ತ್ಯಾಗ-ಬಲಿದಾನದ ಸಂಕೇತ ಬಕ್ರೀದ್‌

ಪ್ರವಾದಿ ಇಬ್ರಾಹಿಂ ಅವರ ಸ್ಮರಣೆಗಾಗಿ ಮುಸ್ಲಿಮರಿಂದ ಹಬ್ಬ ಆಚರಣೆ

Team Udayavani, Aug 12, 2019, 10:31 AM IST

ಭಾಲ್ಕಿ: ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುವ ಪಟ್ಟಣದ ಮದೀನಾ ಮಸೀದಿ.

ಭಾಲ್ಕಿ: ಮುಸ್ಲೀಮರು ಆಚರಿಸುವ ಈದ್‌ ಉಲ್ ಅದ್‌ಹಾ ‘ಬಕ್ರೀದ್‌’ ತ್ಯಾಗ ಬಲಿದಾನದ ಸಂಕೇತದ ಹಬ್ಬವಾಗಿದೆ.

ಪಟ್ಟಣದಲ್ಲಿ ಬಕ್ರೀದ್‌ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಪಟ್ಟಣದ ಜನಸಂಖೆಯಲ್ಲಿಯ ಶೇ.15ರಷ್ಟಿರುವ ಮುಸ್ಲೀಂ ಸಮುದಾಯದವರು, ತಮ್ಮ ಧರ್ಮ ಗ್ರಂಥ ಕುರಾನ್‌ನ ಅನುಸಾರ ಬಕ್ರೀದ್‌ ಹಬ್ಬವನ್ನು ಆಚರಿಸುತ್ತಾರೆ. ಸೋಮವಾರ ನಡೆಯಲಿರುವ ಬಕ್ರೀದ್‌ ಹಬ್ಬದಂದು ಪಟ್ಟಣದ ಎಲ್ಲಾ ಮುಸ್ಲೀಂ ಸಮುದಾಯದವರು ಪಟ್ಟಣದ ಹೊರ ವಲಯದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿರಿಯರು, ಕಿರಿಯರು, ಮಕ್ಕಳು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೌಲಿಗಳಿಂದ ಖುತ್ಬಾ (ಪ್ರವಚನ) ಕಾರ್ಯಕ್ರಮ ನಡೆಯುತ್ತದೆ. ನಂತರ ಒಬ್ಬರಿಗೊಬ್ಬರು ಹಬ್ಬದ ಸುಭಾಷಯ ಹೇಳುತ್ತಾ, ನೆಂಟರಿಷ್ಟರನ್ನು ಹಬ್ಬಕ್ಕೆ ಕರೆದು ಹಬ್ಬದ ಊಟ ಮಾಡಿಸುತ್ತಾರೆ. ರಂಜಾನ್‌ ನಂತರದ ಪ್ರತಿಷ್ಠಿತ ಹಬ್ಬ ಅವರಿಗೆ ಈ ಬಕ್ರೀದ್‌ ಆಗಿದೆ. ಹೀಗಾಗಿ ಬಕ್ರೀದ್‌ ಹಬ್ಬದಂದು ಮುಸ್ಲೀಂ ಸಮುದಾಯದವರು ಅತಿಥಿ ದೇವೋಭವ ಎನ್ನುವ ರೀತಿಯಲ್ಲಿ, ತಮ್ಮ ತಮ್ಮ ಮನೆಗೆ ಅತಿಥಿಗಳನ್ನು ಕರೆದು ಹಬ್ಬದ ಊಟ ಬಡಿಸಿ, ಸಂತಸ ವ್ಯಕ್ತಪಡಿಸುತ್ತಾರೆ.

ಬಕ್ರೀದ್‌ ಹಬ್ಬವು ಇಸ್ಲಾಮ್‌ನ ರೋಚಕ ಇತಿಹಾಸ ಸ್ಮರಿಸುವ ಹಬ್ಬವಾಗಿದೆ. ಹಜ್‌ ಯಾತ್ರೆಗೆ ಸೌದಿ ಅರೇಬಿಯಾದ ಮೆಕ್ಕಾಕ್ಕೆ ತೆರಳಿದವರು ನಡೆಸುವ ಧಾರ್ಮಿಕ ವಿಧಿ ವಿಧಾನಗಳನ್ನು ಈ ಹಬ್ಬದೊಂದಿಗೆ ಮುಕ್ತಾಯಗೊಳಿಸುತ್ತಾರೆ.

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಬಕ್ರೀದ್‌ ಹಬ್ಬ ಆಚರಿಸುತ್ತಾರೆ. ಇಬ್ರಾಹಿಂ ಅವರು ಪ್ರವಾದಿ ಮಹಮ್ಮದ್‌ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ. ಇವರ ಜೀವನದಲ್ಲಿ ನಡೆದ ಒಂದು ಘಟನೆಯ ನೆನಪಿನಲ್ಲಿ ಪ್ರಾಣಿ ಬಲಿ ಅರ್ಪಿಸಲಾಗುತ್ತದೆ.

ಅಲಾØನ ಆದೇಶದಂತೆ ಇಬ್ರಾಹಿಂ ಅವರು ತಮ್ಮ ಪುತ್ರ ಇಸ್ಮಾಯಿಲ್ ಅವರನ್ನು ಬಲಿ ಅರ್ಪಿಸಲು ಮುಂದಾಗುತ್ತಾರೆ. ದೇವರ ಇಚ್ಛೆಯಂತೆ ತಮ್ಮ ಮಗನನ್ನೇ ಬಲಿದಾನ ನೀಡಲು ಸಿದ್ದವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲಾØನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯಾಗಿ ಅರ್ಪಿಸುವಂತೆ ಸೂಚಿಸುತ್ತಾರೆ. ಇಬ್ರಾಹಿಂ ಅವರ ತ್ಯಾಗದ ಸ್ಮರಣಾರ್ಥ ಹಬ್ಬದ ದಿನ ಅಥವಾ ನಂತರದ ಮೂರು ದಿನಗಳ ಕಾಲ ಜಾನುವಾರ ಬಲಿ ಅರ್ಪಿಸುವರು.

ಮುಸ್ಲೀಂ ಗಣ್ಯರ ಅಭಿಪ್ರಾಯ: ರಕ್ತಮಾಂಸವನ್ನು ದೇವರಿಗೆ ಅರ್ಪಿಸುವುದು ಜಾನುವಾರು ಬಲಿಯ ಉದ್ದೇಶವಲ್ಲ. ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸಂಕೇತವಾಗಿ ಈ ಬಲಿ ಅರ್ಪಿಸಲಾಗುತ್ತದೆ. ಜಾನುವಾರಿನ ಮಾಂಸ, ರಕ್ತ ಅಲ್ಲಾಹನಿಗೆ ತಲುಪುವುದಿಲ್ಲ. ನಮ್ಮ ಧರ್ಮನಿಷ್ಠೆ ಅವನಿಗೆ ಸಲ್ಲುತ್ತದೆ ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ಮುಸ್ಲೀಂ ಮುಖಂಡ ಸಲೀಮ ಇನಾಮದಾರ.

ಬಕ್ರೀದ್‌ ಹಬ್ಬದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿ ನೀಡಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸುವ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಿ, ಅದರಲ್ಲಿ ಒಂದು ಅಂಶವನ್ನು ಸ್ವತಃ ನಾವೇ ಬಳಸಿಕೊಂಡು, ಇನ್ನೆರಡು ಪಾಲುಗಳನ್ನು ಸಂಬಂಧಿಕರು ಮತ್ತು ಬಡವರಿಗೆ ಹಂಚುತ್ತೇವೆ. ಹಬ್ಬದೂಟದಿಂದ ಯಾರೂ ವಂಚಿತರಾಗಬಾರದು ಎಂಬ ಮೂಲ ಉದ್ದೇಶ ಇದರಲ್ಲಿ ಅಡಗಿದೆ ಎನ್ನುತ್ತಾರೆ ಮುಸ್ಲೀಂ ಪ್ರಮುಖ ಶೇಖ ಸಾಬೇರ ಪಟೇಲ.ಈ ಹಬ್ಬದ ಮೂಲ ಉದ್ದೇಶ ಏಕದೇವತ್ವದ ಸಂದೇಶಕ್ಕೆ ಬದ್ಧತೆ ತೋರುವುದು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು. ಸಹೋದರತೆ ಬೆಳೆಸಿಕೊಳ್ಳುವುದು. ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವುದೇ ಆಗಿದೆ ಎನ್ನುತ್ತಾರೆ ಮೌಲ್ವಿ ಮೌಲಾನಾ ಜಲಾಲವೂದ್ದಿನ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ