ಬೆಳೆ ಹಾನಿ; ಎಕರೆಗೆ 25 ಸಾವಿರ ನೀಡಲು ಆಗ್ರಹ
Team Udayavani, Sep 21, 2020, 6:02 PM IST
ಬೀದರ: ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಬೆಳೆಗಳು ಹಾನಿಯಾಗಿದ್ದು, ಕೃಷಿ ಅಧಿಕಾರಿಗಳೊಂದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾಗಿರುವ ಹಾಗೂ ಬೀದರ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ಬೆಳೆ ಹಾನಿ ಸಂಭವಿಸಿದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಬಗದಲ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಕಾಡವಾದ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಒಣ ಬೇಸಾಯದಲ್ಲಿ ಬೆಳೆದ ಉದ್ದು, ಹೆಸರು, ತೊಗರಿ,ಸೋಯಾಬಿನ್ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ಬೆಳೆ ನಷ್ಟಕ್ಕೆ ಸಿಲುಕಿದ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಹೆಸರು-20546, ಉದ್ದು-12766, ತೊಗರಿ 20844, ಸೋಯಾಬಿನ್-38379, ಇತರೆ- 8268 ಸೇರಿದಂತೆ ಒಟ್ಟು 100803 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಅಧಿವೇಶನದಲ್ಲಿಯೂ ಬೆಳೆ ಹಾನಿ ಬಗ್ಗೆ ಚರ್ಚಿಸುತ್ತೇನೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡುವ ಕೆಲಸ ಸರ್ಕಾರ ಮಾಡಬೇಕಿದೆ. ಆದಷ್ಟು ಬೇಗ ಸಮೀಕ್ಷೆ ನಡೆಸಿ ರೈತರಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ದೂಳಪ್ಪ, ಕೃಷಿ ಅಧಿಕಾರಿ ಸಂಗಮೇಶ ಬಿರಾದಾರ ಸೇರಿದಂತೆ ಅಧಿಕಾರಿಗಳು, ರೈತರು ಇದ್ದರು.