- Saturday 14 Dec 2019
ಸರ್ಕಾರಿ ವೈದ್ಯರ ಖಾಸಗಿ ಕರ್ತವ್ಯ ಸಹಿಸಲ್ಲ
ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ ತಾಕೀತು
Team Udayavani, Jul 12, 2019, 3:51 PM IST
ಬೀದರ: ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ ನೇತೃತ್ವದಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.
ಬೀದರ: ಸ್ವಚ್ಛತೆ ಕೊರತೆಯಿಂದಾಗಿ ಸಾಕಷ್ಟು ರೋಗಗಳು ಬರುತ್ತವೆ. ಹಾಗಾಗಿ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತವಾಗಿ ಬೆಡ್ ಮಾತ್ರ ನೀಡಲಾಗುತ್ತಿದ್ದು ಔಷಧಕ್ಕೆ ಹೊರಗಡೆ ಕಳುಹಿಸಲಾಗುತ್ತಿದೆ ಏಕೆ ಎಂದು ಪ್ರಶ್ನಿಸಿದರು. ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇರುವ ದೂರುಗಳು ಬರುತ್ತಿವೆ. ಇರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಸೇವೆಯಲ್ಲಿ ಸಿಗುತ್ತಿಲ್ಲ ಎಂದು ಅನೇಕರು ದೂರುತ್ತಿದ್ದಾರೆ. ಖಾಸಗಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರ ವಿರುದ್ಧ ಆರೋಗ್ಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದ ಅವರು, ಕಾಲಕಾಲಕ್ಕೆ ವೈದ್ಯರ ಸಭೆ ನಡೆಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ.ಜಬ್ಟಾರ ಅವರಿಗೆ ನಿರ್ದೇಶನ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಒ ಜಬ್ಟಾರ್ ಅವರು, ಜಿಲ್ಲಾಸ್ಪತ್ರೆ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅಲ್ಲೇ ಔಷದ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೊರಗಡೆ ಔಷಧಕ್ಕೆ ಕಳುಹಿಸುತ್ತಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಅಂಥ ಘಟನೆ ಬೆಳಕಿಗೆ ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿದರು.
ವಸತಿ ಯೋಜನೆ: ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಗೀತಾ ಚಿದ್ರಿ ಅವರು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಕೆಲವು ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಶುಚಿತ್ವದ ಕೊರತೆ, ಕಳಪೆ ಆಹಾರ ನೀಡಿರುವುದು ಸೇರಿದಂತೆ ನಾನಾ ಸಮಸ್ಯೆಗಳು ಕಾಣಿಸಿವೆ. ವಸತಿ ನಿಲಯಗಳಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ಇರುವುದರಿಂದ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಇದರ ಸದುಪಯೋಗವಾಗಬೇಕು. ವಸತಿ ನಿಲಯಗಳ ಸುಧಾರಣೆಗೆ ಪ್ರಾಯಾಣಿಕವಾಗಿ ಪ್ರಯತ್ನಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 66 ವಸತಿ ನಿಲಯಗಳಿವೆ. ಇದರಲ್ಲಿ ಸ್ವಂತ 55 ಕಟ್ಟಡಗಳಿದ್ದು, 11 ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. 3 ಕಟ್ಟಡಗಳ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಇಲಾಖೆಯ ವಸತಿ ನಿಲಯಗಳ ಫಲಿತಾಂಶ ಉತ್ತಮ ಸ್ಥಿತಿಯಲ್ಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.75 ಹಾಗೂ ಪಿಯುಸಿಯಲ್ಲಿ ಶೇ.64.3ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರೇಮಸಾಗರ ದಾಂಡೇಕರ್ ಸಭೆಗೆ ಮಾಹಿತಿ ನೀಡಿದರು.
ಅತಿಥಿ ಶಿಕ್ಷಕರ ಕೊರತೆ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸಭೆಗೆ ಗೈರಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಅಧಿಕಾರಿ ಪದೇಪದೆ ಗೈರಾಗುತ್ತಿದ್ದಾರೆ. ಏನು ಕಾರಣ? ಅವರಿಂದಲೇ ಮಾಹಿತಿ ಪಡೆಯಬೇಕಿದೆ ಎಂದರು. ಬಳಿಕ ಸಹಾಯಕ ಅಧಿಕಾರಿ ಮಾತನಾಡಿ, ಜಿಲ್ಲಾದ್ಯಂತ ಶಿಥಿಲಗೊಂಡ 926 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಕಟ್ಟಡಗಳ ದುರಸ್ತಿಗೆ ನಾಲ್ಕು ವರ್ಷದಿಂದ 1.20 ಕೋಟಿ ರೂ. ಅನುದಾನ ಬಂದಿದೆ ಎಂದು ವಿವರಣೆ ನೀಡಿದರು. ಪ್ರಸಕ್ತ ಸಾಲಿನಲ್ಲಿ 333 ಅತಿಥಿ ಶಿಕ್ಷಕರ ಅಗತ್ಯವಿದೆ. ಆಯಾ ಶಾಲೆಯ ಮುಖ್ಯಗುರುಗಳಿಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಈ ವೇಳೆ ಜಿಪಂ ಅಧ್ಯಕ್ಷರು ಮಾತನಾಡಿ, ಕೊರತೆಯಿರುವ ವಿಷಯದ ಶಿಕ್ಷಕರನ್ನು ಶೀಘ್ರ ನೇಮಿಸಿಕೊಂಡು ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಣಮಟ್ಟದ ಆಹಾರ ಸಿಗಲಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೆನು ಪ್ರಕಾರ ಆಹಾರ ಒದಗಿಸಬೇಕು. ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶ ನೀಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,893 ಅಂಗನವಾಡಿಗಳಿವೆ. 1,245 ಸ್ವಂತ ಕಟ್ಟಡದಲ್ಲಿವೆ. 492 ಬಾಡಿಗೆ ಕಟ್ಟಡಗಳಲ್ಲಿ ಹಾಗೂ ಬಾಕಿ ಇರುವ ಅಂಗನವಾಡಿಗಳು ಸರ್ಕಾರಿ ಕಚೇರಿ, ಪಂಚಾಯಿತಿ ಕಟ್ಟಡ, ಸಮುದಾಯ ಭವನ, ಶಾಲಾ ಕೊಠಡಿಗಳಲ್ಲಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈತರ ಬೇಡಿಕೆಗೆ ಅನುಗುಣ ಸೌಲಭ್ಯ: ಜಿಲ್ಲೆಯಲ್ಲಿ ಸಾಕಷ್ಟು ರೈತರು ತೋಟಗಾರಿಕೆ ಬೆಳೆಯತ್ತ ಒಲವು ತೋರಿಸುತ್ತಿದ್ದಾರೆ. ತೋಟಗಾರಿಕೆ ಪ್ರದೇಶದಲ್ಲಿಯೂ ಹೆಚ್ಚಳವಾಗುತ್ತಿದೆ. ಇಲಾಖೆಯಿಂದ ರೈತರಿಗೆ ಬಹುವಾರ್ಷಿಕ ಬೆಳೆ, ತರಕಾರಿ, ಹಣ್ಣು, ಹೂಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ. ಅಲ್ಲದೇ ರೈತರಿಗೆ ತರಬೇತಿ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ತಿಳಿಸಿದರು. ಸಭೆಯಲ್ಲಿ ಪಶು ಸಂಗೋಪನೆ, ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಮೀನುಗಾರಿಕೆ, ಎಪಿಎಂಸಿ, ಪಂಚಾಯತ್ ರಾಜ್ ಎಂಜಿನೀಯರಿಂಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಪಂ ಉಪಾಧ್ಯಕ್ಷ ಲಕ್ಷ್ಮಣ ಈಶ್ವರ ಬುಳ್ಳಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಡಿಆರ್‌ಡಿಎ ಯೋಜನಾ ನಿರ್ದೇಶಕ ಬಸವರಾಜ ಬಕಚೋಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ...
-
ಮೈಸೂರು: ತೆರಿಗೆ ಹೆಚ್ಚಳದಿಂದ ವಸತಿ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದ್ದು, ಮಧ್ಯಮ ಮತ್ತು ಬಡವರ್ಗದ ಜನರು ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವುದು...
-
ಚಾಮರಾಜನಗರ: ರೈತರು ಸಾಂಪ್ರದಾಯಿಕ ವಿಧಾನದ ಕೃಷಿಗೇ ಅವಲಂಬಿತರಾಗದೇ, ಆಧುನಿಕ ಅನ್ವೇಷಣೆಗೆ, ಕೃಷಿ ಆಧಾರಿತ ಉಪ ಕಸುಬಿಗೆ ತೆರೆದುಕೊಂಡರೆ ಕೃಷಿಯನ್ನು ಲಾಭದಾಯಕವನ್ನಾಗಿಸಬಹುದು...
-
ಹನೂರು: ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ವಿಷಪ್ರಸಾದ ಪ್ರಕರಣದ ವೇಳೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ವಾಡಿ ಗ್ರಾಮದ ಆಸ್ಪತೆಯನ್ನು ಮೇಲ್ದರ್ಜೆಗೇರಿಸುವುದು...
-
ಮಂಗಳೂರು: ಸಿಎಂ ಯಡಿಯೂರಪ್ಪ, ಎಲ್ಲ ಸಚಿವರು, ಶಾಸಕರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡಿದ್ದರಿಂದ ಉಪ ಚುನಾವಣೆ ಯಲ್ಲಿ ಬಿಜೆಪಿ...
ಹೊಸ ಸೇರ್ಪಡೆ
-
ಬೆಂಗಳೂರು: ಸರ್ಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ...
-
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಠ ಹಿಡಿದು ಸರ್ಕಾರ ರಚಿಸಿ, ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಗೆಲ್ಲಿಸಿಕೊಂಡು ನೆಮ್ಮದಿಯ ನಿಟ್ಟುಸಿರು...
-
ಬೆಂಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಆಟದ ಮೈದಾನಗಳಿದ್ದಂತೆ ವಾತಾವರಣ ಸೃಷ್ಟಿಸಿ, ಭಯ, ಖನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ...
-
ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬುಧ ವಾರ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ (ಗಲ್ಲು) ಶಿಕ್ಷೆ ವಿ ಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು...
-
ಬೆಂಗಳೂರು: ಹೊಸ ಶಾಸಕರ ಬೆಂಬಲಿ ಗರಿಗೆ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಉಪಚುನಾವಣೆ ಕಾರ್ಯ...