ಅಗ್ನಿಶಾಮಕ ದಳದಿಂದ 24×7 ಸೇವೆ
Team Udayavani, Apr 18, 2021, 8:10 PM IST
ಕೊಲ್ಹಾರ: ಬೆಂಕಿ ಮಾನವ ಜೀವನಕ್ಕೆ ಅವಶ್ಯಕ. ಅಜಾಗೂರುಕತೆ ಮಾಡಿದರೆ ಅಪಾಯಕಾರಿ. ಅಗ್ನಿಶಾಮಕ ದಳದವರು 24 ಗಂಟೆಯೂ ಸೇವೆ ನೀಡುತ್ತಾರೆ. ಅಗ್ನಿ ದುರಂತ, ತುರ್ತು ಸೇವೆಗಳಿಗಾಗಿ ಸದಾ ಸನ್ನದ್ಧರಾಗಿರುತ್ತಾರೆ ಎಂದು ಬೀಳಗಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಜಿ.ಎಚ್. ಮಾಗಿ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢಶಾಲೆ ಸಭಾ ಭವನದಲ್ಲಿ ಶನಿವಾರ ಎನ್‌ಎಸ್‌ಎಸ್ ಘಟಕ ಕೊಲ್ಹಾರ ಹಾಗೂ ಬೀಳಗಿ ಅಗ್ನಿಶಾಮಕ ಸಹಯೋಗದಲ್ಲಿ ನಡೆದ ಅಗ್ನಿಶಾಮಕ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಮನುಷ್ಯನ ಅಜಾಗರೂಕತೆಯಿಂದ ಅಗ್ನಿ ಅವಘಡಗಳು ಸಂಭವಿಸಿ, ಪ್ರಾಣ ಹಾನಿಗಳಾಗುತ್ತಿದ್ದು, ಅದರ ನಿರ್ವಹಣೆ ಮತ್ತು ಅಗ್ನಿ ಅವಘಡಗಳನ್ನು ತಗ್ಗಿಸುವ ಪ್ರಮುಖ ಸಾಧನಗಳ ಬಗ್ಗೆ ಗೊತ್ತಿರಬೇಕೆಂದರು.
ಬೆಂಕಿ ದುರಂತವಾದಾಗ ಪಾರಾಗುವ ರೀತಿಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಅನಿಲ, ನೀರು, ಮರಳು, ಗೋಣಿ ಚೀಲ ಮುಂತಾದವುಗಳನ್ನು ಉಪಯೋಗಿಸಿ ಬೆಂಕಿಯನ್ನು ನಂದಿಸುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ಹಾಗೂ ಬೆಂಕಿ ಅವಘಡವಾದಾಗ ಸ್ವರಕ್ಷಣೆ ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ಬೆಂಕಿ ನಂದಿಸುವ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, ಅಗ್ನಿ ದುರಂತ ಮತ್ತು ತುರ್ತು ಸೇವೆ ಸಂದರ್ಭದಲ್ಲಿ ಜನರು ಅಗ್ನಿ ಶಾಮಕ ಠಾಣೆಯನ್ನು ಸಂಪರ್ಕಿಸಲು ಕೋರಿದರು.
ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬೆಂಕಿ ನಂದಿಸುವುದು ಹೇಗೆ ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಕಾರ್ಯಕ್ರಮದಲ್ಲಿ ಫೈರ್ ಮ್ಯಾನ್ ದೇವೇಂದ್ರ ರಾಠೊಡ, ಎಚ್.ಎಸ್. ಮುಚಕಂಡಿ, ಶಾಲಾ ಮುಖ್ಯೋಪಾಧ್ಯಾಯ ಎಮ್.ಎಮ್. ಗುಬ್ಬೆವಾಡಿ, ಶಿಕ್ಷಕರಾದ ಎಸ್.ಟಿ. ಯಡಹಳ್ಳಿ, ಎ.ಎಮ್. ಬನ್ನೂರ, ಸಂಗಮೇಶ ಗಿಡ್ಡಪ್ಪಗೋಳ, ಎಸ್.ವಿ. ಪಾಟೀಲ, ಬಿ.ಎಸ್. ಮುದೂ°ರ ಇದ್ದರು.