ಬಸವ ಪರ ಸಂಘಟನೆಗಳ ಸಂಭ್ರಮ

ಹೈದರಾಬಾದ್‌ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ'-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಾಮಕರಣ

Team Udayavani, Sep 8, 2019, 11:26 AM IST

ಬೀದರ: ರಾಜ್ಯ ಸರ್ಕಾರ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ 'ಕಲ್ಯಾಣ ಕರ್ನಾಟಕ' ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಬಸವ ಪರ ಸಂಘಟನೆ ಪದಾಧಿಕಾರಿಗಳು ಸಿಹಿ ವಿತರಿಸಿ ಸಂಭ್ರಮಿಸಿದರು.

ಬೀದರ: ರಾಜ್ಯ ಸರ್ಕಾರ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಮಂಡಳಿ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ ಸೇರಿದಂತೆ ವಿವಿಧ ಬಸವ ಪರ ಸಂಘಟನೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸಂಭ್ರಮ ಆಚರಿಸಿದರು.

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಷಟ್ಸ್ಥಲ ಧ್ವಜಾರೋಹಣ ನರವೇರಿಸಿದರು. ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಕಲ್ಯಾಣ ಕರ್ನಾಟಕಕ್ಕೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಹಾಕಿ, ಪರಸ್ಪರ ಸಿಹಿ ಹಂಚಿ ಸಂತಸ ಪಟ್ಟರು.

ಈ ವೇಳೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಮಂಡಳಿ ಎಂದು ನಾಮಕರಣ ಮಾಡಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟದ ನಿರ್ಣಯ ಐತಿಹಾಸಿಕವಾಗಿದೆ ಎಂದರು.

ಬಸವಾದಿ ಶರಣರು ವಿಶ್ವಕ್ಕೆ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಕೊಟ್ಟ ಈ ನಾಡು ಕಲ್ಯಾಣ ನಾಡು ಆಗಿದೆ. ಹೀಗಾಗಿ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದೇ ಕರೆಯಬೇಕು ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆಯಾಗಿದ್ದ ಮಾತೆ ಮಹಾದೇವಿ ಅವರು ಬಸವಕಲ್ಯಾಣದಲ್ಲಿ ನಡೆಯುವ ಕಲ್ಯಾಣ ಪರ್ವ ಕಾರ್ಯಕ್ರಮ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಉತ್ಸವದ ವೇದಿಕೆ ಮೂಲಕ ಸರ್ಕಾರಕ್ಕೆ ಬೇಡಿಕೆ ಮಂಡಿಸುತ್ತಲೇ ಬಂದಿದ್ದರು. ನಾಡಿನ ಬಹುತೇಕ ಮಠಾಧಿಧೀಶರು, ಚಿಂತಕರು, ಬಸವ ಪರ ಸಂಘಟನೆಗಳ ಪದಾಧಿಕಾರಿಗಳು, ಬಸವ ಭಕ್ತರು ಹಾಗೂ ಸಾರ್ವಜನಿಕರು ಇದಕ್ಕೆ ಬೆಂಬಲ ಸೂಚಿಸಿದ್ದರು. ಎಲ್ಲರ ಬೇಡಿಕೆಗೆ ಸ್ಪಂದಿಸಿ ಇದೀಗ ಸರ್ಕಾರ ಸ್ವಾಗತಾರ್ಹ ತೀರ್ಮಾನ ಕೈ ಗೊಂಡಿದೆ. ಈ ಮೂಲಕ ಜಾತಿ, ವರ್ಗ, ವರ್ಣ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರನ್ನು ಗೌರವಿಸಿದೆ ಎಂದು ತಿಳಿಸಿದರು.

ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್‌ ಪಾಟೀಲ ಖಾಜಾಪೂರ ಮಾತನಾಡಿ, ಮುಖ್ಯಮಂತ್ರಿಯವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕು. ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಬೇಕು. ಶರಣರ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ, ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಬೇಕು ಎನ್ನುವುದು ಮಾತೆ ಮಹಾದೇವಿ ಅವರ ಕನಸಾಗಿತ್ತು. ಈಗ ಅದು ನನಸಾಗಿದೆ ಎಂದು ನೆನಪಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಹೈದರಾಬಾದ್‌ ಕರ್ನಾಟಕ ಎನ್ನುವ ಹೆಸರು ಹಿಂದುಳಿದ ಪ್ರದೇಶದ ಸೂಚಕವಾಗಿತ್ತು. ಕಲ್ಯಾಣ ಕರ್ನಾಟಕ ಹೆಸರು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಮೃದ್ಧಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು. ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಉಪಾಧ್ಯಕ್ಷೆ ಮೇನಕಾ ಪಾಟೀಲ, ಮುಖಂಡರಾದ ಶಿವರಾಜ ಪಾಟೀಲ ಅತಿವಾಳ, ಸಿದ್ಧಯ್ಯ ಕಾವಡಿಮಠ, ವಿವೇಕ ಪಟ್ನೆ, ಸಂಜೀವಕುಮಾರ ಪಾಟೀಲ, ಬಸವರಾಜ ಜಕ್ಕಾ, ಸುರೇಶ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ