ಮೊಬೈಲ್ ಯುಗದಲ್ಲಿ ಸೊರಗಿದೆ ಜಾನಪದ

ಬಾಲಕಿಯರ ವಸತಿ ನಿಲಯದಲ್ಲಿ ಗುರು ಶಿಷ್ಯ ಪರಂಪರೆ ಜಾನಪದ ಸಂಗೀತ ತರಬೇತಿ ಕಾರ್ಯಕ್ರಮ

Team Udayavani, Sep 6, 2019, 7:13 PM IST

ಬೀದರ: ಪ್ರತಾಪ ನಗರದ ಮೆಟ್ರಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಗುರುಶಿಷ್ಯ ಪರಂಪರೆ ಜಾನದಪ ಸಂಗೀತ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಸಾಗರ ದಾಂಡೇಕರ್‌ ಮಾತನಾಡಿದರು.

ಬೀದರ: ಇಂದಿನ ಮೊಬೈಲ್ ಯುಗದಲ್ಲಿ ಜಾನಪದ ಸಂಸ್ಕೃತಿ ಸೊರಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.

ಪ್ರತಾಪ ನಗರದ ಮೆಟ್ರಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಗುರುಶಿಷ್ಯ ಪರಂಪರೆ ಜಾನದಪ ಸಂಗೀತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದರೆ ಯುವ ವಿದ್ಯಾರ್ಥಿಗಳನ್ನು ಜಾನಪದದ ಸೊಗಡಿನತ್ತ ಸೆಳೆಯಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿರುವುದು ಶ್ಲಾಘನೀಯ ಎಂದರು.

ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕಿ ಡಾ| ಮಹೇಶ್ವರಿ ಹೇಡೆ ಉಪನ್ಯಾಸ ನೀಡಿ, ಗುರು ಎಂದರೆ ದೀಪ. ಆ ದೀಪ ನೂರಾರು ಮನೆಗಳನ್ನು ಬೆಳಗುತ್ತದೆ. ಜನಪದ ಅಂದರೆ ಅದೊಂದು ಖುಷಿ. ಅದು ಸಹಜವಾಗಿ ಬಂದ ಸಾಹಿತ್ಯವಾಗಿದೆ. ಸಂಗೀತ ಕಲೆಗೆ ನಮ್ಮಲ್ಲಿ ವಿಶೇಷ ಮಾನ್ಯತೆ ಇದೆ. ಇದಕ್ಕೆ ಯಾವುದೇ ಅಕ್ಷರ ಜ್ಞಾನ ಕೂಡ ಬೇಕಿಲ್ಲ. ಉತ್ತಮವಾದ ಸಂಗೀತ ಪ್ರತಿಭೆಗೆ ಒಂದಿಲ್ಲೊಂದು ದಿನ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅದಕ್ಕೆ ನಾವು ಯಾವುದೇ ಸಿದ್ಧತೆ ಮಾಡಿಕೊಳ್ಳಬೇಕಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಎಸ್‌.ಎಂ. ಜನವಾಡಕರ್‌ ಮಾತನಾಡಿ, ಮನುಷ್ಯ ಭೂಮಂಡಲದಲ್ಲಿ ಜನ್ಮತಾಳಿದ ದಿನದಿಂದಲೇ ಅವನ ಜೊತೆಗೆ ಸಂಗೀತವೂ ಬಂದಿದೆ. ಸಂಗೀತದಿಂದ ಚಿತ್ತ ಶುದ್ಧಿಯಾಗುತ್ತದೆ. ಮನುಷ್ಯ ನೆಮ್ಮದಿಯಿಂದ ಬದುಕುತ್ತಾನೆ ಎಂದು ಹೇಳಿದರು.

ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲದೊಡ್ಡಿ ಮಾತನಾಡಿ, ನಾನು ಸುತ್ತಿದ ದೇಶಗಳಲ್ಲಿ ಕಂಡಂತೆ ಶೇ.50ರಷ್ಟು ಮಹಿಳೆಯರು, ಗಂಡಸರು ನಾಚುವ ರೀತಿಯಲ್ಲಿ ತಮ್ಮ ವೈವಿಧ್ಯಮಯ ಕಲೆ ಪ್ರದರ್ಶನ ಮಾಡಿದ್ದಾರೆ. ಆ ಸಾಮರ್ಥ್ಯ ಮಹಿಳೆಯರಲ್ಲಿದೆ. ಯಾವುದಕ್ಕೂ ಹೆದರದೆ ಆಸಕ್ತಿಯಿಂದ ಕಲಿತು ತಾವು ಕಲಾವಿದರಾದಲ್ಲಿ ಜಗತ್ತಿನ ಯಾವುದೇ ಮೂಲೆಗಾದರೂ ಹೋಗಿ ಕಲೆಗಳ ಪ್ರದರ್ಶನ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ ದಾಂಡೇಕರ್‌ ಮಾತನಾಡಿ, ವಸತಿ ಶಾಲೆಯ ಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ವಿಶೇಷ ಕಲೆಗಳನ್ನು ವಿಶೇಷವಾಗಿ ವಿದ್ಯಾರ್ಥಿನಿಯರಿಗೆ, ಜಿಲ್ಲೆಯ ಹಿರಿಯ, ಅನುಭವಿ ಗುರುಗಳಿಂದ ಕಲಿಸಲಾಗುತ್ತಿದೆ. ಜಿಲ್ಲಾಡಳಿತದಿಂದ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಂದಲೇ ಕಲಾ ಪ್ರದರ್ಶನ ನಡೆಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ನರಸಾ ಗೊಂಡ, ಸಂಗೀತ ಕಲಾವಿದ ರಾಮುಲು ಗಾದಗಿ, ತ್ರಿವೇಣಿ ರಮೇಶ ಕೋಳಾರ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನೀಲಕುಮಾರ, ಸಂಘಟಿಕ ಮಹೇಶ ಗೋರನಾಳಕರ, ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕ‌ ಸಂಗಮ್ಮ ಮತ್ತು ಗೀತಾ, ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ