ವಿಜಯನಗರದಲ್ಲಿ ಕುಬೇರರ ಕಣಕ್ಕಿಳಿಸಲು ಕಾಂಗ್ರೆಸ್‌ ತಂತ್ರ!

ಸಂತೋಷ್‌ಲಾಡ್‌, ಸೂರ್ಯನಾರಾಯಣ ರೆಡ್ಡಿಗೆ ಟಿಕೆಟ್‌ ಸಾಧ್ಯತೆಹ್ಯಾಟ್ರಿಕ್‌ ಗೆಲುವಿನ ಆನಂದಸಿಂಗ್‌ ಮಣಿಸಲು ತೀವ್ರ ಕಸರತು

Team Udayavani, Sep 26, 2019, 3:14 PM IST

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ವಿಜಯನಗರ ಕ್ಷೇತ್ರದಲ್ಲಿ ಮತ್ತೂಮ್ಮೆ ಎದುರಾಗಿರುವ ಉಪಚುನಾವಣೆಗಾಗಿ ಪಕ್ಷಗಳಲ್ಲಿ ಕಸರತ್ತು ಶುರುವಾಗಿದ್ದು, ಟಿಕೆಟ್‌ ಯಾರಿಗೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್‌, ಆನಂದ್‌ಸಿಂಗ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಈ ಕ್ಷೇತ್ರದಲ್ಲಿ ವಿಜಯ ಬಾವುಟ ಹಾರಿಸಲು ಉತ್ಸುಕವಾಗಿದೆ. ಹೀಗಾಗಿ ಕಾಂಗ್ರೆಸ್‌ “ಲಕ್ಶ್ಮೀ  ಕಟಾಕ್ಷವುಳ್ಳ’ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.

ಈ ಕ್ಷೇತ್ರದಲ್ಲಿ ಅನರ್ಹ ಶಾಸಕ ಬಿ.ಎಸ್‌.ಆನಂದ್‌ಸಿಂಗ್‌ ಅವರು ರಾಜಕೀಯವಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಅಲ್ಲದೇ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಮೂರು ಬಾರಿ ಯಾರೂ ಗೆಲ್ಲದ ಈ ಕ್ಷೇತ್ರದಲ್ಲಿ 2008, 2013 ಹಾಗೂ 2018ರಲ್ಲಿ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಂಗ್‌ ಮೇಲೆ ಕ್ಷೇತ್ರದ ಮತದಾರರಲ್ಲಿ ಒಂದಷ್ಟು ಅಸಮಾಧಾನವಿದ್ದರೂ, ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ಅವೆಲ್ಲವೂ ಅಳಿಸಿ ಹೋಗಿದ್ದು, ವರ್ಚಸ್ಸು ಮತ್ತಷ್ಟು ಹೆಚ್ಚಿದೆ.

ಆರ್ಥಿಕವಾಗಿಯೂ ಸದೃಢರಾಗಿರುವ ಸಿಂಗ್‌ ಅಥವಾ ಅವರ ಬೆಂಬಲಿತ ಅಭ್ಯರ್ಥಿ ವಿರುದ್ಧ ಗೆಲ್ಲಲು ಕೇವಲ ವರ್ಚಸ್ಸಷ್ಟೇ ಅಲ್ಲ ಜೊತೆಗೆ “ಲಕ್ಶ್ಮೀ ಕಟಾಕ್ಷ’ವೂ ಮುಖ್ಯ. ಆ ನಿಟ್ಟಿನಲ್ಲಿ ಕೇವಲ ಕಾರ್ಯಕರ್ತರನ್ನು ಒಗ್ಗೂಡಿಸುವುದರ ಜತೆಗೆ ಆರ್ಥಿಕವಾಗಿಯೂ ಬಲಿಷ್ಠವಾಗಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ. ಅಂತಹ ಅಭ್ಯರ್ಥಿಗಳ ಹುಡುಕಾಟ ನಡೆದಿದೆ.

ಈಗಾಗಲೇ ಮೂರು ಬಾರಿ ಜಯಗಳಿಸಿರುವ ಅನರ್ಹ ಶಾಸಕ ಆನಂದ್‌ ಸಿಂಗ್‌, ಈ ಬಾರಿಯ ಉಪಚುನಾವಣೆಯಲ್ಲೂ ಅಷ್ಟು ಸುಲಭವಾಗಿ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ಅಲ್ಲದೇ ಗೆಲುವಿಗಾಗಿ ಅಗತ್ಯವಾಗಿರುವ ಹಣ ಖರ್ಚು ಮಾಡುವಲ್ಲೂ ಹಿಂದೆ ಬೀಳಲ್ಲ. ಹೀಗಾಗಿ ಅವರನ್ನು ಮಣಿಸೋದು ಅಷ್ಟು ಸುಲಭವೂ ಅಲ್ಲ ಎಂಬ ಮಾತುಗಳು ದಟ್ಟವಾಗಿಯೇ ಕೇಳಿಬರುತ್ತಿವೆ. ಹೀಗಾಗಿ ಕಾಂಗ್ರೆಸ್‌ನಿಂದ ಸ್ಪ ರ್ಧಿಸುವ ಅಭ್ಯರ್ಥಿಗಳು ರಾಜಕೀಯ ತಂತ್ರಗಾರಿಕೆಯೊಂದಿಗೆ ಆರ್ಥಿಕವಾಗಿಯೂ ಸಡ್ಡು ಹೊಡೆದಾಗ ಮಾತ್ರ ಗೆಲುವು ಸಾಧ್ಯ. ಆದ್ದರಿಂದ ಅಂತಹ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು “ಕೈ’ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ.

ಲಾಡ್‌ ಚಿರಪರಿಚಿತ: ಈ ನಿಟ್ಟಿನಲ್ಲಿ ಮಾಜಿ ಸಚಿವ ಸಂತೋಷ್‌ ಲಾಡ್‌, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಕಣಕ್ಕಿಳಿಸಿದರೆ ಸಿಂಗ್‌ಗೆ ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಲಾಡ್‌ ವಿಜಯಗರ ಕ್ಷೇತ್ರಕ್ಕೆ ಚಿರಪರಿಚಿತರು. 2004ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾಗ ಹೊಸಪೇಟೆಯ ಕೆಲ ಗ್ರಾಮಗಳು ಆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಜತೆಗೆ ಮೂಲತಃ ಗಣಿಉದ್ಯಮಿಯೂ ಆಗಿದ್ದು, ಒಂದಷ್ಟು ವರ್ಚಸ್ಸು ಇದೆ. ಜತೆಗೆ ಆರ್ಥಿಕವಾಗಿಯೂ ಕುಬೇರರಾಗಿದ್ದು, ಚುನಾವಣೆಯಲ್ಲಿ ಖರ್ಚು ಮಾಡುವ ಸಾಮರ್ಥ್ಯವಿದೆ. ಆದ್ದರಿಂದ ಕಾಂಗ್ರೆಸ್‌ ಅವರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ರೆಡ್ಡಿಗೂ ಉಂಟು ಲಿಂಕ್‌: ಇನ್ನು ಕಾಂಗ್ರೆಸ್‌ನ ಮತ್ತೂಬ್ಬ ಪ್ರಭಾವಿ ಮುಖಂಡ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಹೆಸರು ಸಹ ಜೋರಾಗಿ ಕೇಳಿಬರುತ್ತಿದೆ. ಇವರಿಗೆ ಹೊಸಪೇಟೆಯೊಂದಿಗೆ ಉತ್ತಮ ನಂಟಿದೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ವಿಚಾರವಾಗಿ ಅನರ್ಹ ಶಾಸಕ ಆನಂದ್‌ಸಿಂಗ್‌ಗೆ ಬೆಂಬಲ ಸೂಚಿಸಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಸೂರ್ಯ ನಾರಾಯಣರೆಡ್ಡಿ ಆಪ್ತರಲ್ಲಿ ಒಬ್ಬರು. ಅಲ್ಲದೇ ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಇವರನ್ನು ಕಣಕ್ಕಿಳಿಸಿದರೆ ತೀವ್ರ ಪೈಪೋಟಿ ನೀಡಲು ಸಾಧ್ಯ ಎಂಬ ಚರ್ಚೆಯೂ ನಡೆದಿದೆ. ಈ ಮಧ್ಯೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಮುಖಂಡರಾದ ಎಚ್‌.ಎನ್‌.ಎಫ್‌. ಇಮಾಮ್‌ ನಿಯಾಜಿ, ಮಾಜಿ ಶಾಸಕ ಸಿರಾಜ್‌ ಶೇಖ್‌ ಸಹ ತೆರೆಮರೆಯ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಆನಂದಸಿಂಗ್‌ರ ಆನಂದ ಕಸಿಯುವ ನಿಟ್ಟಿನಲ್ಲಿ ಕಾಂಗ್ರೆಸ್‌
ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದು ಪ್ರಬಲ ಪೈಪೋಟಿ
ನೀಡಲು ಸಜ್ಜಾಗುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ