ಭ್ರೂಣಲಿಂಗ ಪತ್ತೆ ಮಾಡಿದರೆ ಕ್ರಮ; ಸುಜಾತಾ ಕಳ್ಳಿಮನಿ
ಮುಳವಾಡ ಜಿಪಂ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹನಿ ನೀರಾವರಿ ಬೆಳೆಗಳ ಬಗ್ಗೆ ತನಿಖಾ ತಂಡದಿಂದ ಪರಿಶೀಲಿಸಲಾಗಿದೆ
Team Udayavani, Feb 10, 2021, 6:00 PM IST
ವಿಜಯಪುರ: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಅಕ್ರಮ ಕೃತ್ಯದಲ್ಲಿ ತೊಡಗಿದ್ದು ಕಂಡು ಬಂದಲ್ಲಿ, ಅಂಥ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಆಸ್ಪತ್ರೆಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಿದ ದೂರುಗಳು ಕೇಳಿ ಬರುತ್ತಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಶೀಘ್ರವಾಗಿ ವೈದ್ಯಾಧಿಕಾರಿ ಭರ್ತಿಗೆ ಕ್ರಮ ವಹಿಸಬೇಕು. ಎಂಬಿಬಿಎಸ್ ಶಿಕ್ಷಣ ಪಡೆದ ವೈದ್ಯರು ಲಭ್ಯವಾಗದಿದ್ದಲ್ಲಿ ಆಯುರ್ವೇದ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಅಗತ್ಯ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವ ಜೊತೆಗೆ ರಾಜ್ಯ ಮಟ್ಟದಲ್ಲಿ ಗರಿಷ್ಠ ಫಲಿತಾಂಶ ಪಡೆಯುವತ್ತ ವಿಶೇಷ ಗಮನ ನೀಡಬೇಕು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಗುರುತಿಸಿ, ಅಂತಹ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ತುಂಬುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ಭ್ರೂಣ ಲಿಂಗ ಪತ್ತೆ ಮಾಡುವಂತಹ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯರ ಕೊರತೆ ನೀಗಿಸಲು ಶೀಘ್ರವಾಗಿ ವೈದ್ಯಾಧಿಕಾರಿಗಳ ಭರ್ತಿಗೆ ಕ್ರಮ ವಹಿಸಬೇಕು. ಎಂಬಿಬಿಎಸ್ ಆದ ವೈದ್ಯರು ಸಿಗದಿದ್ದಲ್ಲಿ ಆಯುರ್ವೇದ ವೈದ್ಯರನ್ನು ನಿಯೋಜಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಎಲ್ಲೆಡೆ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಸಮಸ್ಯಾತ್ಮಕ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2020-21ನೇ ಸಾಲಿನಲ್ಲಿ 148.91 ಕೋಟಿ ರೂ . ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಕೈಗೊಂಡ ಕಾಮಗಾರಿಗಾರಿಗಳ ಕುರಿತು ಎಲ್ಲ ಸದಸ್ಯರಿಗೆ ಕ್ಷೇತ್ರವಾರು ಅನುದಾನದ ವೆಚ್ಚ ಮಾಹಿತಿ ಒದಗಿಸುವಂತೆ ತಿಳಿಸಿದರು.
2019-20ನೇ ಸಾಲಿನ ಕ್ರಿಯಾಯೋಜನೆ ಅಡಿ ಕೈಗೊಂಡ ಕಾಮಗಾರಿಗೆ ಕುರಿತು ನಿರ್ಮಿತಿ ಕೇಂದ್ರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೂಚಿಸಿದರು. ಮುಳವಾಡ ಜಿಪಂ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹನಿ ನೀರಾವರಿ ಬೆಳೆಗಳ ಬಗ್ಗೆ ತನಿಖಾ ತಂಡದಿಂದ ಪರಿಶೀಲಿಸಲಾಗಿದೆ. ಆದರೆ ಈ ಕುರಿತು ಪುನರ್ ಪರಿಶೀಲಿಸಿ ವರದಿ ನೀಡುವ ಜೊತೆಗೆ, ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಗುಣಮಟ್ಟದ ರಸ್ತೆ ಸುಧಾರಣೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಅಧಿಕಾರಿಗಳು ಸ್ಥಳದಲ್ಲಿ ಕಾಮಗಾರಿ ಪರಿಶೀಲಿಸಿ ವರದಿ
ಸಲ್ಲಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಗ್ರಾಮೀಣ ನೀರು ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆಸಲಾಗಿದೆ. ಬೋರ್‌ವೆಲ್‌ಗಳಿಗೆ ಮೋಟಾರ್, ಕೈಪಂಪ್ ಹಾಗೂ ಹೆಸ್ಕಾಂ ಉಪವಿಭಾಗ ಸಿಂದಗಿ ಇವರ ಮೂಲಕ ಟಿಸಿ ಅಳವಡಿಸುವ ಕಾರ್ಯದ ಬಗ್ಗೆ ಸದಸ್ಯರಿಂದ ದೂರು ಬಂದಿವೆ. ಹೀಗಾಗಿ ಸಿಂದಗಿ ಭಾಗದಲ್ಲಿ ಅನುಕೂಲಕ್ಕಾಗಿ ಹೆಚ್ಚುವರಿ ಸೆಕ್ಷನ್ ಆಫೀಸರ್ ಇಬ್ಬರನ್ನು ನಿಯೋಜಿಸಲಾಗಿದೆ ಎಂದರು.
ಮಿಣಜಗಿ ಗ್ರಾಮದಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೇಂದ್ರ ಸರ್ಕಾರದ ಲಿಕ್ವಿಡ್ ವೆಸ್ಟ್ ಮ್ಯಾನೇಜ್ ಮೆಂಟ್ ಯೋಜನೆ ಅಡಿಯಲ್ಲಿ ಆದ್ಯತೆ ಮೇಲೆ ಇಂಗು ಬಚ್ಚಲು ಪೈಲಟ್ ಕಾರ್ಯಕ್ರಮ ರೂಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ನಡಾವಳಿಗಳಿಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.