ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Team Udayavani, Dec 29, 2017, 1:09 PM IST

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳ (ಎಸಿ) ಕಚೇರಿ ಸ್ಥಾಪಿಸಬೇಕು. ರಾಜ್ಯಸರಕಾರ ರೈತರ ತೊಗರಿಯನ್ನು ಸಂಪೂರ್ಣವಾಗಿ ತೊಗರಿ ಖರೀದಿಸಬೇಕು. ರೈತರ ಜಮೀನುಗಳಿಗೆ ದಾರಿ ನೀಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ನೂರಾರು ರೈತರು ಜಮಾಯಿಸಿ ನಂತರ ಶ್ರೀ ಬಸವೇಶ್ವರ ವೃತ್ತದ ಮೂಲಕ ಬಸ ನಿಲ್ದಾಣದ ಮಾರ್ಗವಾಗಿ ಮಿನಿ ವಿಧಾನ ಸೌಧಕ್ಕೆ ತೆರಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ರಂಜಣಗಿ, ಕಳೆದ ಹಲವಾರು ವರ್ಷಗಳಿಂದ ಬಸವನಬಾಗೇವಾಡಿ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿ ಕಾರಿಗಳ (ಎಸಿ) ಕಚೇರಿ ಸ್ಥಾಪಿಸಬೇಕೆಂದು ಹೋರಾಟ ಮಾಡುತ್ತಾ ಬಂದಿದೆ. ಆದರೆ, ರಾಜ್ಯ ಸರಕಾರ ಮಾತ್ರ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಾಪಿನೆಗೆ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಈ ಹಿಂದೆ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿ ಕಾರಿಗಳ ಕಚೇರಿ ಸ್ಥಾಪನೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಆರಂಭಿಸಿದ ಸಂದರ್ಭದಲ್ಲಿ ಮನಗೂಳಿ, ನಿಡಗುಂದಿ ಹೋಬಳಿ ಕೇಂದ್ರವಾಗಲಿ ಮತ್ತು ಹೊಸ ತಾಲೂಕುಗಳು ಆದ
ಬಳಿಕ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿ  ಕಾರಿಗಳ ಕಚೇರಿ ಸ್ಥಾಪನೆ ಮಾಡಲಾಗುವುದು ಎಂದು ಶಾಸಕರಾದ ಶಿವಾನಂದ ಪಾಟೀಲ ಹಾಗೂ ಸಂಬಂಧಿಸಿದ ಅಧಿಕಾರಿಗಳು ಭರವಸೆ ನೀಡಿದ್ದರು.

ಅದರಂತೆ ಜ. 1ರಂದು ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿ ಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.  ಬಸವನಬಾಗೇವಾಡಿ ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿ ಕಾರಿಗಳ ಕಚೇರಿ ಸ್ಥಾಪಿಸಿದರೆ ಮುದ್ದೇಬಿಹಾಳ, ತಾಳಿಕೋಟೆ, ಕೊಲ್ಹಾರ, ನಿಡಗುಂದಿ ಹಾಗೂ ಬಸವನಬಾಗೇವಾಡಿ ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯ ಸರಕಾರ ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಸರಕಾರ ರೈತರು ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು. ಅಂದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಮತ್ತೆ ರೈತರು ಕಡಿಮೆ ಬೆಲೆಗೆ ತೊಗರಿಯನ್ನು ಮಾರುವ ಸ್ಥಿತಿ ಬಂದೊದಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಒಬ್ಬ ರೈತರಿಂದ 20 ಕ್ವಿಂಟಲ್‌ ಬದಲಾಗಿ ರೈತ ಬೆಳೆದ ಸಂಪೂರ್ಣ ತೊಗರಿಯನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.

ವಿಜಯಪುರ ನಗರ ಘಟಕದ ಅಧ್ಯಕ್ಷ ದೊಂಡಿಬಾ ಪವಾರ ಮಾತನಾಡಿ, ಜಿಲ್ಲಾ ಹಾಗೂ ತಾಲೂಕಿನ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಆಯಾ ತಾಲೂಕು ತಹಶೀಲ್ದಾರರಿಗೆ ಸಮಸ್ಯೆ ಪರಿಹರಿಸುವ ಅಧಿಕಾರ ನೀಡಬೇಕು. ಅಂದಾಗ ಮಾತ್ರ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದರು.

ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತ ಸಂಘದ ವತಿಯಿಂದ ಧರಣಿ ಮತ್ತು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಭೀಮಶಿ ಚಲವಾದಿ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ರಮೇಶ ರಾಠೊಡ, ರಾಮಚಂದ್ರ ಬೊಮ್ಮನಜೋಗಿ, ಸಿದ್ದರಾಮ ಅಂಗಡಗೇರಿ,
ಪರಮಾನಂದ ಮಾಳೂರ, ಸದಾಶಿವ ಪರುಟಗಿ, ಹೊನಕೇರಪ್ಪ ತೆಲಗಿ, ರೇಣುಕಾ ತಳೇವಾರ, ಸುಭಾಸ ನಾಡಗೌಡ, ಗೌರಮ್ಮ ತುಂಬಳಿ, ರೇಣುಕಾ ಹಿಕ್ಕನಗುತ್ತಿ, ಅಪ್ಪಣ್ಣಾ ಪೂಜಾರಿ, ಸೀತವ್ವ ತೋಟದ, ಕಮಲಾ ಸಂಕನಾಳ, ಮಹಾಂತೇಶ ಮಾಳೂರ, ರೇಣುಕಾ ಹರಿಜನ್‌, ಕಮಲಾ ಹಳ್ಳದಗೇರಿ, ತಿಪ್ಪಣ್ಣ ಹೂಗಾರ, ಲಕ್ಷ್ಮೀಬಾಯಿ ಗೂಡಕಟ್ಟಿ, ಶಾರದಾ ರಾಠೊಡ, ರುದ್ರಪ್ಪ ನಾಡಗೌಡ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ