ಗುಮ್ಮಟ ನಗರಿಯೊಂದಿಗೆ ಅಂಬಿ ನಂಟು

Team Udayavani, Nov 26, 2018, 11:48 AM IST

ವಿಜಯಪುರ: ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ “ಅಂಬರೀಷ್‌’ ಗುಮ್ಮಟ ನಗರಿಯೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ವಿಜಯಪುರದಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅಂಬರೀಷ್‌ ಅವರಿಗೆ ವಿಜಯಪುರದಲ್ಲಿಯೂ ದೊಡ್ಡ ಪರಮಾಪ್ತ ಬಳಗವಿದೆ. ಅಂಬರೀಷರ ಅಕಾಲಿಕ ನಿಧನ ವಿಜಯಪುರ ಜಿಲ್ಲೆಯ ಅಭಿಮಾನಿಗಳಿಗೆ ಬರಸಿಡಿಲಿನಂತೆ ಎರಗಿದೆ. 

ಪ್ರಸ್ತುತ ವಿಧಾನ ಪರಿಷತ್‌ ಸದಸ್ಯರಾಗಿರುವ ಸುನೀಲಗೌಡ ಪಾಟೀಲ ಅವರ ವಿವಾಹ ಸಮಾರಂಭಕ್ಕೆ ಅಂಬರೀಷ್‌ ವಿಜಯಪುರಕ್ಕೆ ಬಂದಿದ್ದರು. ವಿವಾಹ ನಡೆದ ಬಿಎಲ್‌ಡಿಇ ಆವರಣದಲ್ಲಿ ಅಂಬರೀಷ್‌ ನೋಡಲು ಭಾರಿ ನೂಕುನುಗ್ಗಲು ಆಗಿತ್ತು. ವಧು-ವರರನ್ನು ಆಶೀರ್ವದಿಸಿ ವೇದಿಕೆ ಇಳಿದು ಬಿಎಲ್‌ಡಿಇ ಅತಿಥಿ ಗೃಹಕ್ಕೆ ಬರುವವರೆಗೆ ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳು ಅಂಬರೀಷ್‌ ಅವರನ್ನು ಮುತ್ತಿಕೊಂಡಿದ್ದರು.ಆಗ ಎರಡು ದಿನಗಳ ಕಾಲ ವಿಜಯಪುರದಲ್ಲಿಯೇ ಅಂಬರೀಷ್‌ ವಾಸ್ತವ್ಯ ಮಾಡಿದ್ದರು. ಸುಶೀಲಕುಮಾರ ಶಿಂಧೆ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲರೊಡನೆ ಅವಿನಾಭಾವ ಒಡನಾಟವನ್ನು ಎಂ.ಬಿ. ಪಾಟೀಲರೊಡನೆ ಅಂಬರೀಷ್‌ ಹೊಂದಿದ್ದರು.

ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾಗ ಸುಶೀಲಕುಮಾರ ಶಿಂಧೆ 2005ರಲ್ಲಿ ಜುಗನು ಮಹಾರಾಜರ ನೇತೃತ್ವದಲ್ಲಿ ಸೋಮದೇವರಹಟ್ಟಿ ಜಾತ್ರೆಗೆ ಶಿಂಧೆ ಅವರನ್ನು ಎಂ.ಬಿ. ಪಾಟೀಲರು ಆಹ್ವಾನಿಸಿದ್ದರು. ಶಿಂಧೆಯವರು ನಮ್ಮ ಕ್ಷೇತ್ರ ಸೋಮದೇವರಹಟ್ಟಿಗೆ ಆಗಮಿಸುತ್ತಿದ್ದಾರೆ. ನೀವು ಬನ್ನಿ ಎಂದು ಎಂ.ಬಿ. ಪಾಟೀಲರು ಅಂಬರೀಷ್‌ ಅವರನ್ನು ಆಹ್ವಾನಿಸಿದ್ದರು. ಶಿಂಧೆಯವರನ್ನು ಕಾರ್ಯಕ್ರಮಕ್ಕೆ ಕರೆದಿದ್ದಾರೆ ಅದಕ್ಕೆ ಬರುತ್ತಿದ್ದಾರೆ. 

ಅಲ್ಲಿನವರು ಕರಿಯದೇ ಬರಲು ನಾನೇನು ಖಾಲಿ ಸೀಟೆ? ಎಂದು ಅಂಬರೀಷ್‌ ಹಾಸ್ಯ ಚಟಾಕಿ ಹಾರಿಸಿದ್ದರು. ಕೂಡಲೇ ಎಂ.ಬಿ. ಪಾಟೀಲರು ವಿಜಯಪುರಕ್ಕೆ ಕರೆ ಮಾಡಿ ಸಂಘಟಕರಿಂದ ಇನ್ನೊಂದು ಆಮಂತ್ರಣ ಪತ್ರದಲ್ಲಿ ಅಂಬರೀಷ್‌ ಹೆಸರು ಹಾಕಿಸಿ ಮುದ್ರಣ ಮಾಡಿ. ನೋಡಿ ಇದೀಗ ಅಧಿಕೃತ ಆಹ್ವಾನವಿದೆ ಬನ್ನಿ ಎಂದು ಕರೆದಿರುವ ಘಟನೆಯನ್ನು ಡಾ| ಮಹಾಂತೇಶ ಬಿರಾದಾರ ನೆನಪಿಸಿಕೊಂಡು ಕಣ್ಣೀರಿಟ್ಟರು.

ಬೆಳಗ್ಗೆ ಸೊಲ್ಲಾಪುರದಿಂದ ಶಿಂಧೆಯವರು ಬಂದು ಕಾರ್ಯಕ್ರಮಕ್ಕೆ ಹೊರಡಲು ಅಣಿಯಾದರು. ಅಂಬರೀಷ್‌ ಇನ್ನೂ ಎದ್ದಿರಲಿಲ್ಲ. ರಾಜ್ಯಪಾಲರ ಶಿಷ್ಟಾಚಾರವನ್ನು ಬದಿಗೊತ್ತಿ ಸುಶೀಲಕುಮಾರ ಶಿಂಧೆ ಅವರೇ ಅಂಬರೀಷ್‌ ಅವರ ಕೊಠಡಿಗೆ ಹೋಗಿ “ಹಮಾರಾ ಅಭಿನೇತಾ ಅಭಿತಕ್‌ ತಯಾರ್‌ ನಹಿ ಹುವಾ ಕ್ಯಾ’ ಎಂದು ಅವರನ್ನು ಕರೆದುಕೊಂಡೆ ಉಪಹಾರಕ್ಕೆ ಬಂದಿರುವ ಘಟನೆಯನ್ನು ಇಂದಿಗೂ ಅನೇಕರು ನೆನಪಿಸಕೊಳ್ಳುತ್ತಾರೆ. 

ಉಪ್ಪಿಟ್ಟಿಗೆ ಮನಸೋತ ರೆಬೆಲ್‌ ಸ್ಟಾರ್‌: ಉದ್ಯಮಿ ಅಶೋಕ ಖೇಣಿ 2011ರಲ್ಲಿ ತಮ್ಮ ಜನ್ಮದಿನವನ್ನು ವಿಜಯಪುರದ ಬಿಎಲ್‌ಡಿಇ ಮೈದಾನದಲ್ಲಿ ಅಚರಿಸಿಕೊಂಡಾಗ, ಅಂಬರೀಷ್‌ ಚಿತ್ರನಟ ಸುದೀಪ ಅವರೊಂದಿಗೆ ಬಂದು ನಮ್ಮ ಎಂ.ಬಿ. ಪಾಟೀಲರ ಮನೆಯಲ್ಲಿಯೇ ತಂಗಿದ್ದರು. ಆಗ ಜಿಪಂ ಅಧ್ಯಕ್ಷರಾಗಿದ್ದ ಬಸವರಾಜ ದೇಸಾಯಿ ಅಂಬರೀಷರೊಡನೆ ಚರ್ಚೆ ಮಾಡುತ್ತ ಜೈನಾಪುರದ ಸಂಸ್ಕೃತಿ ವಿವರಿಸಿ ಜವೆಗೋಧಿ ಉಪ್ಪಿಟ್ಟು ಬಾರಿ ಫೇಮಸ್ಸು ಎಂದಿದ್ದರು. 

ಹಾಗಿದ್ದರೇ ಬೆಳಗ್ಗೆ ಜವೆಗೋಧಿ ಉಪ್ಪಿಟ್ಟೇ ಬೇಕು ಎಂದಿದ್ದರು ಅಂಬರೀಷ್‌. ರಾತ್ರೋರಾತ್ರಿ ಜೈನಾಪುರಕ್ಕೆ ಫೋನ್‌ ಮಾಡಿ ಜವೆ ಸ್ವತ್ಛಗೊಳಿಸಿ ಗಿರಿಣಿಯವರನ್ನು ಎಬ್ಬಿಸಿ, ಕುಟ್ಟಿ ನಸುಕಿನಲ್ಲಿ ರವಾವನ್ನು ವಿಜಯಪುರಕ್ಕೆ ತೆಗೆದುಕೊಂಡು ಬಂದು ದೇಸಾಯಿ ಉಪ್ಪಿಟ್ಟು ಬಡಿಸಿದ್ದರು. ಉಪ್ಪಿಟ್ಟು ರುಚಿ ಸವಿದ ಅಂಬರೀಷ್‌ ಪರವಾಗಿಲ್ಲ ಕಣಯ್ಯ, ಉತ್ತರ ಕರ್ನಾಟಕದವರು ಒಳ್ಳೆ ಟೇಸ್ಟಿ ಜನ ಎಂದಿದ್ದರು ಎಂದು ಬಸವರಾಜ ದೇಸಾಯಿ ಅಂದಿನ ದಿನ ನೆನಪಿಸಿಕೊಂಡು ಕಣ್ಣೀರಿಟ್ಟರು.

ಮಾಮಾ ಊರು ಬಂತು 
2008ರ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸುಶೀಲಕುಮಾರ ಶಿಂಧೆ, ಅಂಬರೀಷ್‌ ಮತ್ತು ಕುಮಾರ ಬಂಗಾರಪ್ಪನವರು ಜೊತೆಗೂಡಿ ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಎಂ.ಬಿ. ಪಾಟೀಲ ಪರ ಪ್ರಚಾರಕ್ಕೆ ಆಗಮಿಸಿದ್ದರು.

ಸಂಜೆ ವಿಜಯಪುರದಿಂದ ಹೊರಟು ಮೊದಲು ತಿಕೋಟಾದಲ್ಲಿ ಕಾರ್ಯಕ್ರಮ ಮುಗಿಸಿದೇವು. ನಂತರ ಮಮದಾಪುರ ಕಡೆ ಇನ್ನೊಂದು ಕಾರ್ಯಕ್ರಮಕ್ಕೆ ಹೊರಟೆವು. ಬಬಲೇಶ್ವರ ದಾಟಿದ ನಂತರ ಎಲ್ಲಯ್ಯ ನಿನ್ನ ಊರು ಇನ್ನೂ ಬರ್ತಾನೇ ಇಲ್ಲ. ರಾತ್ರಿಯಾಯಿತು ಸಾಕು ನಡೀರಿ ಎಂದು ಎಂ.ಬಿ. ಪಾಟೀಲರನ್ನು ದಬಾಯಿಸಹತ್ತಿದರು. ನಾನು ಅದು ನೋಡಿ ಲೈಟ್ಸ್‌ ಕಾಣುತ್ತಿವೆ ಅದೇ ಮಮದಾಪುರ ಎಂದೇ ಆ..ಆ.. ಲೈಟ್ಸ್‌ ಕಾಣ್ತೆವೆ.. ಕಾಣ್ತೆವೆ… ತಡಾ ಆದರೆ ಇನ್ನೂ ನಿನ್ನ ಲೈಟ್ಸ್‌ ಹಚಿ¤ನಿ ಎಂದರು. ಕುಮಾರ ಬಂಗಾರಪ್ಪ ಊರು ಬಂತು ಮಾಮಾ… ಊರು ಬಂತು ಮಾಮಾ… ಎಂದು ಸಮಾಧಾನ ಮಾಡುತ್ತಿದ್ದರು ಎಂದು ಎಂ.ಬಿ. ಪಾಟೀಲರ ಆಪ್ತರು ನೆನಪಿಸಿಕೊಳ್ಳುತ್ತಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ