ಭದ್ರಾವತಿಯಲ್ಲಿ ನಿಲ್ಲದ ಮಳೆ ರಗಳೆ!

ಅಪಾಯದಂಚಲ್ಲಿ ಹೊಸೂರು ಕೆರೆ- ಸಂಚಾರ ಅಸ್ತವ್ಯಸ್ತ •ಜನರಲ್ಲಿ ತೀವ್ರ ಆತಂಕ

Team Udayavani, Aug 10, 2019, 3:13 PM IST

ಭದ್ರಾವತಿ: ಭದ್ರಾನದಿ ಮಧ್ಯದಲ್ಲಿರುವ ಶ್ರೀ ಸಂಗಮೇಶ್ವರ ಮಂಟಪ ನೀರಿನಲ್ಲಿ ಮುಳುಗಿರುವುದು.

ಭದ್ರಾವತಿ: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಕೆರೆ, ಕಾಲುವೆ,ಹಳ್ಳ, ಚರಂಡಿಗಳು ತುಂಬಿ ಹರಿಯುತ್ತಾ ಭದ್ರಾನದಿಯನ್ನು ಸೇರುವುದರ ಜೊತೆಗೆ ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಗಂಜಿಕೇಂದ್ರ ಆರಂಭ

ಭದ್ರಾನದಿ ತುಂಬಿ ಹರಿಯುತ್ತಿರುವ ಕಾರಣ ನದಿಯ ಸಮೀಪದ ಕವಲುಗುಂದಿ ಬಿಸಿಎಂ ಇಲಾಖೆಯ ಹಾಸ್ಟೆಲ್ ಹಿಂಭಾಗದ 5 ಮನೆಗಳು ನೀರಿನಿಂದ ಜಲಾವೃತಗೊಂಡಿದ್ದು ಅಲ್ಲಿದ್ದ 5 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಹಿಳೆಯರಿಗೆ ಆ ಪ್ರದೇಶದ ಹಾಸ್ಟೆಲ್ನಲ್ಲಿ ಆಶ್ರಯ ನೀಡಿ ಊಟದ ವ್ಯವಸ್ಥೆ ಕಲ್ಪಿಸಿದ್ದರೆ, ಪುರುಷರಿಗೆ ಹುತ್ತಾ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಜಿಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಉಳಿದಂತೆ ಕೂಡ್ಲಿಗೆರೆ, ಗುಡ್ಡದ ನೇರಳೆಕೆರೆ ಮುಂತಾದ ಬಹುತೇಕ ಗ್ರಾಮಗಳಲ್ಲಿ ಕೋಡಿ ಹರಿದು ಬೆಳೆಗಳಿಗೆ ಹಾನಿಯಾಗಿದೆ.

ನಗರಸಭೆ ವ್ಯಾಪ್ತಿಗೆ ಸೇರಿದ ಹೊಸ ಸಿದ್ದಾಪುರ ಹಾಗು ಹಳೇಸಿದ್ದಾಪುರ ಮಾರ್ಗ ಮಧ್ಯೆ ಇರುವ ಕೆರೆ ಕೋಡಿ ಮಳೆಯ ತೀವ್ರತೆಗೆ ಕಸಿದು ಬಿದ್ದ ಪರಿಣಾಮ ಡಾಂಬರು ರಸ್ತೆ ಕುಸಿದು ರಸ್ತೆ ಸಂಕ್ಲಿಪುರ, ರಾಮಕೊಪ್ಪ ಗ್ರಾಮಸ್ಥರಿಗೆ ಸಂಚಾರಕ್ಕೆ ಸಂಪೂರ್ಣ ಸ್ಥಗಿತಗೊಂಡು ಜನರ ಸಂಚಾರಕ್ಕೆ ತೊಂದರೆಯಾಗಿದೆ. ಆ ಪ್ರದೇಶದ ಜನರ ಸಂಚಾರಕ್ಕೆ ಮತ್ತು ಹೆಚ್ಚಿನ ಅನಾಹುತ ತಡೆಯಲು ಪೊಲೀಸರು ಹಾಗು ತಾಲೂಕು ಆಡಳಿತ ಸಮರೋಪಾದಿಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದಾರೆ.

ಹೊಸ ಸಿದ್ದಾಪುರ ಬೈಪಾಸ್‌ ರಸ್ತೆಯ ಕೆರೆಯ ಕೋಡಿ ಹರಿದು ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಹೊಸೂರು ಕೆರೆ ಅಪಾಯದ ಹಂಚಿನಲ್ಲಿದ್ದರೆ, ಚಾನಲ್ ತುಂಬಿ ಹರಿಯುತ್ತಿದ್ದು ಸೇತುವೆ ಮೇಲೆ ನೀರು ಹರಿದು ಪಾದಚಾರಿ ಹಾಗೂ ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿದೆ. ನಗರಸಭೆ ಪೌರಾಯುಕ್ತ ಮನೋಹರ್‌ ಹಾಗು ಪೊಲೀಸ್‌ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉಳಿದಂತೆ ನಗರ ಪ್ರದೇಶಗಳ ಮನೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ನಗರಸಭೆ ಹಾಗೂ ತಾಲೂಕು ಆಡಳಿತ ಸಮರೋಪಾಯಲ್ಲಿ ಕಾರ್ಯಪ್ರವೃತ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲಾ ಕಟ್ಟಡ ಕುಸಿತ: ತಾಲೂಕಿನ ತಡಸ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹಾಗೂ ಗೋಡೆ ಸಂಪೂರ್ಣ ಕುಸಿದು ಮೇಜು, ಕುರ್ಚಿ ಹಾಗು ಕೆಲವು ಸಾಮಗ್ರಿಗಳು ಹಾಳಾಗಿದ್ದು ಕೆಲವು ಪರಿಕರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಶಾಲೆಗಳಿಗೆ ರಜೆ ಇರುವುದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.

ಕೆಲಕ್ಷಣ ಬಿಸಿಲು- ಪುನಃ ಮಳೆ: ಶುಕ್ರವಾರ ಬೆಳಗ್ಗೆ ಮಳೆ ಸ್ವಲ್ಪ ನಿಂತು ಕೆಲ ನಿಮಿಷಗಳಕಾಲ ಬಿಸಿಲು ಕಾಣಿಸಿಕೊಂಡಿತು ಜನರು ಇನ್ನು ಮಳೆ ಬರುವುದಿಲ್ಲ ಬಿಸಿಲು ಬಂದಿದೆ ಎಂದು ನಿಟ್ಟುಸಿರು ಬಿಟ್ಟರು. ಆದರೆ ಜನರ ನಿರೀಕ್ಷೆ ಹುಸಿಯಾಗಿ ಕೆಲವೇ ನಿಮಿಷಗಳಲ್ಲಿ ಪುನಃ ಮಳೆ ಆರಂಭಗೊಂಡು ಜನರಲ್ಲಿ ಮಳೆಯ ತೀವ್ರ ಆತಂಕ ಹೆಚ್ಚಿಸಿದೆ.

ಧರೆಗುರುಳಿದ ವಿದ್ಯುತ್‌ ಕಂಬ: ಬಾರಂದೂರು ಸಮೀಪದ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮಳೆಯ ತೀವ್ರತೆಗೆ 3 ವಿದ್ಯುತ್‌ ಕಂಬಗಳು ಬಿದ್ದಿವೆ. ವಿಷಯ ತಿಳಿದ ಕೂಡಲೇ ತಹಶೀಲ್ದಾರ್‌ ಸೋಮಶೇಖರ್‌ ಸ್ಥಳಕ್ಕೆ ತಂಡದೊಂದಿಗೆ ತೆರಳಿ ಮೆಸ್ಕಾಂ ಇಲಾಖೆಗೆ ತಿಳಿಸಿದ್ದಾರೆ. ಮೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮ ಕೈಗೊಂಡರು.

ಮಳೆಯ ಪ್ರಮಾಣದಲ್ಲಿ ಏರಿಳಿತ: ತಾಲೂಕಿನಲ್ಲಿ ಮಳೆಯ ತೀವ್ರತೆ ಬಗ್ಗೆ ಪತ್ರಿಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್‌ ಸೋಮಶೇಖರ್‌, ಮಳೆಯ ಪ್ರಮಾಣದಲ್ಲಿ ಏರಿಳಿಕೆ ಕಾಣುತ್ತಿದ್ದರೂ ಸಹ ಯಾವುದನ್ನೂ ನಿಖರವಾಗಿ ಹೇಳಲಾಗುತ್ತಿಲ್ಲ. ತಾಲೂಕು ಆಡಳಿತ, ನಗರಸಭೆ ಆಡಳಿತ ಎಲ್ಲರೂ ಒಂದಾಗಿ ಮಳೆಯ ಹಾನಿಗೊಳಗಾದವರಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇವೆ. ಗುರುವಾರ ಒಂದೇ ದಿನಕ್ಕೆ ತಾಲೂಕಿನಲ್ಲಿ 179 ಮಿಮೀ ಮಳೆಯಾಗಿದ್ದು ಭದ್ರಾನದಿಯಲ್ಲಿ ಏರುತ್ತಿರುವ ನೀರಿನ ಮಟ್ಟವೇ ಮಳೆಯ ತೀವ್ರತೆ ಎಷ್ಟಿದೆ ಎಂದು ತೋರಿಸುತ್ತದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ