ಜಿಲ್ಲೆಯಲ್ಲಿ ವಿಭಿನ್ನ ಸ್ವಾತಂತ್ರ್ಯೂತ್ಸವ: ಡಾ| ಮಹಾದೇವ
Team Udayavani, Aug 10, 2018, 10:42 AM IST
ಬೀದರ: ಜಿಲ್ಲೆಯಲ್ಲಿ ಸ್ವಾತಂತ್ರ್ಯೂತ್ಸವ ವಿಭಿನ್ನವಾಗಿ ನಡೆಯಲಿದ್ದು, ಮುಖ್ಯಮಂತ್ರಿಗಳು ಆಯವ್ಯಯ ಭಾಷಣದಲ್ಲಿ ಘೋಷಿಸಿದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಈ ವೇಳೆ ವಿಧ್ಯುಕ್ತ ಚಾಲನೆಸಿಗಲಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯೂತ್ಸವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ಕರ್ನಾಟಕ ಅನುಷ್ಠಾನಕ್ಕಾಗಿ ಆಯಾ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದ್ದು, ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯೂತ್ಸವ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಸಿ ನೆಡುವ ಮತ್ತು ಸಸಿ ವಿತರಣೆ ಮಾಡುವ ಮೂಲಕ ಆರಂಭವಾಗುವ “ಹಸಿರು ಕಾರ್ಯಕ್ರಮ’ದ ಪ್ರಚಾರ ಕಾರ್ಯಕ್ರಮ ಆ.15ರಿಂದ ಆರಂಭಗೊಂಡು ಆ.18ರ ವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಈ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು
ಎಂದು ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮದಡಿ ಆಯ್ದ ಗ್ರಾಮಗಳಲ್ಲಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಕುಟುಂಬಕ್ಕೆ ಅವರ ಅವಶ್ಯಕತೆಗೆ ತಕ್ಕಂತೆ ಹಂತಹಂತವಾಗಿ ಸಸಿಗಳನ್ನು ನೆಡಲು ಕ್ರಮ ಕೈಗೊಂಡು ಚಾಚುತಪ್ಪದೇ ಅನುಷ್ಠಾನ ಮಾಡಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ, ತೋಟಗಾರಿಕೆ, ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪೊಲೀಸ್, ಕೆಎಸ್‌ಆರ್‌ಟಿಸಿ ಸೇರಿದಂತೆ ನಾನಾ ಇಲಾಖೆಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ಸಸಿ ನೆಡಲು ಸಭೆಯಲ್ಲಿ ಸೂಚಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಿಂದ ಪರಿಸರ ಹಾಡು ನಾಟಕಗಳನ್ನು ಆಯೋಜಿಸಲು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಿಲ್ಲಾಮಟ್ಟದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸುವ ಬಗ್ಗೆ ಚರ್ಚಿಸಲಾಯಿತು. ತಾಲೂಕುಮಟ್ಟದಲ್ಲಿ ಸಂಬಂಧಿಸಿದ ಶಾಸಕರ ನೇತೃತ್ವದಲ್ಲಿ ಸಸಿನೆಟ್ಟು ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಬೇಕು. ಹಾಗೂ ಹಸಿರು ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಇದು ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಸಸಿಗಳನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಇದಕ್ಕೆ
ಸರ್ಕಾರದಿಂದ ಹಣ ಖರ್ಚಾಗುತ್ತದೆ. ಇದನ್ನು ಅರ್ಥೈಸಿಕೊಳ್ಳಬೇಕು. ಯಾರೂ ಕೂಡ, ನೀಡಿದ ಸಸಿಗಳನ್ನು ಹಾಳು ಮಾಡಬಾರದು. ಸರಿಯಾದ ಸ್ಥಳಗಳಲ್ಲಿ ನೆಟ್ಟು ಪೋಷಿಸಿ, ಬೆಳೆಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿಗಳಿಗೆ ಸಲಹೆ ನೀಡಿದರು.