ವಿಜಯ ದಿವಸ: ಮಾಜಿ ಸೈನಿಕರಿಗೆ ಸನ್ಮಾನ
Team Udayavani, Jul 27, 2017, 9:36 AM IST
ಹಗರಿಬೊಮ್ಮನಹಳ್ಳಿ: ಭಾರತ ದೇಶ ಜ್ಞಾನ ಹಾಗೂ ಭೌತಿಕ ಶ್ರೀಮಂತಿಕೆಯಿಂದ ಪ್ರಪಂಚದಲ್ಲಿಯೇ ಶ್ರೇಷ್ಠತೆ ಹೊಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಹುಲ್ಲೇನವರ ಶಿವಾನಂದ ಹೇಳಿದರು.
ಅವರು ಮಾಲವಿಯ ಸಮಾಹಿಪ್ರಾ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಡೆದ ಮಾಜಿ ಸೈನಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರು ದೇಶಪ್ರೇಮ, ದೇಶಭಕ್ತಿ ಬೆಳಸಿಕೊಳ್ಳಬೇಕು. ನಮ್ಮ ದೇಶವು ತ್ಯಾಗ, ಕರ್ಮ, ಮೋಕ್ಷದ ನಾಡು ಎಂದು ಮಹತ್ವ ಪಡೆದಿದೆ. ಅನೇಕ ವರ್ಷ ಅನ್ಯರ ದಾಳಿ ಮತ್ತು ಆಡಳಿತದ ನಂತರ ಸ್ವಾತಂತ್ರ್ಯ ಪಡೆದವು. ಈ ಸ್ವಾತಂತ್ರ್ಯ ಉಳಿಯಲು ನಮ್ಮ ಸೈನಿಕರು ಕಾರಣರಾಗಿದ್ದಾರೆ. ಅವರ ಸೇವೆ, ಶ್ರಮ ಮತ್ತು ತ್ಯಾಗದಿಂದ ನಾವು ಸಂತಸದಿಂದಿರಲು ಸಾಧ್ಯ ಎಂದರು.
ಮಾಲವಿ ಶಾಲೆಯ ಹಿರಿಯ ವಿದ್ಯಾರ್ಥಿ ಚಲವಾದಿ ಜಗದೀಶ, ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ ಮಾತನಾಡಿದರು. ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಉತ್ತಂಗಿ ಈರಣ್ಣ ಮತ್ತು ಎಚ್. ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ತಾವು ಕಾರ್ಗಿಲ್ ಪ್ರದೇಶದಲ್ಲಿ ಕೆಲಸ ನಿರ್ವಹಿಸಿದ ಅನುಭವನ್ನು ಹಂಚಿಕೊಂಡರು. ಮುಖ್ಯಗುರು ಕೆ. ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಿ.ಮೌನೇಶ, ಪ್ರೌಢಶಾಲಾ ಮುಖ್ಯಗುರು ಆರ್. ಎಂ. ಜಗದೀಶ್ವರಯ್ಯ, ಉರ್ದು ಶಾಲೆಯ ಸಯ್ಯದ ರೋಜಿನಿ ಯಾಮಿನಿ, ನೌಕರ ಸಂಘದ ಗೌರವಾಧ್ಯಕ್ಷ ಎಂ. ಶಂಭುಲಿಂಗಪ್ಪ, ಶಿಕ್ಷಕರಾದ ಎಂ.ಎಂ. ಶಿವಪ್ರಕಾಶ, ಉಜ್ಜನಗೌಡ್ರು, ಕೆ.ನಂದ್ಯಪ್ಪ, ವಿ.ನಾಗಲಕ್ಷ್ಮೀ, ಸಂತೋಷ್, ಭರಮಪ್ಪ, ಗಾಳೆಪ್ಪ, ರಂಜನಿ ಉಪಸ್ಥಿತರಿದ್ದರು. ಶ್ವೇತ, ಜಯಪ್ಪ, ಚೆನ್ನಪ್ಪ ನಿರೂಪಿಸಿದರು.