ಸಿದ್ದರಾಮಣ್ಣನ ಬಸವ ಸೇವೆ ವರ್ಣನೆಗೆ ಮೀರಿದ್ದು
Team Udayavani, Apr 24, 2022, 5:37 PM IST
ಬೀದರ: ಬಸವ ಕಲ್ಯಾಣ ಅನುಭವ ಮಂಟಪದ ಸಂಚಾಲಕರಾಗಿ ದುಡಿದ ವಿ.ಸಿದ್ದರಾಮಣ್ಣ ಅವರ ಸೇವೆ ವರ್ಣಿಸಲು ಸಾಧ್ಯವಿಲ್ಲ ಎಂದು ಇಳಕಲ್ಲಿನ ವಿಜಯ ಮಹಾಂತೇಶ್ವರ ಪೀಠದ ಗುರುಮಹಾಂತ ಸ್ವಾಮೀಜಿ ನುಡಿದರು.
ನಗರದ ಸಮರ್ಥ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ನಾಡಿನ ಬಸವ ಅನುಯಾಯಿಗಳ ಹಾಗೂ ವಚನ ಚಾರಿಟೇಬಲ್ ಸೊಸೈಟಿ ವತಿಯಿಂದ ಹಮ್ಮಿಕೊಂಡ ವಿ.ಸಿದ್ದರಾಮಣ್ಣನವರ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ನಾಡಿಗೆ ಪ್ರವಾಸಿಗರು, ಬಸವ ಭಕ್ತರು ಜಗತ್ತಿನ ಮೂಲೆ ಮೂಲೆ ಜನರು ಬರುತ್ತಾರೆ. ಅವರಿಗೆ ಕಲ್ಯಾಣ ಕಾಂತ್ರಿ, ಶರಣ ವಿಚಾರ ಹೇಳುತ್ತ ಸುಮಾರು 45 ವರ್ಷ ಕಾಯಕ ಮಾಡಿದ್ದಾರೆ. ಈಗ ಕೇವಲ ಶಾಲು ಸನ್ಮಾನ ನೀಡಿ ಗೌರವಿಸಿದರೆ ಸಾಲದು. ಅವರ ಕಾಯಕ ನಿರಂತರವಾಗಿ ಉಳಿಯ ಬೇಕಾದರೆ ನಾವೆಲ್ಲರೂ ಬಸವ ತತ್ವಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.
ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಲಿಂಗ ವಿಭೂತಿ ಕೊಟ್ಟು ಬಸವ ಸಮಾಜ ಹುಲುಸಾಗಿ ಬೆಳೆಸಿದ ಕೀರ್ತಿ ವಿ.ಸಿದ್ದರಾಮಣ್ಣ ಅವರಿಗೆ ಸಲ್ಲುತ್ತದೆ. ಪೂಜ್ಯರು, ದೊಡ್ಡ ಮಠಾಧಿಧೀಶರು ಮಾಡದ ಕೆಲಸ ಅವರು ಮಾಡಿದ್ದರು ಎಂದರೆ ಕಾರ್ಯ ವಿಸ್ಮಯವಾಗಿದೆ ಎಂದು ಬಣ್ಣಿಸಿದರು.
ಹುಲಸೂರ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ವಿ.ಸಿದ್ದರಾಮಣ್ಣ ಅವರು ಜಂಗಮ ವಿವಿಧ ಪದ್ಯ ನಾಟಕಗಳು ಬರೆದು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಹುಲಸೂರನಲ್ಲಿ ಅವರ ಸಹ ಶತಮಾನೋತ್ಸವ ಮಾಡುತ್ತೇವೆ ಎಂದರು.
ಅನುಭವ ಮಂಟಪದ ಅಧ್ಯಕ್ಷರಾದ ಡಾ| ಬಸವಲಿಂಗಪಟ್ಟದೇವರು ಮಾತನಾಡಿ, ಬಸವ ತತ್ವವನ್ನು ಕಲ್ಯಾಣಕ್ಕೆ ಬಂದ ಶರಣರಿಗೆ ತಿಳಿಸುವುದೇ ಸಿದ್ದರಾಮಣ್ಣನವರ ಕಾಯಕವಾಗಿತ್ತು. ಎಲ್ಲೆಡೆ ರುದ್ರಾಭಿಷೇಕ ನಡೆದರೆ ಜಿಲ್ಲೆಯಲ್ಲಿ ವಚನಾಭಿಷೇಕ ಕಾರ್ಯ ಮಾಡಿದ್ದಾರೆ ಎಂದರು.
ಪ್ರೊ| ವಿಜಯಶ್ರೀ ದಂಡೆ, ಡಾ| ಅಕ್ಕ ಅನ್ನಪೂರ್ಣ ತಾಯಿ, ಅಕ್ಕ ಗಂಗಾಂಬಿಕಾ ಪಾಟೀಲ ಮಾತನಾಡಿದರು. ಚಿತ್ರದುರ್ಗದ ಪುಟ್ಟಸ್ವಾಮಿ, ದಾವಣಗೆರೆಯ ವಿಭೂತಿ ಬಸವಾನಂದ ಶರಣರು, ಡಾ| ಬಸವರಾಜ ಮಠಪತಿ, ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ರಮೇಶ ಮಠಪತಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ ಧನ್ನೂರ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುಂಡಯ್ನಾ ತೀರ್ಥಾ, ರವೀಂದ್ರ ಶಾಬಾದಿ, ಶಿವಸ್ವಾಮಿ ಚೀನಕೆರಾ, ಗುರುನಾಥ ಗಡ್ಡೆ, ಅಲ್ಲಮಪ್ರಭು ನಾವದೇಗರೆ, ಶಿವಕುಮಾರ ಸಾಲಿ, ಪ್ರಕಾಶ ಗಂದಿಗುಡೆ, ಶಿವಶಂಕರ ಟೋಕರೆ, ಜಗನ್ನಾಥ ಶಿವಯೋಗಿ, ವೀರಪ್ಪ ಜೀರಗೆ, ಶಂಕರೆಪ್ಪ ಸಜ್ಜನಶೆಟ್ಟಿ, ಲಿಂಗಾರತಿ ನಾವದೇಗೆರೆ ವಿವಿಧ ಪ್ರಮುಖರು ಇದ್ದರು.
100 ವರ್ಷ ಬದುಕಿದ್ದು ಸಂತೃಪ್ತಿ ತಂದಿದೆ. ಮೂಢನಂಬಿಕೆ ಹೋಗಲಾಡಿಸಿ ಎಲ್ಲರೂ ಧರ್ಮ ಜ್ಯೋತಿಯಾಗಿ ಬಾಳ್ಳೋಣ. ಬಸವಣ್ಣನಿಂದ ಜಗ ಬೆಳಗಲಿ. -ವಿ.ಸಿದ್ದರಾಮಣ್ಣ ಶರಣರು