ಕಾರ್ಮಿಕರು ಗ್ರಾಮಕ್ಕೆ ಮರಳದಂತೆ ಒತ್ತಾಯ
Team Udayavani, Jun 13, 2020, 7:57 AM IST
ಕುರುಗೋಡು: ಸಮೀಪದ ಎಮ್ಮಿಗನೂರು ಗ್ರಾಮದ ಜನರು ಜಿಂದಾಲ್ ಕಂಪನಿಗೆ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದು, ಜಿಂದಾಲ್‌ನಲ್ಲಿ ಸದ್ಯ ಸೋಂಕು ಬಾಧಿತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ಗ್ರಾಮಕ್ಕೆ ಬಾರದಂತೆ ತಡೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಗ್ರಾಮಾಸ್ಥರು ಮಾತನಾಡಿ, ಎಮ್ಮಿಗನೂರು ಗ್ರಾಮದಿಂದ ಜಿಂದಾಲ್‌ಗೆ ನಿತ್ಯ 16 ಜನ ಕೆಲಸಕ್ಕೆ ಹೋಗಿ ಬರುತ್ತಿದ್ದು, ಇದರಿಂದ ಎಮ್ಮಿಗನೂರು ಗ್ರಾಮದ ಜನರಿಗೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ಜಿಂದಾಲ್ ಕಂಪನಿ ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ಬರುವ ಕೆಲಸಗಾರರನ್ನು ಗ್ರಾಮದೊಳಗೆ ಪ್ರವೇಶ ಮಾಡದಂತೆ ಕಟ್ಟುನಿಟ್ಟಿನ ಕ್ರಮವಹಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸಿಲ್ದಾರ್ ರೇಣುಕಾ ಮಾತನಾಡಿ, ಈಗಾಗಲೇ ಜಿಂದಾಲ್ ಕಂಪನಿ ಸಂಪೂರ್ಣ ಕೊರೊನಾ ಕಾಂಟೈನ್ಮೆಂಟ್ ಪ್ರದೇಶವಾಗಿದೆ. ಅಲ್ಲಿಂದ ಬರುವ ಜನರ ಬಗ್ಗೆ ನಿಗಾವಹಿಸಲು ಎಲ್ಲ ತರಹದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಿಗ ಹೊನ್ನಪ್ಪ, ಮಂಜುನಾಥ ಸೇರಿದಂತೆ ಗ್ರಾಮಸ್ಥರು ಹಾಗೂ ಯುವಕರು ಇದ್ದರು