ಹಸಿರಾಗಲಿದೆ ಗುಜನಾಳ ಅರಣ್ಯ ವಲಯ

Team Udayavani, Jun 13, 2019, 2:33 PM IST

ಬೆಟಗೇರಿ: ಗುಜನಾಳ ಅರಣ್ಯ ವಲಯದ ಸಸ್ಯ ಪಾಲನಾ ಕೇಂದ್ರದಲ್ಲಿ ಹಚ್ಚ ಹಸಿರಾಗಿ ಪಾಲನೆಯಲ್ಲಿರುವ ವಿವಿಧ ಜಾತಿಯ ಸಸಿಗಳು.

ಅಡಿವೇಶ ಮುಧೋಳ
ಬೆಟಗೇರಿ:
ಈಗಾಗಲೇ ಮುಂಗಾರು ಮಳೆ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಗುಜನಾಳ ಅರಣ್ಯ ವಲಯದಲ್ಲಿ ಸಸಿ ನೆಡಲು 3.40ಲಕ್ಷ ಸಸಿಗಳನ್ನು ಪೋಷಣೆ ಮಾಡಲಾಗಿದೆ.

ರೈತರಿಗೆ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ಶ್ರೀಗಂಧ, ರಕ್ತ ಚಂದನ ಸೇರಿದಂತೆ ಬೇಡಿಕೆಯ ಸಸಿ ಬೆಳೆಯಲು ಸಸಿ ಪಾಲನಾ ಕೇಂದ್ರದಲ್ಲಿ ಈ ಬಾರಿ ಸಸಿಗಳನ್ನು ಹೆಚ್ಚೆಚ್ಚು ಬೆಳೆಸಲಾಗಿದೆ.

ಗೋಕಾಕ ತಾಲೂಕಿನಿಂದ ಸಮೀಪದ ಶಿರೂರ (ಡ್ಯಾಂ) ಪಕ್ಕದಲ್ಲಿರುವ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ 3.40ಲಕ್ಷ ಸಸಿಗಳನ್ನು ಪೋಷಣೆ ಮಾಡಲಾಗಿದೆ. ಗುಜನಾಳ ವಲಯದಲ್ಲಿ ಕಳೆದ ಬಾರಿ ಸುಮಾರು 2 ಲಕ್ಷ ಸಸಿಗಳನ್ನು ಪೋಷಿಸಿ ನೆಡಲಾಗಿತ್ತು.

ಅರಣ್ಯ ಕೃಷಿಯಿಂದ ಅಧಿಕ ಆದಾಯ: ಶ್ರೀಗಂಧ, ರಕ್ತಚಂದನ ಕೃಷಿಯಿಂದ ರೈತರಿಗೆ ಅಧಿಕ ಲಾಭವಿದ್ದು, ಗುಜನಾಳ ವಲಯದ ಸಸ್ಯಪಾಲನಾಲಯದಲ್ಲಿ 40ಸಾವಿರ ಶ್ರೀಗಂಧ ಹಾಗೂ 10ಸಾವಿರ ರಕ್ತ ಚಂದನ ಸಸಿಗಳನ್ನು ಬೆಳೆಸಿದ್ದಾರೆ. ಇವುಗಳನ್ನು ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಸಸಿಗಳ ಅಳತೆಗೆ ಅನುಗುಣವಾಗಿ 1 ರೂ. ಮತ್ತು 3 ರೂ. ಗೆ ಒಂದೊಂದು ಸಸಿಯನ್ನು ವಿತರಿಸಲಾಗುತ್ತಿದೆ.

ಮೂರು ವರ್ಷಗಳ ಕಾಲ ಸಸಿ ನೆಟ್ಟು ಸಮರ್ಪಕವಾಗಿ ಪೋಷಣೆ ಮಾಡಿದ ರೈತರಿಗೆ ಮೊದಲ ಮತ್ತು ಎರಡನೆ ವರ್ಷದಲ್ಲಿ ತಲಾ ಒಂದು ಸಸಿಗೆ 30 ರೂ. ಮತ್ತು ಮೂರನೇ ವರ್ಷದಲ್ಲಿ 40 ರೂ. ಸೇರಿದಂತೆ ಒಟ್ಟು 100 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಈಗಾಗಲೇ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಸಸಿ ನೆಡುತ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ರೈತರು ಶ್ರೀಗಂಧ, ರಕ್ತ ಚಂದನ ಸಸಿಗಳನ್ನು ನೆಡಲು ಮುಂದಾಗಿ ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗುಜನಾಳ ಅರಣ್ಯ ಇಲಾಖೆ ಅಧಿಕಾರಿ ಸಂಗಮೇಶ ಪ್ರಭಾಕರ ತಿಳಿಸಿದ್ದಾರೆ.ಸಸಿಗಳ ಪಾಲನೆ: ಗುಜನಾಳ ವಲಯ ಅರಣ್ಯ ಇಲಾಖೆಯು ಶಿರೂರ (ಡ್ಯಾಂ) ಪಕ್ಕದಲ್ಲಿರುವ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ ಹುಲಗಲ, ತಪಸಿ, ಸಿಮರೂಬಾ, ಅಂಜನ, ಕ್ಯಾಸೋಡಾ, ಬೇವು, ಆಲ, ಅರಳಿ, ಜಾಂಬಳ ಗಿಡ ಬೆಳೆಸಲಾಗುತ್ತದೆ. ಇದಲ್ಲದೆ ಅಗೇವಾ, ಬೇಡ್ಸ್‌, ರಕ್ತ ಚಂದನ, ಗೋಣಿ, ಬಸರಿ, ಅತ್ತಿ, ಬದಾಮ, ಸಾಗವಾನಿ, ಕಾಜು, ಹುಣಸೆ, ಮಾವು, ನೆಲ್ಲಿ, ಕರಿಬೇವು, ಶ್ರೀಗಂಧ, ನುಗ್ಗೆ, ನಿಂಬೆ, ಐಲಂತಸ್‌, ಅಂಟವಾಳ, ಬಾಗೆ, ಕಮರಾ, ಮುತ್ತುಗಾ, ಬಿಲ್ವಾರ ಸೇರಿದಂತೆ ಮುಂತಾದ ಜಾತಿಯ ಸಸಿಗಳು ಬೆಳೆದು ನಿಂತಿವೆ. ಕಾಡು ಜಾತಿಯ ಸಸ್ಯಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಈ ಜಾತಿಯ ಸಸಿಗಳನ್ನು ಹೆಚ್ಚಾಗಿ ಬೆಳೆಸಲಾಗಿದೆ.

ಪ್ರಸಕ್ತ ವರ್ಷ ಹೆಚ್ಚಿನ ಸಸಿ ನೆಡಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ಶ್ರೀಗಂಧ, ರಕ್ತಚಂದನ ಸೇರಿದಂತೆ ಬೇಡಿಕೆ ಇರುವ ಸಸಿಗಳನ್ನು ಬೆಳೆಸಲು ರೈತರು ಮುಂದೆ ಬರಬೇಕು. ಸಸಿ ಬೆಳೆಸಿದ ರೈತರಿಗೆ ಕೃಷಿ ಪ್ರೋತ್ಸಾಹ ಯೋಜನೆಯಡಿ ಸರಕಾರ ಪ್ರೋತ್ಸಾಹ ಧನ ನೀಡುತ್ತದೆ. ರೈತರು ಈ ಯೋಜನೆಯ ಲಾಭದ ಜೊತೆಗೆ 15ರಿಂದ 20ವರ್ಷಗಳ ನಂತರ ಇನ್ನೂ ಹೆಚ್ಚಿನ ಲಾಭ ಪಡಯಬಹುದಾಗಿದೆ.
ಸಂಗಮೇಶ ಪ್ರಭಾಕರ,
ವಲಯ ಅರಣ್ಯಾಧಿಕಾರಿ ಗುಜನಾಳ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ