆಂಬ್ಯುಲೆನ್ಸ್‌ ಕರೆ ಮಾಡಿದ್ದರಿಂದ ಅದು ಸಹ ಕೆಲ ನಿಮಿಷ ತಡವಾಗಿ ಆಗಮಿಸಿದ್ದು, ರೋಗಿಯನ್ನು ಹತ್ತಿಸಲಾಗಿದೆ. ಇದೇ ವೇಳೆ ಸ್ಥಳೀಯ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್‌ ಚಾಲಕ ಆಗಮಿಸಿ, ವಾಹನ ತಂದಿದ್ದಾರೆ.

ಆಗ ರೋಗಿಯನ್ನು ಪುನಃ ಮತ್ತೂಂದು ಆಂಬ್ಯುಲೆನ್ಸ್‌ ಗೆ ಸ್ಥಳಾಂತರಿಸುವಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿದ್ದು, ವಿಮ್ಸ್‌ ಆಸ್ಪತ್ರೆಗೆ ಕೊಂಡೊಯ್ಯುವ ರಸ್ತೆ ಮಧ್ಯೆ ರೋಗಿ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ರೋಗಿಯ ಸಂಬಂಧಿಕರು, ಆಂಬ್ಯುಲೆನ್ಸ್‌ ವಾಹನ ಚಾಲಕನನ್ನು ಥಳಿಸಿದ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಎಷ್ಟಿವೆ ಆ್ಯಂಬುಲೆನ್ಸ್‌: ಜಿಲ್ಲೆಯಲ್ಲಿ 1 ಜಿಲ್ಲಾಸ್ಪತ್ರೆ, ತಾಲೂಕಿಗೊಂದು 9 ಸರ್ಕಾರಿ ಆಸ್ಪತ್ರೆ, ಹೋಬಳಿಗೊಂದು 11 ಸಮುದಾಯ ಆರೋಗ್ಯ ಕೇಂದ್ರ ಮತ್ತು 72 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನಗುಮಗು ಆಂಬ್ಯುಲೆನ್ಸ್‌ 8, ಎಚ್‌ಆರ್‌ಡಿಬಿಯಿಂದ ಬಂದಿರುವ 7 ಆಂಬ್ಯುಲೆನ್ಸ್‌ ಜಿಲ್ಲಾ ಖನಿಜ ನಿಧಿಯಿಂದ 8, ಸಾಮಾನ್ಯ ಆಂಬ್ಯುಲೆನ್ಸ್‌ 26, 108 ಆಂಬ್ಯುಲೆನ್ಸ್‌ 27 ಸೇರಿ ಒಟ್ಟು 76 ಆಂಬ್ಯುಲೆನ್ಸ್‌ ಗಳಲ್ಲಿ 66 ಕಾರ್ಯ ನಿರ್ವಹಿಸುತ್ತಿವೆ. ಉಳಿದ 10ರಲ್ಲಿ ಮೂರು ದುರಸ್ತಿಯಲ್ಲಿದ್ದು, 2 ಅಪಘಾತಕ್ಕೀಡಾಗಿವೆ.
 
5 ನಿರುಪಯುಕ್ತ ವಾಹನಗಳಾಗಿವೆ. ಈ ಪೈಕಿ ಬಳ್ಳಾರಿ ನಗು ಮಗು ಆಂಬ್ಯುಲೆನ್ಸ್‌ 2, ಸಾಮಾನ್ಯ ಆಂಬ್ಯುಲೆನ್ಸ್‌ 1,
108ಆಂಬ್ಯುಲೆನ್ಸ್‌ 6 ಸೇರಿ 9 ಕಾರ್ಯ ನಿರ್ವಹಿಸುತ್ತಿವೆ. ಸಿರುಗುಪ್ಪ ನಗುಮಗು 1, ಎಚ್‌ಕೆಆರ್‌ಡಿಬಿ 2, ಸಾಮಾನ್ಯ 2, 108 ಆಂಬ್ಯುಲೆನ್ಸ್‌ 3 ಸೇರಿ ಒಟ್ಟು 8 ಹಾಗೂ ಹೊಸಪೇಟೆ ನಗುಮಗು 1, ಎಚ್‌ಕೆಆರ್‌ ಡಿಬಿ 1, ಸಾಮಾನ್ಯ 4, 108 ಆಂಬ್ಯುಲೆನ್ಸ್‌ 4 ಸೇರಿ ಒಟ್ಟು 10, ಸಂಡೂರು ನಗುಮಗು 1, ಸಾಮಾನ್ಯ 5, 108 ಆ್ಯಂಬುಲೆನ್ಸ್‌ 3 ಒಟ್ಟು 9, ಕೂಡ್ಲಿಗಿ ನಗುಮಗು 1, ಎಚ್‌ಕೆಆರ್‌ ಡಿಬಿ 2, ಸಾಮಾನ್ಯ 8, 108 ಆಂಬ್ಯುಲೆನ್ಸ್‌ 6 ಒಟ್ಟು 16, ಹಗರಿಬೊಮ್ಮನಹಳ್ಳಿ ನಗುಮಗು
1, ಎಚ್‌ಕೆಆರ್‌ಡಿಬಿ 2, ಸಾಮಾನ್ಯ 3, 108 ಆಂಬ್ಯುಲೆನ್ಸ್‌ 2 ಒಟ್ಟು 6, ಹೂವಿನಹಡಗಲಿ ನಗುಮಗು 1 ಸಾಮಾನ್ಯ 3, 108 ಆಂಬ್ಯುಲೆನ್ಸ್‌ 3 ಒಟ್ಟು 7 ಆಂಬ್ಯುಲೆನ್ಸ್‌ ಗಳು ಕಾರ್ಯನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿನ ಆಂಬ್ಯುಲೆನ್ಸ್‌ಗಳ ಪೈಕಿ 108 ವಾಹನಗಳಲ್ಲಿ ಕೆಲವೊಂದರಲ್ಲಿ ವೆಂಟಿಲೇಟರ್‌ ಇದೆ. ಕೆಲವೊಂದರಲ್ಲಿ ಇಲ್ಲ. ವೆಂಟಿಲೇಟರ್‌ ಸೇರಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಂಬ್ಯುಲೆನ್ಸ್‌ ಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಮಾನಿಟರ್‌ ಸೇರಿ ಹಲವು ಸಾಧನಗಳು ಬೇಕಾಗಿವೆ. ಸದ್ಯ ಜಿಲ್ಲೆಯಲ್ಲಿ 76 ವಾಹನಗಳಿವೆ. ಇದರಲ್ಲಿ 10 ರಿಪೇರಿಯಿದ್ದು, 66 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಡಿಎಂಎಫ್‌ ನಿಧಿಯಿಂದ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್‌ ಗಳನ್ನು ನೀಡುವಂತೆ ಕೋರಲಾಗಿದೆ. ಮುಂದಿನ ಸಭೆಯೊಳಗೆ ಈ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ. 
 ಶಿವರಾಜ್‌ ಹೆಡೆ, ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ.

„ ವೆಂಕೋಬಿ ಸಂಗನಕಲ್ಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ