ಎಚ್‌ಐವಿ ಸೋಂಕಿತರ ಸಂಜೀವಿನಿ

Team Udayavani, Nov 13, 2018, 11:53 AM IST

ಬಸವಕಲ್ಯಾಣ: ಯಾರೋ ಮಾಡಿದ ತಪ್ಪಿಗೆ ಕಣ್ಣು ತೆರೆಯುವ ಮುನ್ನವೇ ಮಾರಕ ರೋಗಕ್ಕೆ ತುತ್ತಾಗಿ ಅತ್ತ ಸಮಾಜದಿಂದ ಇತ್ತ ಪೋಷಕರಿಂದ ತಿರಸ್ಕಾರಗೊಂಡ ಮಕ್ಕಳಿಗೆ ಕೌಡಿಯಾಳ ಎಸ್‌. ಗ್ರಾಮದ ಸ್ಪರ್ಶ ಕೇರ್‌ ಹೋಮ್‌ ವಿಶೇಷ ಮಕ್ಕಳ ಆರೈಕೆ ಕೇಂದ್ರವು ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೌಡಿಯಾಳ ಎಸ್‌. ಗ್ರಾಮದಲ್ಲಿ ಸ್ಪರ್ಶ ಕೇರ್‌ ಹೋಮ್‌ ಎಚ್‌ಐವಿ ಸೋಂಕಿತ ಮಕ್ಕಳನ್ನು
ಮುಖ್ಯವಾಹಿನಿ ತರುವ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಕಲಿಕೆ ವಾತಾವರಣ ನಿರ್ಮಿಸಿ, ಅನ್ಯ ಮಕ್ಕಳಂತೆ ಪಠ್ಯದ
ಜೊತಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪ್ರೋತ್ಸಾಹ ನೀಡುತ್ತಿದೆ. 

ಆರಂಭದಲ್ಲಿ ಕೇವಲ ನಾಲ್ಕು ಜನ ಮಕ್ಕಳಿಂದ ಪ್ರಾರಂಭಗೊಂಡ ಸ್ಪರ್ಶ ಕೇರ್‌ ಹೋಮ್‌ ಸಂಸ್ಥೆಯಲ್ಲಿ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ 3 ರಿಂದ 15 ವರ್ಷದ ಒಟ್ಟು ಮೂವತ್ತು ಮಕ್ಕಳಿಗೆ ಭವಿಷ್ಯ ರೂಪಿಸುವ ಆಶ್ರಯ ತಾಣವಾಗಿದೆ.

ಇಂಥಹ ಮಕ್ಕಳ ಆರೈಕೆ ಕೇಂದ್ರಕ್ಕೆ ಸರ್ಕಾರದಿಂದ ಕೇವಲ ಮಾತ್ರೆಗಳನ್ನು ಬಿಟ್ಟು ಯಾವುದೇ ಸಹಕಾರ ಇಲ್ಲ. ಆದರೂ
ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡದಂತೆ ಬೆಳಗ್ಗೆ ಯೋಗ, ಮಧ್ಯಾಹ್ನ ಹಾಗೂ ಸಂಜೆ ಪೌಷ್ಠಿಕಾಂಶ ಆಹಾರ ನೀಡಲಾಗುತ್ತದೆ. ಆರಂಭದಲ್ಲಿ ಇಲ್ಲಿ ಆಶ್ರಯ ಪಡೆದ ಮಕ್ಕಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಮನೆಯಲ್ಲಿ ಪ್ರೀತಿ-ಮಮತೆ ಸಿಗದೆ ಇರುವುದರಿಂದ ಹಬ್ಬಗಳು ಬಂದಾಗ ಮಕ್ಕಳು ಮನೆಗೆ ಹೋಗಲು ಹಿಂಜರಿಯುತ್ತಾರೆ. ಆದರೆ ಕೆಲ ಮಕ್ಕಳ ಅಜ್ಜಿಯಂದಿಯರು ಮಾತ್ರ ನೋಡಲು ಮತ್ತು ಕರೆದುಕೊಂಡು ಹೋಗಲುಬರುತ್ತಾರೆ ಎಂದು ಸಂಸ್ಥೆಯ ಫಾದರ್‌ ಬಾಪು ತಿಳಿಸುತ್ತಾರೆ. 
 
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗೆ ನೀಡುವ ರಾಜ್ಯ ಪ್ರಶಸ್ತಿಯನ್ನು 2014ರಲ್ಲಿ ಸಂಸ್ಥೆಯ
ಫಾದರ್‌ ಬಾಬು ಅವರಿಗೆ ಕೂಡ ಲಭಿಸಿದೆ. ಹಾಗೂ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ ಮಾರಕ ರೋಗಕ್ಕೆ ತುತ್ತಾದ ಮಕ್ಕಳಿಗೆ ಶಿಕ್ಷಣ ಜೊತೆಗೆ ಆರೋಗ್ಯದ ಕಾಳಜಿ ವಹಿಸುತ್ತಿರುವ ಸ್ಪರ್ಶ ಕೇರ್‌ ಹೋಮ್‌ ವಿಶೇಷ ಮಕ್ಕಳ ಆರೈಕೆ ಕೇಂದ್ರದ ಸೇವೆ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ.

ಅನ್ಯರಂತೆ ಇವರು ಜೀವನ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಅವರನ್ನು ಮುಖ್ಯವಾಹಿನಿಗೆ ತರಬೇಕು.
ಮತ್ತು ಅವರು ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈ ಕೇಂದ್ರ ಆರಂಭಿಸಲಾಗಿದೆ.
 ಫಾದರ್‌ ಬಾಪು ಕೌಡಿಯಾಳ ಸ್ಪರ್ಶ ಕೇರ್‌ ಹೋಮ್‌

„ವೀರಾರೆಡ್ಡಿ ಆರ್‌.ಎಸ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ