ಅಂಬೇಡ್ಕರರಲ್ಲಿಬುದ್ಧ-ಬಸವನ ಕಾಣಿ

Team Udayavani, Apr 15, 2018, 11:48 AM IST

ಬೀದರ: ಭಗವಾನ್‌ ಬುದ್ಧ ಬಿತ್ತಿದ ಸಮಾನತೆ ಬೀಜವನ್ನು ಬಸವಣ್ಣ ಕಾರ್ಯ ರೂಪಕ್ಕೆ ತಂದಿದ್ದರೆ, ಡಾ| ಅಂಬೇಡ್ಕರ ಅವರು ಅದಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟಿದ್ದರು. ಹಾಗಾಗಿ ನಾವು ಬಸವಣ್ಣನಲ್ಲಿ ಬುದ್ಧನನ್ನ ಕಂಡರೆ, ಅಂಬೇಡ್ಕರರಲ್ಲಿ ಬಸವಣ್ಣನನ್ನು ಕಾಣಬೇಕು. ಆಗ ಸೌಹಾರ್ದ ಮತ್ತು ಸ್ವಸ್ಥ ಸಮಾಜ ಕಟ್ಟಡಲು ಸಾಧ್ಯ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.

ನಗರದ ಅಂಬೇಡ್ಕರ ವೃತ್ತದಲ್ಲಿ ಡಾ| ಅಂಬೇಡ್ಕರ ಅವರ 127ನೇ ಜಯಂತ್ಯುತ್ಸವ ನಿಮಿತ್ತ ಶನಿವಾರ ಆಯೋಜಿಸದ್ದ ಬೃಹತ್‌ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಎಂಬುದು ಮಾನವ ನಿರ್ಮಿತವಾದದ್ದು. ಯಾರು ಯಾವುದೇ ಜಾತಿಯಲ್ಲಿ ಹುಟ್ಟಬೇಕು ಎಂಬ ಉದ್ದೇಶ ಹೊಂದಿರುವುದಿಲ್ಲ. ಆದರೆ, ನಾವು ಮಾಡುವ ಕಾಯಕವೇ ಜಾತಿಗಳಾಗಿರುವುದು ದೇಶದ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಅಂಬೇಡ್ಕರರ ಚಿಂತನೆಗಳು ದೇಶದ ದಿನ ದಲಿತರ, ಬಡವರ ಪರವಾಗಿದ್ದವು. ಬಾಬಾ ಸಾಹೇಬರು ಮನುಕುಲದ ಏಳ್ಗೆಗಾಗಿ ಹೋರಾಟ ನಡೆಸಿದರೆ ಹೊರತು ಯಾವುದೇ ಜಾತಿಯ ವಿರುದ್ಧ ಅಲ್ಲ. ಸಮಾಜದಲ್ಲಿ ಹರಡಿರುವ ಜಾತಿಯ ವಿಷ ಬೀಜ ನಿರ್ನಾಮವಾಗಿ ಸಾತ್ವಿಕ ಬದುಕು ಬದುಕುವಂತಾಗಬೇಕು. ಮಹಾತ್ಮರ ಜಯಂತಿಗಳನ್ನು ವೇದಿಕೆಗೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ದಿನ ನಿತ್ಯದ ಬದುಕಿನಲ್ಲಿ ಆಚರಣೆಯಲ್ಲಿ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ| ಎಚ್‌.ಟಿ. ಪೋತೆ ಮಾತನಾಡಿ, ಅಂಬೇಡ್ಕರ ಒಬ್ಬ ಶ್ರೇಷ್ಠ ಜ್ಞಾನಿಯಾಗಿದ್ದು, ವಿಶ್ವದಲ್ಲಿ ಪ್ರಖ್ಯಾತಿ‌ ಪಡೆದಿದ್ದರು. ನಾವೆಲ್ಲರೂ ನಮಗಾಗಿ, ಹೆಂಡತಿ ಮಕ್ಕಳಿಗಾಗಿ ಓದಿದ್ದರೆ ಅವರು ಶೋಷಿತ ಸಮುದಾಯವರ ಏಳ್ಗೆಗಾಗಿ ಓದಿದ್ದರು. ಬುದ್ಧ, ಬಸವ ನಾಡಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಯಾವೊಬ್ಬ ಮನುವಾದಿಗಳು ಮಾತನಾಡುವುದಿಲ್ಲ. ಅಸ್ಪೃಶ್ಯರ ನೋವು ಅಸ್ಪೃಶ್ಯರಿಗೆ ಮಾತ್ರ ಗೊತ್ತು. ಇದರಿಂದ ಮುಕ್ತಿ ಪಡೆಯಬೇಕಾದರೆ ಸಮಾನತೆಯ ಹಕ್ಕು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಇದು ಅಂಬೇಡ್ಕರ ಭಾರತ ಎಂದು ಪ್ರಧಾನಿಗಳ ಹೇಳಿಕೆ ನಿಜವಾಗಿದ್ದರೆ ಧರ್ಮ ಸಂಸತ್ತಿನ ಮಠಾಧೀಶರು ಬಾಯಿ ಮುಚ್ಚಿಸಲಿ. ಮೀಸಲಾತಿ ಸೌಲಭ್ಯ ತೆಗೆಯಬೇಕು ಎಂದಾದರೆ ರಾಷ್ಟ್ರದ ಸಂಪತ್ತನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲಿ. 

ಕೇವಲ ಶೇ.15ರಷ್ಟು ಮೀಸಲಾತಿ ಸೌಲಭ್ಯ ಪಡೆಯುವ ಪರಿಶಿಷ್ಟ ಜಾತಿಯವರು ಅಂಬೇಡ್ಕರ ಜಯಂತಿ ಆಚರಣೆ ಮಾಡುತ್ತಿದ್ದರೆ, ಅತಿ ಹೆಚ್ಚು ಮೀಸಲಾತಿ ಪಡೆಯುವ ಹಿಂದುಳಿದ ವರ್ಗದವರು ಮನೆಯಲ್ಲಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಣದೂರ ಧಮ್ಮ ದರ್ಶನ ಭೂಮಿಯ ಶ್ರೀ ಭಂತೆ ವರಜ್ಯೋತಿ ಅವರ ಸಾನಿಧ್ಯ ಮತ್ತು ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಾರುತಿ ಬೌದ್ಧೆ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದ ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ ಮತ್ತು ಸಂಬಾಜಿ ಬ್ರಿಗೇಡ್‌ ಅಧ್ಯಕ್ಷ ಸುಭಾಷ ಶೆಡೋಳೆ ಉಪನ್ಯಾಸ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಫರ್ನಾಂಡಿಸ್‌ ಹಿಪ್ಪಳಗಾಂವ್‌, ಉಪಾಧ್ಯಕ್ಷ ಬಾಬುರಾವ ಪಾಸ್ವಾನ್‌, ಮೆರವಣಿಗೆ ಸಮಿತಿ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ ಗೋರನಾಳಕರ್‌, ಪ್ರಮುಖರಾದ ಅರುಣ ಪಾಟೀಲ, ವಿಷ್ಣುವರ್ಧನ ವಾಲೊªಡ್ಡಿ ಮತ್ತಿತರರು ವೇದಿಕೆಯಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ