ಮೆಕ್ಕೆ ಜೋಳ ಒಣಗ್ತಿಲ್ಲ-ಪರದಾಟ ನಿಂತಿಲ್ಲ

ಮಳೆಯಿಂದ ಬೆಳೆಗಾರರಿಗೆ ಸಂಕಷ್ಟಒಣಗದೆ ಮಾರಾಟ ಮಾಡಿದ್ರೆ ನಷ್ಟ ಭೀತಿ

Team Udayavani, Oct 18, 2019, 5:03 PM IST

„ಎಚ್‌.ಬಿ. ನಿರಂಜನ ಮೂರ್ತಿ
ಭರಮಸಾಗರ:
ಮಳೆಯಾಟದ ನಡುವೆ ಹಲವು ಸಂಕಷ್ಟಗಳನ್ನು ಎದುರಿಸಿ ಮೆಕ್ಕೆಜೋಳ ಬೆಳೆದಿರುವ ರೈತರಿಗೆ ಸಕಾಲದಲ್ಲಿ ಮೆಕ್ಕೆಜೋಳವನ್ನು ಒಣಗಿಸಿ ಮಾರಾಟ ಮಾಡಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ.

ಚಿತ್ರದುರ್ಗ ತಾಲೂಕಿನ ನಾನಾ ಭಾಗಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಮಳೆಯಾಗಿರುವ ಕಾರಣ ಬಿತ್ತನೆ ಸರಿಯಾಗಿ ಆಗಿಲ್ಲ. ಹಾಗಾಗಿ ಎರಡೆರಡು ಬಾರಿ ಬಿತ್ತನೆ ಮಾಡಲಾಗಿದೆ. ಜೂನ್‌ ಅಂತ್ಯಕ್ಕೆ ಬಿತ್ತನೆ ಮಾಡಿದ ಬೆಳೆಗಳು ಕಾಳು ಕಟ್ಟಿ ನಾಲ್ಕು ತಿಂಗಳು ಕಳೆದು ಕಟಾವಿನ ಹಂತ ತಲುಪಿದೆ. ಈ ವೇಳೆಗೆ ಮಳೆಗೆ ಸಿಲುಕಿ ಅಲ್ಲಲ್ಲಿ ಕಾಳುಗಟ್ಟಿದ ತೆನೆ ನೆಲಕ್ಕೆ ಬಿದ್ದು ಜಾನುವಾರುಗಳಿಗೆ ಮೇವು ಆಗಬೇಕಾದ ಸೊಪ್ಪೆ, ದಂಟು ಸಮೇತ ಕೊಳೆಯುತ್ತಿರುವದು ಕಂಡುಬಂದಿದೆ. ಕೀಟ ಭಾದೆಯಿಂದ ಕೆಲ ಭಾಗಗಳಲ್ಲಿ ಫಸಲು ನಷ್ಟವಾಗಿದೆ. ಹಲವು ಭಾಗಗಳಲ್ಲಿ ಮೆಕ್ಕೆಜೋಳ ಸೂಲಂಗಿ ಕೀಳುವ ಹಂತ ತಲುಪಿದ ವೇಳೆ ಮಳೆ ಕೈಕೊಟ್ಟಿದೆ. ನಷ್ಟ ತಪ್ಪಿಸಲು ಕಟಾವು: ಹೊಲಗಳಲ್ಲಿ ತೇವಾಂಶವಿದ್ದರೂ ಲೆಕ್ಕಿಸದೆ ಕೆಲವರು ಮೆಕ್ಕೆಜೋಳ ಫಸಲು ನಷ್ಟವಾಗುತ್ತಿರುವುದನ್ನು ತಪ್ಪಿಸಲು ತೆನೆ ಕಟಾವು ಮಾಡಲಾಗಿದೆ. ಕಣ, ರಸ್ತೆಗಳಿಗೆ ತಂದು ಯಂತ್ರದ ಮೂಲಕ ಕಾಳು ಬೇರ್ಪಡಿಸಲಾಗುತ್ತಿದೆ. ಆಗಾಗ ಬಂದು ಹೋಗುವ ಮಳೆ ನಡುವೆ ಹಗಲಿರುಳೆನ್ನದೆ ಒಣಗಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಸರ್ವೇಸಾಮಾನ್ಯವಾಗಿದೆ.

ಒಂದು ಎಕರೆ ಬೆಳೆಯಲು ಉಳುಮೆ, ಬಿತ್ತನೆ, ಗೊಬ್ಬರ, ಬೀಜ, ಕಳೆ, ಕಟಾವು ಇತರೆ ಖರ್ಚುಗಳು ಸೇರಿ ಬರೋಬ್ಬರಿ 15 ರಿಂದ 18 ಸಾವಿರ ರೂ. ಖರ್ಚು ಬರುತ್ತದೆ. ಸಣ್ಣ ರೈತರು ಕಟಾವು ಮಾಡುತ್ತಿದ್ದಂತೆ ಮಾರಾಟ ಮಾಡುತ್ತಾರೆ. ಪ್ರತಿ ಕ್ವಿಂಟಲ್‌ ಜೋಳಕ್ಕೆ 2000-2200 ರೂ. ದರವಿದೆ. ಈ ದರ ಇನ್ನೂ ಒಂದೆರಡು ತಿಂಗಳು ಕಳೆದರೆ ಇರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಕೆಲವು ರೈತರು ಕಟಾವಿಗೆ ಮುಂದಾಗುತ್ತಿದ್ದಾರೆ. ಬೆಳೆ ಬೆಳೆಯುವಲ್ಲಿ ಆದ ನಷ್ಟವನ್ನು ದರದಲ್ಲಾದರೂ ಸರಿಪಡಿಸಿಕೊಳ್ಳುವ ಜೊತೆಗೆ ಬೆಳೆಗಾಗಿ ಮಾಡಿದ ಸಾಲದಿಂದ ಮುಕ್ತರಾಗುವ ಧಾವಂತದಲ್ಲಿದ್ದಾರೆ.

ಡ್ರೈಯರ್‌ ಸೌಲಭ್ಯ ಬೇಕು: ಬೆಳೆದ ಬೆಳೆಯನ್ನು ಸಂರಕ್ಷಿಸಿಟ್ಟುಕೊಳ್ಳಲು ರೈತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಈ ಕಾರಣದಿಂದ ಮಾರುಕಟ್ಟೆ ಕಡೆ ಮುಖ ಮಾಡಲು ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ರೈತರು. ಮೆಕ್ಕೆಜೋಳ ಕಾಳು ಬೇರ್ಪಡಿಸಿದ ಬಳಿಕ ಕನಿಷ್ಠ ಒಂದು ವಾರ ಡಾಂಬರ್‌ ರಸ್ತೆಗಳ ಮೇಲೆ ಒಣಗಿಸಬೇಕು. ಏಕೆಂದರೆ ಜೋಳದಲ್ಲಿನ ತೇವಾಂಶ ಕಡಿಮೆ ಆಗಲು ಟಾರ್‌ ರಸ್ತೆಯೇ ಸೂಕ್ತ. ಹಸಿ ಜೋಳವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಬೇಕಾಬಿಟ್ಟಿ ದರ ನಿಗದಿ ಮಾಡುತ್ತಾರೆ. ಹಾಗಾಗಿ ರೈತರು ಹೆದ್ದಾರಿ ಇಕ್ಕೆಲಗಳಲ್ಲಿನ ಬಳಕೆ ಆಗದ ಸರ್ವಿಸ್‌ ರಸ್ತೆಗಳ ಮೇಲೆ ಮೆಕ್ಕೆಜೋಳವನ್ನು ಒಣಗಿಸುತ್ತಿದ್ದಾರೆ.

ಕೃಷಿಕರಿಗೆ ಡ್ರೈಯರ್‌ ಕೇಂದ್ರಗಳ (ಧಾನ್ಯ ಒಣಗಿಸುವ ಶೈತ್ಯಾಗಾರಗಳು) ಅವಶ್ಯಕತೆ ಇದೆ. ‘ಮೆಕ್ಕೆಜೋಳದ ಕಣಜ’ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗ, ದಾವಣಗೆರೆಗೆ ಜಿಲ್ಲೆಗಳಿಗೆ ಡ್ರೈಯರ್‌ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಪ್ರತಿ ವರ್ಷ ರೈತರು ರಸ್ತೆ ಮೇಲೆಯೇ ಮೆಕ್ಕೆಜೋಳವನ್ನು ಒಣಗಿಸಬೇಕಾಗಿದೆ. ಕೃಷಿ ಇಲಾಖೆ ಇನ್ನು ಮುಂದಾದರೂ ಮೆಕ್ಕೆಜೋಳ ಒಣಗಿಸುವ ಅತ್ಯಾಧುನಿಕ ಡ್ರೈಯರ್‌ ಕೇಂದ್ರಗಳನ್ನು ಹೋಬಳಿಗೆ ಒಂದರಂತೆ ತೆರೆಯುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ