ಸರ್ಕಾರಿ ತರಬೇತಿ ಸಂಸ್ಥೆ ಉನ್ನತೀಕರಿಸಲು ಡಿಸಿ ಸೂಚನೆ
ಸದ್ಯ ಈ ತರಬೇತಿ ಕೇಂದ್ರಗಳಿಗೆ ಅನುಮೋದನೆ ನೀಡಿದ್ದು, ತರಬೇತಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ
Team Udayavani, Feb 12, 2021, 6:14 PM IST
ವಿಜಯಪುರ: ವೃತ್ತಿಕೌಶಲ್ಯ ಹೆಚ್ಚಿಸಲು ಜಿಲ್ಲೆಯಲ್ಲಿ ಟಾಟಾ ಟೆಕ್ನಾಲಾಜಿಸ್ ಇವರ ಸಹಯೋಗದಲ್ಲಿ 6 ಸರ್ಕಾರಿ ತರಬೇತಿ ಸಂಸ್ಥೆಗಳು ಉನ್ನತೀಕರಣಕ್ಕೆ ಆಯ್ಕೆಯಾಗಿವೆ. ನಿಗದಿತ ಅವಧಿಯಲ್ಲಿ ಪ್ರಾರಂಭಿಸಿ ತರಬೇತಿ ಕಾರ್ಯ ಮುಂದುವರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕೌಶಲ್ಯಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಟಾಟಾ ಟೆಕ್ನಾಲಜಿಸ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಟೆಕ್ನಾಲಜಿಕಲ್ ಲ್ಯಾಬ್ ಮತ್ತು ವರ್ಕ್ ಶಾಪ್ ಕಟ್ಟಡ ನಿರ್ಮಿಸಲು ಮತ್ತು ನವೀಕರಿಸಲು ನಿರ್ಧರಿಸಲಾಗಿದೆ. ಸದರಿ ಯೋಜನೆಯಲ್ಲಿ ಜಿಲ್ಲೆಯ 6 ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯ ವಿಜಯಪುರ, ಬಸವನಬಾಗೇವಾಡಿ, ತಿಕೋಟಾ, ನಾಲತವಾಡ, ಇಂಡಿ ಮತ್ತು ಬಬಲೇಶ್ವರ ಸರ್ಕಾರಿ ತರಬೇತಿ ಸಂಸ್ಥೆಗಳ ಪ್ರಾಚಾರ್ಯರರ ಮೂಲಕ ಸೂಕ್ತ ಸ್ಥಳ ಗುರುತಿಸಿ, ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸುವಂತೆ ಸೂಚಿಸಿದರು.
ನಿರ್ವಹಣೆ-ಮೇಲ್ವಿಚಾರಣೆ 8 ಉಪ ಸಮಿತಿಗಳನ್ನು ಜಿಲ್ಲಾ ಪರಿಕರ ಕಿಟ್ ಸಿದ್ಧಪಡಿಸಲು ರಚಿಸಲಾಗಿದೆ. ಎಲ್ಲಾ ಸಮಿತಿಗಳು ಫೆ.28 ರೊಳಗೆ ಸಭೆ ಜರುಗಿಸಿ ನಡಾವಳಿ ಪ್ರತಿಗಳನ್ನು ಸಲ್ಲಿಸಲು ಜಿಲ್ಲಾ ಧಿಕಾರಿಗಳು ಸಂಬಂಧಪಟ್ಟ ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನಮಂತ್ರಿ ಕೌಶಲ್ಯ ಹಾಗೂ ಪಿಎಂಕೆವಿವೈ ಯೋಜನೆ ಅಡಿಯಲ್ಲಿ ತರಬೇತಿ ಕೇಂದ್ರಗಳು 2020-21ನೇ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದವು. ಸದ್ಯ ಈ ತರಬೇತಿ ಕೇಂದ್ರಗಳಿಗೆ ಅನುಮೋದನೆ ನೀಡಿದ್ದು, ತರಬೇತಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಂಕಲ್ಪ ಯೋಜನೆಯಡಿ ಸ್ಥಳೀಯ ಯುವಕ, ಯುವತಿಯರನ್ನು ಆಯ್ಕೆ ಮಾಡಿ ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಅನುಕೂಲವಾಗುವಂತೆ ಹೊಸ ಜಾಬ್ ರೋಲ್ ಗಳನ್ನು ಅಳವಡಿಸಿಕೊಳ್ಳಲು ಎಐಸಿಇಎಸ್, ದಾನೇಶ್ವರಿ ವಿದ್ಯಾವರ್ಧಕ ಸಂಘ, ನಿಡಗುಂದಿ ಈ ತರಬೇತಿದಾರರಿಗೆ ಸೂಚಿಸಬೇಕು. ಉದ್ಯಮ ಸಂಪರ್ಕ ಉಪಸಮಿತಿ ಮೂಲಕ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದರು.
ಸಭೆಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಫೆಲೋಶಿಪ್ ಪ್ರತಿನಿಧಿ ರಂಜನಿರಾವ್ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡಿದರು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ, ಉದ್ಯಮಿ ಎಸ್.ವಿ.ಪಾಟೀಲ. ಡಿ.ಎಸ್.ಗುಡ್ಡೋಡಗಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೌಶಲ್ಯ ಅಭಿವೃದ್ಧಿ ಕಚೇರಿ ಲಾಂಛನ ಸ್ಪರ್ಧೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಲೋಗೋ ವಿನ್ಯಾಸಗೊಳಿಸಲು ಸ್ಪರ್ಧೆ ಏರ್ಪಡಿಸಲಾಗಿದೆ. ಇದಕ್ಕಾಗಿ ಸಿದ್ಧಪಡಿಸಿದ ವೆಬ್ಪೇಜ್ಗೆ ಡಿಸಿ ಸುನಿಲಕುಮಾರ ಚಾಲನೆ ನೀಡಿದರು. ಸದರಿ ಲಾಂಛನ ಸ್ಪ ರ್ಧೆಯಲ್ಲಿ ಭಾಗವಹಿಸಲು ಎಲ್ಲ ವಿನ್ಯಾಸಕಾರರನ್ನು ಆಹ್ವಾನಿಸಲಾಗಿದೆ. ಜಿಲ್ಲೆಯ ಇತಿಹಾಸ,ಸಂಸ್ಕೃತಿ ಮತ್ತು ವಿಶಿಷ್ಟತೆಗಳನ್ನು ಬಿಂಬಿಸುವ ಲಾಂಛನ ವಿನ್ಯಾಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಫೆ.26 ರೊಳಗೆ ಲಾಂಛನ ಸಲ್ಲಿಸಬೇಕು. ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಮೊದಲ 3 ವಿನ್ಯಾಸಗಳಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಲಾಗುವುದು. ನಂತರ ವ್ಯವಸ್ಥಾಪಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಗೆ ಅನುಮೋದನೆಗಾಗಿ ಕಳುಹಿಸಲಾಗುವುದು.