ಗುರಿ-ಉದ್ದೇಶ ಸ್ಪಷ್ಟವಿದ್ದರೆ ಸಾಧನೆ ಸುಲಭ: ಮಹಾದೇವ

Team Udayavani, Nov 6, 2019, 5:49 PM IST

ಬೀದರ: ವಿದ್ಯಾರ್ಥಿಗಳು ಮುಂದಿನ ಗುರಿ ಮತ್ತು ಉದ್ದೇಶಗಳ ಬಗ್ಗೆ ಸಷ್ಟತೆ ಹೊಂದಿರಬೇಕು. ತಾವು ಕಾಣುವ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಪೂರಕವಾಗಿ ಅಧ್ಯಯನ ಮಾಡಬೇಕು. ಕಠಿಣ ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಅವರು ತಿಳಿಸಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಇಂತಹ ವೇದಿಕೆಗಳು ಸೂಕ್ತ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತವೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲಾಖೆಯ, ಕುಟುಂಬದ ಸದಾಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಮಾತನಾಡಿ, ನಮ್ಮ ಪರಿಶ್ರಮ, ಸಮರ್ಪಣೆ, ಯೋಜನಾಬದ್ಧ ಚಟುವಟಿಕೆ, ಸಮಯದ ಸದ್ಬಳಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಪೂರಕವಾಗುತ್ತದೆ. ವಿದ್ಯಾರ್ಥಿಗಳು ವ್ಯರ್ಥ ಕಾಲಹರಣ ಮಾಡದೇ ತಮ್ಮ ಜೀವನದ ಭವಿಷ್ಯಕ್ಕೆ ಬುನಾದಿ ಹಾಕಲು ಇಂದಿನಿಂದಲೇ ತೊಡಗಿಸಿಕೊಳ್ಳಬೇಕು. ಪ್ರತಿ ಕ್ಷಣವೂ ವಿದ್ಯಾರ್ಥಿಗಳ ಪಾಲಿಗೆ ಬಹುಮುಖ್ಯ ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿ, ಅಧ್ಯಯನ, ಉದಾತ್ತ ಗುರಿ, ಆತ್ಮವಿಶ್ವಾಸ, ಛಲ, ಕಠಿಣ ಪರಿಶ್ರಮ ನಮ್ಮದಾಗಿಸಿಕೊಂಡ ವಿದ್ಯಾರ್ಥಿಗಳು ಯಶಸ್ವಿ ಜೀವನ ಸಾಗಿಸುತ್ತಾರೆ. ಈ ಐದಂಶ ಸೂತ್ರ ಅಳವಡಿಸಿಕೊಂಡಲ್ಲಿ ಅಗಾಧ ಸಾಧನೆ ಮಾಡಲು ಸಾಧ್ಯ ಎಂದರು.

ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮೊಳಗಡೆ ಅಗಾಧ ಶಕ್ತಿ, ಪ್ರತಿಭೆ, ಚೈತನ್ಯವಿದೆ. ಸರ್ವಶ್ರೇಷ್ಠವಾದ ಜ್ಞಾನದ ಬಲವಿದೆ. ಇವುಗಳ ಪರಿಪೂರ್ಣ ಬಳಕೆ ಮಾಡಿಕೊಂಡಲ್ಲಿ ಯಶಸ್ಸಿನ ಶಿಖರ ಹತ್ತುವುದು ಸುಲಭ. ಊಟಕ್ಕೂ ಗತಿಯಿಲ್ಲದ ಅದೆಷ್ಟೋ ಜನರು ಶ್ರೇಷ್ಠ ಸಾಧಕರಾಗಿ ಇತಿಹಾಸ ರಚನೆ ಮಾಡಲು ಅಂತರ್‌ ಶಕ್ತಿ ಸದ್ಬಳಕೆಯೇ ಪ್ರಮುಖ ಕಾರಣ ಎಂದು ಹೇಳಿ
ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು.

ಏಕಾಗ್ರತೆ ಇದ್ದಲ್ಲಿ ವಿಷಯ ಸರಿಯಾಗಿ ಅರ್ಥವಾಗಲು ಸಾಧ್ಯ. ಇಲ್ಲವಾದಲ್ಲಿ ಸಣ್ಣ ವಿಷಯಗಳೂ ಬೆಟ್ಟದಂತೆ ಕಾಡುತ್ತವೆ. ಯಶಸ್ಸಿಗೆ ಅಡ್ಡಿಯಾಗುತ್ತವೆ. ಏಕಾಗ್ರತೆ, ಉನ್ನತ ಗುರಿ, ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ನಾಗರಿಕ ಸೇವಾ ಪರೀಕ್ಷೆಗಳನ್ನು ಸುಲಭವಾಗಿ ಉತ್ತೀರ್ಣರಾಗಬಹುದು ಎಂದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಸಂದೇಹಗಳನ್ನು ನಿವಾರಿಸಿದರು. ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ ದೇವಮಾನೆ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ವಿಸ್ತರಣಾ ಧಿಕಾರಿ ಅಶೋಕ ಶೇರಿಕಾರ್‌, ಗಣಪತಿ
ರಾಠೊಡ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಾಚಾರ್ಯ ಚೆನ್ನಬಸವ ಹೇಡೆ ನಿರೂಪಿಸಿದರು. ನಿಲಯದ ಬಿಎ, ಬಿಕಾಂ, ಬಿಎಸ್ಸಿ ಇತರೆ ಪದವಿ ಓದುತ್ತಿರುವ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ