ವಿಎಸ್‌ಕೆ ವಿವಿಗೆ ಸಿಗ್ತಿಲ್ಲ ಕೇಳಿದಷ್ಟು ಹಣ

Team Udayavani, Jul 7, 2018, 4:43 PM IST

ಬಳ್ಳಾರಿ: ಬಳ್ಳಾರಿಯ “ರೆಡ್ಡಿ ಸಹೋದರರ’ ಇಚ್ಛಾಶಕ್ತಿಯಿಂದ ಸ್ಥಾಪನೆಗೊಂಡಿದ್ದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಈಗ ಅನುದಾನ ಕೊರತೆ ಎದುರಾಗಿದೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ 43 ಕೋಟಿ ರೂ. ಅನುದಾನಕ್ಕೆ ಪ್ರಸಕ್ತ ವರ್ಷ ಬೇಡಿಕೆ ಸಲ್ಲಿಸಲಾಗಿದ್ದರೂ ಸರಕಾರದಿಂದ ಕೇವಲ 2 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ರೆಡ್ಡಿ ಸಹೋದರರ ಇಚ್ಛಾಶಕ್ತಿಯಿಂದ ಈ ವಿವಿ ಸ್ಥಾಪನೆಯಾಗಿದ್ದು, ಇದೇ ಕಾರಣಕ್ಕೆ ಅನುದಾನ ಬಿಡುಗಡೆಗೊಳಿಸುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ವಿವಿ ಆವರಣದಲ್ಲೇ ಕೇಳಿಬರುತ್ತಿದೆ. 

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ 2010ರಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ವಿವಿಯಲ್ಲಿ ಸದ್ಯ ವಿವಿಧ ಸ್ನಾತಕೋತ್ತರ ವಿಭಾಗಗಳಿದ್ದು, ಕಳೆದ ಕೆಲ ವರ್ಷಗಳಿಂದ ಸಂಶೋಧನಾ ವಿಭಾಗವನ್ನೂ ಆರಂಭಿಸಲಾಗಿದೆ. ಆದರೆ, ವಿಶ್ವವಿದ್ಯಾಲಯ ಆರಂಭಗೊಂಡು ದಶಕದ ಅಂಚಿನಲ್ಲಿದ್ದರೂ ಸಮರ್ಪಕ ಮೂಲ ಸೌಲಭ್ಯದ ಕೊರತೆ ಎದುರಿಸುತ್ತಿದೆ.
 
ಮೂಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿ ಒಟ್ಟು 43 ಕೋಟಿ ರೂ.  ಅನುದಾನ ಬಿಡುಗಡೆಗೊಳಿಸುವಂತೆ ವಿವಿಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಕೇವಲ 2 ಕೋಟಿ ರೂ. ಬಿಡುಗಡೆಗೊಳಿಸಿ ಸುಮ್ಮನಾಗಿದೆ. ಹೀಗಾಗಿ ಈ ವಿವಿಯನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಮರ್ಪಕ ಕೊಠಡಿಯೂ ಇಲ್ಲ: ವಿವಿಯಲ್ಲಿ ಸದ್ಯ ನಡೆಯುತ್ತಿರುವ ಎಲ್ಲ ವಿಭಾಗಗಳಿಗೆ ಸಮರ್ಪಕ ತರಗತಿ ಕೊಠಡಿಗಳು ಇಲ್ಲ. ಅವುಗಳನ್ನು ಹೆಚ್ಚಿಸಬೇಕಾಗಿದೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸೂಕ್ತ ಗ್ರಂಥಾಲಯವಿಲ್ಲ. ಸದ್ಯ 3.30 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗುತ್ತಿದೆ.

ಅದು ಪೂರ್ಣಗೊಳ್ಳಲು ಇನ್ನೂ 3 ಕೋಟಿ ರೂ. ಅವಶ್ಯವಿದೆ. ಅಲ್ಲದೇ, ವಿವಿಯಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಂಶೋಧನಾ ವಿಭಾಗ ಆರಂಭವಾಗಿದೆಯಾದರೂ, ಅದಕ್ಕೆ ಬೇಕಾಗುವ ಸಂಶೋಧನಾ ಕೇಂದ್ರವಿಲ್ಲ. ಇದೆಲ್ಲಕ್ಕೂ ಮುಖ್ಯವಾಗಿ ವಿವಿ ಆವರಣದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಸತಿ ನಿಲಯವಿಲ್ಲ. ಈ ಎಲ್ಲ ಮೂಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಕೇವಲ 2 ಕೋಟಿ ರೂ. ನೀಡಿ ಕೈ ತೊಳೆದುಕೊಂಡ ಸರಕಾರದ ಕ್ರಮಕ್ಕೆ ವಿವಿ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ .

ಮುತುವರ್ಜಿ ಇಲ್ಲ: ರಾಜ್ಯ ಸರ್ಕಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿವಿ ಸೇರಿದಂತೆ ಉಳಿದ ವಿವಿಗಳ ಮೇಲೆ ಮೇಲೆ ತೋರುವ ಮುತುವರ್ಜಿಯನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೇಲೆ ತೋರುತ್ತಿಲ್ಲ. ಧಾರವಾಡ ಹಾಗೂ ಗುಲ್ಬರ್ಗ ವಿವಿಗಳು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ. ಆದರೂ ಅಂತಹ ವಿವಿಗಳಿಗೆ ಹೆಚ್ಚು ಅನುದಾನ ನೀಡುತ್ತಿರುವ ರಾಜ್ಯ ಸರ್ಕಾರ ಇನ್ನು ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಬಳ್ಳಾರಿಯ ವಿಎಸ್‌ಕೆ ವಿವಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಸರಕಾರದ ಈ ಧೋರಣೆ ಜಿಲ್ಲೆ ಶಿಕ್ಷಣ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಯನ್ನು ಬಳ್ಳಾರಿಯ ರೆಡ್ಡಿ ಸಹೋದರರ ಇಚ್ಛಾಶಕ್ತಿಯಿಂದ ಈ ವಿವಿ ಸ್ಥಾಪನೆಯಾಗಿದೆ ಎಂಬ ಒಂದೇ
ಕಾರಣಕ್ಕೆ ಅನುದಾನ ಸಿಗುತ್ತಿಲ್ಲವೆ? ಅಥವಾ ಬೇರೆ ಕಾರಣಗಳಿವೆಯೇ ಎಂಬುದೂ ತಿಳಿಯಬೇಕಿದೆ.

ವಿವಿಯ ವಿವಿಧ ವಿಭಾಗಗಳಲ್ಲಿ ಒಟ್ಟು 3700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಂದ ಸಂಗ್ರಹಿಸಲಾಗುವ ಪ್ರವೇಶ, ಪರೀಕ್ಷಾ ಶುಲ್ಕ ಮತ್ತು ಸರ್ಕಾರದಿಂದ ಬರುವ ಅಲ್ಪ ಅನುದಾನದಲ್ಲೇ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪ್ರಸಕ್ತ 43 ಕೋಟಿ ರೂ. ಬೇಡಿಕೆಯಿಟ್ಟಿದ್ದು, ರಾಜ್ಯ ಸರ್ಕಾರ ಕೇವಲ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಹಿಂದಿನ ವರ್ಷಗಳಲ್ಲೂ ರಾಜ್ಯ ಸರ್ಕಾರ ನಿರೀಕ್ಷಿತ ಅನುದಾನ ಬಿಡುಗಡೆಗೊಳಿಸಿಲ್ಲ. ಹೀಗಾಗಿ ಸದ್ಯ ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕಗಳ ಹಣದಿಂದ ವಿವಿಯನ್ನು ನಡೆಸಲಾಗುತ್ತಿದೆ. 
 ಎಂ.ಎಸ್‌. ಸುಭಾಷ್‌, ಕುಲಪತಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ, ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹರಪನಹಳ್ಳಿ: ಹೈದ್ರಾಬಾದ್‌ ಕರ್ನಾಟಕ ಅನುದಾನ ಸಮರ್ಪಕ ಬಳಕೆ, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಬಳಿಗನೂರು ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ತಡೆಗಟ್ಟುವುದು...

  • ಬಳ್ಳಾರಿ: ಚಾರಿತ್ರಿಕ ಘಟನೆಯಾಗಿದ್ದ 'ಹೈದ್ರಾಬಾದ್‌ ಕರ್ನಾಟಕ ವಿಮೋಚನೆ ಚಳುವಳಿ'ಯಲ್ಲಿ ಹಿಂದು ಮತ್ತು ಮುಸಲ್ಮಾನರು ಐಕ್ಯತೆಯಿಂದ ನಿರ್ವ ಹಿಸಿದ ಪಾತ್ರ ಅತ್ಯಂತ...

  • ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದ್ದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನಿಂದ 2019-20 ಸಾಲಿನವರೆಗೆ...

  • ಕಂಪ್ಲಿ: ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ...

  • ಹೊಸಪೇಟೆ: ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಈ ಭಾಗದ ಜನರ ಎರಡು ದಶಕಗಳ ಹೋರಾಟದ ಬಳಿಕ ಕೊಟ್ಟೂರು-ಹೊಸಪೇಟೆ ರೈಲು ಸಂಚಾರಕ್ಕೆ...

ಹೊಸ ಸೇರ್ಪಡೆ