ಡಾಕ್ಟರ್‌ಗೆ ಬ್ಲ್ಯಾಕ್‌ಮೇಲ್‌: ನಾಲ್ವರುಪತ್ರಕರ್ತರ ಬಂಧನ-ನ್ಯಾಯಾಂಗ ಕಸ್ಟಡಿಗೆ

Team Udayavani, Mar 28, 2019, 3:45 PM IST

ವಿಜಯಪುರ: ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವೈದ್ಯರೊಬ್ಬರನ್ನು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡುತ್ತಿದ್ದ ವೇಳೆ ಬ್ಲ್ಯಾಕ್‌ ಮೇಲ್‌ ಪತ್ರಕರ್ತರ ತಂಡ ಪೊಲೀಸರ ಬಲೆಗೆ ಬಿದ್ದಿದ್ದು, ಬಂಧಿತರು ಜೈಲು ಸೇರಿದ ಘಟನೆ ನಗರದಲ್ಲಿ ನಡೆದಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಪ್ರಕಾಶ ನಿಕ್ಕಂ ಈ ಪ್ರಕರಣದ ಮಾಹಿತಿ ನೀಡಿದರು. ಸುವರ್ಣ ಸುದ್ದಿ ವಾಹಿನಿ ವಿಜಯಪುರ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್‌ ಸಂಗಮೇಶ ಕುಂಬಾರ, ಸಂಗ್ರಾಮ ಪಾಕ್ಷಿಕ ಪತ್ರಿಕೆ ಸಂಪಾದಕ ರವಿ ಬಿಸನಾಳ, ಹಲೋ ಬೆಂಗಳೂರು ಪಾಕ್ಷಿಕ ಪತ್ರಿಕೆ ಜಿಲ್ಲಾ ವರದಿಗಾರ ಬಸವರಾಜಲಗಳಿ ಅವರು ನಗರದ ಡಾ|ಕಿರಣ ವಸಂಲಾಲ್‌ ಓಸ್ವಾಲ್‌ ಎಂಬ ವೈದ್ಯರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಬೆದರಿಕೆ ಹಾಕಿ ಪೊಲೀಸರ ಬಲೆಗೆ ಬಿದ್ದವರು.
ಬಂಧಿತರನ್ನು ಏ.3ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೂರ್ವಯೋಜಿತ ಕೃತ್ಯದಲ್ಲಿ ಪಾಲ್ಗೊಂಡ ಮಹಿಳೆ ಅಥಣಿ ಮೂಲದ ಆಶಾ ಲಕ್ಷ್ಮಣ ಜಗಡೆ ಹಾಗೂ ನಿಂಗನಗೌಡ ಪಾಟೀಲ ತಲೆ ಮರೆಸಿಕೊಂಡಿದ್ದು ಇವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.
ಏನಾಯ್ತು?: ಗರ್ಭಿಣಿ ಆಶಾ ಪಾಟೀಲ ಎಂಬುವವರನ್ನು ಪತ್ರಕರ್ತ ಪ್ರಸನ್ನ ದೇಶಪಾಂಡೆ ಹಾಗೂ ಈತನ ತಂಡ ಮಾ.24ರಂದು ನಗರದ ಡಾ| ಕಿರಣ ಓಸ್ವಾಲ್‌ ಅವರ ವಸಂತಲೀಲಾ ಸ್ಕ್ಯಾನಿಂಗ್‌ ಸೆಂಟರ್‌ಗೆ ಕಳುಹಿಸಿದೆ. ಅಲ್ಲಿ ಆಕೆ
ತನ್ನ ಹೆಸರು ಮಲ್ಲಮ್ಮ ಬಿರಾದಾರ ಎಂದು ಹೇಳಿ ಭ್ರೂಣ ಲಿಂಗಪತ್ತೆ ಮಾಡುವಂತೆ ಕೋರಿದ್ದಾರೆ. ಡಾ| ಕಿರಣ ಇದಕ್ಕೆ ಒಪ್ಪದೆ ಔಷಧಿ ಬರೆದು ಕಳಿಸಿದ್ದಾರೆ. ಔಷಧಿ ಪಡೆದು ಆಸ್ಪತ್ರೆಗೆ ಹೋಗುತ್ತಿದ್ದಂತೆ ಪೂರ್ವಯೋಜಿತ ಸಂಚು ರೂಪಿಸಿದ ಆರೋಪಿಗಳೆಲ್ಲ ಆಸ್ಪತ್ರೆ ಪ್ರವೇಶಿಸಿದ್ದಾರೆ. ಇದರಲ್ಲಿ ರವಿ ಬಿಸನಾಳ ಎಂಬಾತ ಡಾ| ಕಿರಣ ಜೇಬಿನಲ್ಲಿ 20 ಸಾವಿರ ಹಣವನ್ನು ಬಲವಂತವಾಗಿ ಇರಿಸಿದ್ದು, ಅದನ್ನು ಪ್ರಸನ್ನ ದೇಶಪಾಂಡೆ ಸೂಚನೆಯಂತೆ ಸಂಗಮೇಶ ಕುಂಬಾರ ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದಾರೆ.
ಮಾ.24ರಂದು ಆರಂಭದಲ್ಲಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ಈ ತಂಡ, ನಂತರ 10 ಲಕ್ಷ ರೂ. ಗೆ ಚೌಕಾಶಿ ಮಾಡಿ ಡಾ|ಕಿರಣ ಬಳಿ ಇದ್ದ 1.05 ಲಕ್ಷ ರೂ. ಬಲವಂತಾಗಿ ಸುಲಿಗೆ ಮಾಡಿಕೊಂಡು ಹೋಗಿದೆ. ಅಲ್ಲದೇ ಉಳಿದ 9 ಲಕ್ಷ ರೂ. ಹಣವನ್ನು ನಾಳೆ ಬಂದು ಪಡೆಯುತ್ತೇವೆ, ಹೊಂದಿಸಿ ಇರಿಸಿಕೊಳ್ಳುವಂತೆ ತಾಕೀತು ಮಾಡಿದೆ.
ಇದರಿಂದ ಕಂಗಾಲಾದ ಡಾ| ಕಿರಣ ಓಸ್ವಾಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಮಾ.26ರಂದು ಮಧ್ಯಾಹ್ನ ನಗರದ ಹೋಟೆಲ್‌ ನಲ್ಲಿ 9 ಲಕ್ಷ ರೂ. ಹಣ ಪಡೆಯುತ್ತಿದ್ದಾಗ ಪ್ರಸನ್ನ, ರವಿ ಬಿಸನಾಳ, ಬಸವರಾಜ ಹಾಗೂ ಸಂಗಮೇಶ
ಅವರನ್ನು ಎಎಸ್ಪಿ ಬಿ.ಎಸ್‌. ನ್ಯಾಮಗೌಡ, ಡಿಎಸ್ಪಿ ಡಿ.ಆಶೋಕ ನೇತೃತ್ವದಲ್ಲಿದ್ದ ಗಾಂಧಿ ಚೌಕ್‌ ಠಾಣೆ, ಎಪಿಎಂಸಿ, ಗ್ರಾಮಿಣ ಠಾಣೆ ಪೊಲೀಸರ ತಂಡ ದಾಳಿ ನಡೆಸಿ ಬಂಧಿಸಿದೆ ಎಂದು ವಿವರಿಸಿದರು.
ಗರ್ಭಿಣಿ ತನ್ನ ಹೆಸರನ್ನು ಮಲ್ಲಮ್ಮ ಬಿರಾದಾರ ಸಾ| ಬಿಜಾಪುರ ಎಂದು ಸುಳ್ಳು ಹೇಳಿದ್ದು, ತನಿಖೆಯ ವೇಳೆ ಆಕೆ ಅಥಣಿ ಮೂಲದ ಆಶಾ ಲಕ್ಷ್ಮಣ ಜಗಡೆ ಹಾಗೂ ಆಕೆಯ ಸಂಬಂಧಿಯಂತೆ ನಟಿಸಿದ ವ್ಯಕ್ತಿ ನಿಂಗನಗೌಡ ಎಂದು ಗೊತ್ತಾಗಿದೆ. ಈ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬ್ಲ್ಯಾಕ್‌ಮೇಲ್‌ ಪತ್ರಕರ್ತರಿಂದ 1.58 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಫೋನ್‌ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಎಪಿಎಂಸಿ ಠಾಣೆಯಲ್ಲಿ ಡಾ| ಓಸ್ವಾಲ್‌ ನೀಡಿದ ದೂರಿನಂತೆ ಅಪರಾಧಿಕ ಕೃತ್ಯಕ್ಕೆ ಪೂರ್ವಯೋಜಿತ ಸಂಚು, ಬಲವಂತದಿಂದ ಕೂಡಿ ಹಾಕಿದ್ದು, ಸುಲಿಗೆ, ಜೀವ ಬೆದರಿಕೆ, ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಸೆಕ್ಷನ್‌ ಸಹಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಬಂಧಿತ ನಾಲ್ವರನ್ನು ನಗರದ ಒಂದನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಏ.3ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ವಿವರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುದ್ದೇಬಿಹಾಳ: ಅಂತೂ ಇಂತೂ ಸುದೀರ್ಘ‌ ಲೆಕ್ಕಾಚಾರದ ನಂತರ ಬಿಗಿ ನಿಲುವು ತಳೆದ ಪುರಸಭೆ ಅ ಧಿಕಾರಿಗಳು ಪೊಲೀಸ್‌ ಬಂದೋಬಸ್ತ್ ಮಧ್ಯೆ ಪಟ್ಟಣದ ಪ್ರಮುಖ ರಸ್ತೆಗಳ...

  • ಶಂಕರ ಜಲ್ಲಿ ಆಲಮಟ್ಟಿ: ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದ ಕೆಲ ಕಚೇರಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಗೊಳಿಸಿ ಸರ್ಕಾರ ಆದೇಶ ನೀಡಿದ್ದರೂ...

  • ವಿಜಯಪುರ: ಜಾತೀಯತೆ, ಮೂರ್ತಿ ಪೂಜೆ ವಿರುದ್ಧ ಹೋರಾಡಿ ಅದನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಎಲ್ಲ ಮಹಾನ್‌...

  • ವಿಜಯಪುರ: ದೇಶದ ಏಳ್ಗೆ ಮಕ್ಕಳ ಕೈಯಲ್ಲಿದೆ. ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕಾಗಿದೆ. ದೇಶದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡಬೇಕಿದೆ ಎಂದು...

  • ವಿಜಯಪುರ: ಸಂತ ಶ್ರೇಷ್ಠ ಕನಕದಾಸರು ಜಾತಿ ರಹಿತ ಸಮಾಜ ನಿರ್ಮಿಸಲು ಜಾತ್ಯತೀತ, ತತ್ವಾದರ್ಶ ಬೋಧಿ ಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ಅವರ ತತ್ವಾದರ್ಶ...

ಹೊಸ ಸೇರ್ಪಡೆ