ನಗರಸಭೆ ಮಾರುಕಟ್ಟೆ ಅವ್ಯವಸ್ಥೆ ಆಗರ!

•ನಾಯಿ, ಹಂದಿ, ಬಿಡಾಡಿ ದನಗಳ ಆಶ್ರಯ ತಾಣವಾಗಿ ಪರಿವರ್ತನೆಯಾದ ಮಾರುಕಟ್ಟೆ

Team Udayavani, May 15, 2019, 12:48 PM IST

ಭದ್ರಾವತಿ: ಖಾಲಿ ಉಳಿದಿರುವ ಮಾರುಕಟ್ಟೆ ಮಳಿಗೆಗಳು.

ಭದ್ರಾವತಿ: ಹಳೇನಗರದ ಬಸವೇಶ್ವರ ಟಾಕೀಸ್‌ ಎದುರಿಗಿರುವ ನಗರಸಭೆಗೆ ಸೇರಿದ ಮಾರುಕಟ್ಟೆಯು ಮೂಲ ಸೌಲಭ್ಯವಿಲ್ಲದೇ ಅವ್ಯವಸ್ಥೆಗಳ ಆಗರವಾಗಿ ನಾಯಿ, ಹಂದಿ, ಬಿಡಾಡಿ ದನಗಳ ಆಶ್ರಯತಾಣವಾಗಿದೆ.

ಈ ಮಾರುಕಟ್ಟೆ ಬಹಳ ಹಳೇಮಾರುಕಟ್ಟೆಯಾಗಿದ್ದು ಅಲ್ಲಿ ಕೆಲವು ಹಳೇ ಮಳಿಗೆಗಳನ್ನು ಹಾಗೆಯೇ ಉಳಿಸಿಕೊಂಡು ಪಕ್ಕದ ಜಾಗದಲ್ಲಿ ಕಳೆದ ಸುಮಾರ 10ವರ್ಷಗಳ ಹಿಂದೆ ವ್ಯಾಪಾರದ ಉದ್ದೇಶಕ್ಕಾಗಿ ಕೇವಲ ಮೇಲ್ಛಾವಣೆ ಹಾಕಿರುವ ಮಳಿಗೆಗಳನ್ನು ನಗರಸಭೆ ನಿರ್ಮಿಸಿತು.

ಈ ಮಾರುಕಟ್ಟೆಯಲ್ಲಿನ ಮಳಿಗೆಗಳಲ್ಲಿ ಹೂವೂ, ತರಕಾರಿ, ಮದ್ಯ ಮಾರಾಟದ ಅಂಗಡಿ, ದಿನಸಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಅನೇಕ ರೀತಿ ವಸ್ತುಗಳ ಮಾರಾಟದ ಅಂಗಡಿಗಳು ಇವೆ

ಅತೀ ಕಡಿಮೆ ನೆಲಬಾಡಿಗೆ: ಇಲ್ಲಿ ವ್ಯಾಪಾರಕ್ಕೆ ಮಳಿಗೆಯನ್ನು ಕೇವಲ 50-60 ರೂ.ಗಳಿಗೆ ನೆಲಬಾಡಿಗೆಗೆ ನೀಡಲಾಗಿದೆ. ಈ ರೀತಿ ಕಡಿಮೆ ನೆಲಬಾಡಿಗೆಗೆ ಪಡೆದ ಕೆಲವು ವ್ಯಾಪಾರಿಗಳು ದಿನಕ್ಕೆ ಸಾವಿರಾರು ರೂ. ವ್ಯಾಪರ ನಡೆಸುತ್ತಾ ಆರಾಮವಾಗಿದ್ದರೆ ಮತ್ತೆ ಹಲವರು ತಾವು ಪಡೆದೆ ಮಳಿಗೆಗಳನ್ನು ಬೇರೆಯವರಿಗೆ ಒಳಬಾಡಿಗೆಗೆ ನೀಡಿ ಆರಾಮವಾಗಿ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.

ಉಪಬಾಡಿಗೆದಾರರೇ ಹೆಚ್ಚು: ನಗರಸಭೆ ಸರ್ಕಾರಿ ನಿಯಮದ ಪ್ರಕಾರ ನಗರಸಭೆಗೆ ಸೇರಿದ ಮಳಿಗೆಗಳನ್ನು ಬಾಡಿಗೆ ಪಡೆದ ವ್ಯಕ್ತಿಗಳು ಅದನ್ನು ಒಳಬಾಡಿಗೆಗೆ ನೀಡುವಂತಿಲ್ಲ. ಆದರೆ, ಇಲ್ಲಿ ಸರಿಸುಮಾರು 29 ಮಳಿಗೆಗಳು ಇದ್ದು ಅವುಗಳಲ್ಲಿ ಬೆರಳೆಣಿಕೆಯಷ್ಟು ವ್ಯಾಪಾರಸ್ಥರು ಮಾತ್ರ ನಗರಸಭೆಯಿಂದ ನೇರವಾಗಿ ಬಾಡಿಗೆಗೆ ಮಳಿಗೆ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಉಳಿದಂತೆ ಬಹುತೇಕ ಮಳಿಗೆಗಳಲ್ಲಿನ ವ್ಯಾಪಾರಸ್ಥರು ಉಪಬಾಡಿಗೆದರರಾಗಿ ಅಲ್ಲಿ ವ್ಯಾಪಾರ ನಡೆಸುತ್ತಿದ್ದಾರೆಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ.

ಅತಿ ಕಡಿಮೆ ನೆಲ ಬಾಡಿಗೆಗೆ ನೀಡಿರುವ ಈ ಮಾರುಕಟ್ಟೆ ಮಳಿಗೆಗಳ ವ್ಯವಹಾರ ನಗರಸಭೆ ಅಧಿಕಾರಿಗಳಿಗೆ ಗೊತ್ತಿದ್ದರೂ ಅಂತಹವರ ವಿರುದ್ಧ ನಗರಸಭೆ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ.

ಖಾಸಗಿ ಸ್ವತ್ತಿನಂತೆ ಬಳಕೆ: ರಾಜಕಾರಣಿಗಳ ಬೆಂಬಲ ಹೊಂದಿರುವ ಇಲ್ಲಿನ ಕೆಲವು ವ್ಯಾಪಾರಸ್ಥರು ಕೆಲವು ಮಳಿಗೆಗಳನ್ನು ಕೆಲವೇ ಕುಟುಂಬದ ಸದಸ್ಯರು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಒಂದು ರೀತಿ ಈ ಮಾರುಕಟ್ಟ ಹೆಸರಿಗೆ ನಗರಸಭೆ ಸ್ವತ್ತಾಗಿದ್ದರೂ ಕಲವರಿಗೆ ಖಾಸಗಿ ಸ್ವತ್ತಿನ ರೀತಿ ಬಳಕೆಯಾಗುತ್ತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅಧಿಕಾರಿಗಳಿಗೇ ಧಮಕಿ: ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ ನಿಷೇಧಿಸಿರುವ ಕಾರಣ ನಗರದಲ್ಲಿ ಉಳಿದ ಅಂಗಡಿ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಕವರ್‌ ಬದಲು ಪೇಪರ್‌ ಕವರ್‌ ಮತ್ತು ಬಟ್ಟೆಕವರ್‌ ಬಳಸುತ್ತಿದ್ದಾರೆ. ಆದರೆ, ನಗರಸಭೆಗೆ ಸೇರಿದ ಈ ಮಾರುಕಟ್ಟೆಯಲ್ಲಿ ಕೆಲವರು ವ್ಯಾಪಾರಕ್ಕೆ ಪ್ಲಾಸ್ಟಿಕ್‌ ಕವರ್‌ ಬಳಸುತ್ತಿದ್ದರು. ಈ ಬಗ್ಗೆ ಇತ್ತೀಚೆಗೆ ನಗರಸಭೆ ಆಯುಕ್ತರು ಇಲ್ಲಿನ ಮಳಿಗೆಗೆ ಭೇಟಿ ನೀಡಿ ಪ್ಲಾಸ್ಟಿಕ್‌ ಕವರ್‌ ಬ್ಯಾನ್‌ ಆದರೂ ಅದನ್ನು ಬಳಸುತ್ತಿದ್ದ ವ್ಯಾಪಾರಿಯನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಆ ವ್ಯಾಪಾರಿ ಅವಾಜ್‌ ಹಾಕಿದ್ದಾನೆ ಎನ್ನಲಾಗಿದೆ.

ವಾಹನ ನಿಲುಗಡೆ ಸ್ಥಳ: ಮಾರುಕಟ್ಟೆಯಲ್ಲಿ ಖಾಲಿ ಬಿದ್ದಿರುವ ಹಲವು ಮಳಿಗೆಗಳಲ್ಲಿ ಕೆಲವು ನಾಯಿ, ಹಂದಿ, ಬಿಡಾಡಿ ದನಗಳ ಆಶ್ರಯತಣವಾಗಿದ್ದರೆ ಮತ್ತೆ ಕೆಲವು ಮಳಿಗೆಗಳು ಹಲವರ ವಾಹನ ನಿಲುಗಡೆಗಳಿಗೆ ಬಳಕೆಯಾಗುತ್ತಿದೆ.

ಅಕ್ರಮ ಚಟುವಟಿಕೆಯ ಆಶ್ರಯತಾಣ: ಇಲ್ಲಿ ರಾತ್ರಿ ಯವುದೇ ದೀಪ, ಕಾವಲಿನ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ಕೆಲವರಿಗೆ ಅಕ್ರಮ ಚಟುವಟಿಕೆ ನಡೆಸಲು ಆಶ್ರಯತಣವಗಿ ಬಳಕೆಯಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಮಳಿಗೆ ಖಾಲಿಯಿದ್ದರೂ ಬೀದಿ ಬದಿಯಲ್ಲೇ ವ್ಯಾಪಾರ:
ಮಾರುಕಟ್ಟೆಯಲ್ಲಿ ಬಹುತೇಕ ಮಳಿಗೆಗಳು ಖಾಲಿಯಿದ್ದರೂ ಹಣ್ಣು, ಹೂವು, ಸೊಪ್ಪು ಮುಂತಾದ ವಸ್ತುಗಳನ್ನು ಬಹುತೇಕ ವ್ಯಾಪಾರಿಗಳು ರಸ್ತೆಬದಿಯಲ್ಲೇ ಇಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅವರ ಪ್ರಕಾರ ಮಾರುಕಟ್ಟೆ ಒಳಗೆ ಇರುವ ಮಳಿಗೆಗಳಿಗೆ ಜನ ಬರುವುದಿಲ್ಲ. ರಸ್ತೆಗೆ ಸಮೀಪವಿರುವ ಮಳಿಗೆಗಳ ವ್ಯಾಪಾರಸ್ತರಿಗೆ ಮಾತ್ರ ವ್ಯಾಪಾರವಾಗುತ್ತದೆ. ಆದ್ದರಿಂದ ನಮಗೆ ರಸ್ತೆ ಬದಿಯ ವ್ಯಾಪಾರವೇ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸುತ್ತಾರೆ.

ಸುಸಜ್ಜಿತ ಮಾರುಕಟ್ಟೆ ಅಗತ್ಯ
ಇಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡದೇ ಇರುವುದರಿಂದ ಕೆಲವರು ಇಲ್ಲಿ ವ್ಯಾಪಾರಕ್ಕೆ ಮಳಿಗೆಗೆ ಬಾರದೆ ಅವುಗಳು ಖಾಲಿ ಉಳಿದಿವೆ. ಊರಿನ ಮತ್ತು ನಾಗರಿಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹೂವು, ಹಣ್ಣು, ತರಕಾರಿ, ದಿನಸಿ ಮುಂತಾದ ವಸ್ತುಗಳ ಮಾರಾಟಕ್ಕೆ ಪ್ರತ್ಯೇಕ, ಪ್ರತ್ಯೇಕವಾದ ವಿಭಾಗಗಳನ್ನು ಮಾಡಬೇಕು. ನಗರಸಭೆಗೆ ಈ ಮಾರುಕಟ್ಟೆ ಆಸ್ತಿ ಉತ್ತಮ ವರಮಾನವಾಗಲು ಮತ್ತು ನಾಗರಿಕರಿಗೆ ಸುಸಜ್ಜಿತ ಮಾರುಕಟ್ಟೆಸೌಲಭ್ಯ ಲಭ್ಯವಾಗಲು ಇಲ್ಲಿ ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಅಗತ್ಯವಿದೆ. ಕಡಿಮೆ ದರದ ನೆಲಬಾಡಿಗೆಗೆ ಇವುಗಳನ್ನು ನೀಡಿರುವುದರಿಂದ ನಗರಸಭೆಗೆ ಆದಾಯ ಸಮರ್ಪಕವಾಗಿ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಇಚ್ಛಾಶಕ್ತಿಯಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ.
ಮನೋಹರ್‌, ನಗರಸಭೆ ಆಯುಕ್ತ.

ಕೆ.ಎಸ್‌. ಸುಧೀಂದ್ರ ಭದ್ರಾವತಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ