ವೀರಭದ್ರೇಶ್ವರ ಜಾತ್ರೆ ರದ್ದು: ಜಾತ್ರೆಗೆಂದು ಜನರು ಪಟ್ಟಣಕ್ಕೆ ಬರಬೇಡಿ ಶಾಸಕ ಪಾಟೀಲ ಮನವಿ
Team Udayavani, Jan 23, 2022, 1:44 PM IST
ಹುಮನಾಬಾದ: ಕಲ್ಯಾಣ ಕರ್ನಾಟ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಹುಮನಾಬಾದ ಶ್ರೀ ವೀರಭದ್ರೇಶ್ವರ ಜಾತ್ರೆ ಈ ವರ್ಷವೂ ಕೂಡ ರದ್ದು ಮಾಡಲಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇದ ಕಾರಣ ಈ ವರ್ಷ ಜಾತ್ರೆ ರದ್ದು ಮಾಡಲಾಗಿದ್ದು, ವೀರಭದ್ರನ ಭಕ್ತರು ಸಹಕರಿಬೇಕಾಗಿದೆ. ವೀರಭದ್ರನ ಭಕ್ತರು ಮನೆಯಲ್ಲಿ ಉಳಿದುಕೊಂಡು ಮನ ಮಂದಿರದಲ್ಲಿ ವೀರಭದ್ರ ಸ್ವಾಮಿಯನ್ನು ನೆನೆಸಿಕೊಂಡು ಭಕ್ತಿ ಸಮರ್ಪಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಅಂಗಡಿಗಳು ಹಾಕುವಂತಿಲ್ಲ: ಜಾತ್ರೆ ರದ್ದಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜಾತ್ರೆಗೆ ಬರುವ ವ್ಯಾಪರಸ್ಥರು ಯಾವುದೇ ಅಂಗಡಿಗಳು ಹಾಕುವಂತಿಲ್ಲ. ಸರ್ಕಾರದ ನಿಯಮ ಅನುಸಾರ ಅತಿ ಸರಳ ಧಾರ್ಮಿಕ ಆಚರಣೆಗಳು ಮಾತ್ರ ನಡೆಯಲ್ಲಿದ್ದು, ಬೇರೆಕಡೆಗಳಿಂದ ಭಕ್ತರು ಜಾತ್ರೆಗೆಂದು ಬರಬಾರದು. ಯಾರಿಗೂ ಕೂಡ ಎಲ್ಲಿಯೂ ಪ್ರವೇಶ ಇರುವುದಿಲ್ಲ. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಇರಲ್ಲಿದ್ದು, ಈ ವರ್ಷ ಭಕ್ತರು ಸಹಕಾರ ನೀಡಬೇಕು ಮುಂದಿನ ವರ್ಷ ಅದ್ದೂರಿ ಜಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ತಹಸೀಲ್ದಾರ ಡಾ। ಪ್ರದೀಪಕುಮಾರ ಹಿರೇಮಠ, ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಣ್ಣಾ ಪಾಟೀಲ, ಮಲ್ಲಿಕಾರ್ಜುನ ಮಾಶೆಟ್ಟಿ ಸೇರಿದಂತೆ ಇತರರು ಇದ್ದರು.