ಇಂಡಿಯಲ್ಲಿ ಜೀವಜಲಕ್ಕೆ ಪರದಾಟ

Team Udayavani, Mar 30, 2019, 3:31 PM IST

ಇಂಡಿ: ಅಖಂಡ ಜಿಲ್ಲೆ ಇದ್ದ ಸಂದರ್ಭದಲ್ಲಿ ಪಂಚ ನದಿಗಳು ಹರಿದ ಜಿಲ್ಲೆಯಲ್ಲಿಂದು ನೀರಿಗಾಗಿ ಹಾಹಾಕಾರ ಶುರುವಾಗಿದೆ. ಭೀಕರ ಬರಗಾಲ ಎದುರಾಗಿ ಜನತೆಗೆ ನೀರು ತರುವುದೇ ದೊಡ್ಡ ಕೆಲಸವಾಗಿ ಬಿಟ್ಟಿದೆ.

ಜಿಲ್ಲೆಯನ್ನು ಕಳೆದ ಹತ್ತಾರು ವರ್ಷಗಳಿಂದ ಬರಗಾಲ ಜಿಲ್ಲೆ ಎಂದು ಘೋಷಿಸುತ್ತಲೆ ಬರಲಾಗುತ್ತಿದೆ. ಈ ಬಾರಿಯೂ ಅದು ಹೊರತಾಗಿಲ್ಲ. ಜಿಲ್ಲೆಯಲ್ಲಿಯೇ ಅತಿ ಬರಗಾಲದ ಛಾಯೆ ಇರುವುದು ಇಂಡಿ ತಾಲೂಕಿನಲ್ಲಿ ಎಂದರೆ ತಪ್ಪಾಗಲಾರದು. ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಮಟ್ಟದ ತೀವ್ರ ಕುಸಿತವಾಗಿದ್ದು ತಾಲೂಕಿನ 46 ಗ್ರಾಮಗಳಿಗೆ 226 ಟ್ಯಾಂಕರ್‌ ಮೂಲಕ ನಿತ್ಯ 763 ಟ್ರಿಪ್‌ ನೀರು ಪೂರೈಸಲಾಗುತ್ತಿದೆ.

ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗಬಾರದು ಎಂದು ಸರಕಾರ ಕೆರೆ ತುಂಬುವ ಯೋಜನೆ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಹಣ ಖರ್ಚು ಮಾಡಿದೆ. ಅದರೆ ಇಂದು ತಾಲೂಕಿನ ಎಲ್ಲ ಕೆರೆಗಳು ನೀರಿಲ್ಲದೆ ಮಳೆಗಾಲದಲ್ಲಿಯೇ ಬತ್ತಿ ಹೋಗಿದ್ದು ತಾಲೂಕಿನ ಹಳ್ಳಿಗಳಿಗೆ ಹಾಗೂ ಅಡವಿ ವಸ್ತಿಗಳಿಗೆ ಜನ ಜಾನುವಾರುಗಳಿಗೆ ನೀರಿನ ತೊಂದರೆ ದಿನೇ ದಿನೇ ಹೆಚ್ಚುವಂತಾಗಿ ಇಂದು ತೊಂದರೆ ಅನುಭವಿಸುವಂತಾಗಿದೆ. ಭೀಮೆ ಮಳೆಗಾಲದಲ್ಲಿ ಹರಿಯುವಾಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದರೆ ಇಷ್ಟೊಂದು ಭೀಕರ ಸ್ಥಿತಿ ಇಂದು ಎದುರಾಗುತ್ತಿರಲಿಲ್ಲ.

ಟ್ಯಾಂಕರ್‌ ನೀರು ಪೂರೈಕೆ ಗ್ರಾಮಗಳು: ಇಂಡಿ ತಾಲೂಕಿನ ಹಿರೇರೂಗಿ, ಬೋಳೇಗಾಂವ, ತಡವಲಗಾ, ಗಣವಲಗಾ, ನಿಂಬಾಳ ಬಿ.ಕೆ, ನಿಂಬಾಳ ಕೆ.ಡಿ, ಲಿಂಗದಳ್ಳಿ, ಬಬಲಾದ, ಹಳಗುಣಕಿ, ಅಂಜುಟಗಿ, ಚೋರಗಿ, ಚವಡಿಹಾಳ, ಅಗಸನಾಳ, ಕ್ಯಾತನಕೇರಿ, ಬಸನಾಳ, ಕೊಟ್ನಾಳ, ಹಂಜಗಿ, ಹೋರ್ತಿ, ಝಳಕಿ, ಮೈಲಾರ, ಅರ್ಜನಾಳ, ಭತಗುಣಕಿ, ಬೂದಿಹಾಳ, ಸಾಲೊಟಗಿ, ಇಂಗಳಗಿ, ಮಾವಿನಹಳ್ಳಿ, ತೆಗ್ಗೆಳ್ಳಿ, ಗೊರನಾಳ, ಕೊಳೂರಗಿ, ದೇಗಿನಾಳ, ಸಾವಳಸಂಗ, ಕಪನಿಂಗರಗಿ, ಕೂಡಗಿ, ಅಹಿರಸಂಹ, ಹಡಲಸಂಗ, ಸೊನಕನಳ್ಳಿ, ರಾಜನಾಳ, ಅಥರ್ಗಾ, ಹಿರೇಬೇವನೂರ, ತಾಂಬಾ, ಬಂಥನಾಳ, ಬಳೊಳ್ಳಿ, ಜೇವೂರ, ರೋಡಗಿ, ಗುಂದವಾನ, ಚಿಕ್ಕಬೇವನೂರ ಹೀಗೆ ಒಟ್ಟು 46 ಗ್ರಾಮಗಳಿಗೆ 226 ಟ್ಯಾಂಕರ್‌ ಗಳ ಮೂಲಕ ನಿತ್ಯ 763 ಟ್ರಿಪ್‌ ನೀರು ಸರಕಾರದಿಂದ ಪೂರೈಸಲಾಗುತ್ತಿದೆ.

ಇಂಡಿ ಪಟ್ಟಣಕ್ಕಿಲ್ಲ ನೀರು: ಇಂಡಿ ಪಟ್ಟಣಕ್ಕೆ ಈಗ 20 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇಂಡಿ ನಗರಕ್ಕೆ ನೀರು ಪೂರೈಸುವ ಭೀಮಾನದಿ ಬರಗೂಡಿ ಗ್ರಾಮದ ಹತ್ತಿರ ಭೀಮೆ ಸಂಪೂರ್ಣ ಬತ್ತಿ ಹೋಗಿದೆ. ಮತ್ತೂಂದು ಮೂಲವಾದ ಲೋಣಿ ಕೆರೆಯಲ್ಲಿಯೂ ನೀರು ಇನ್ನೊಂದರೆಡು ಬಾರಿ ಬಿಡುವಷ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭೀಮಾ ನದಿಗೆ ಹಾಗೂ ಲೋಣಿ ಕೆ.ಡಿ. ಗ್ರಾಮದ ಕೆರೆಗೆ ನೀರು ಹರಿಸಿದಾಗ ಮಾತ್ರ ಇಂಡಿ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಸ್ಥಿತಿ ಈಗ ನಿರ್ಮಾಣವಾಗಿದೆ.

ಸಿಂದಗಿ ಪಟ್ಟಣಕ್ಕೆ ನೀರಿನ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಜನ ಕೇಳಿಕೊಂಡಾಗ ಸಚಿವ ಎಂ.ಸಿ. ಮನಗೂಳಿಯವರು ಕಾಲುವೆಯಿಂದ ನೀರು ಬಿಡಿಸಿದಂತೆ ಇಂಡಿಯ ಕುಡಿಯುವ ನೀರಿಗಾಗಿಯೂ ನೀರು ಬಿಡಿಸಬೇಕಾಗಿತ್ತು. ಆದರೆ ಅವರು ಸಿಂದಗಿ ಭಾಗಕ್ಕೆ ನೀರು ಮುಟ್ಟಿದ ನಂತರ ಇಂಡಿ ಭಾಗಕ್ಕೆ ನೀರು ಬಿಡಲಿಲ್ಲ. ಹೀಗಾಗಿ ಮನಗೂಳಿಯವರು ಸಿಂದಗಿಗೆ ಮಾತ್ರ ಸಚಿವರಾ ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ. ಇಂಡಿ ಮುಂದುವರಿದ ಬಡಾವಣೆಗಳಲ್ಲಿ ನೀರಿಗಾಗಿ ಜನತೆ ನಿದ್ದೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಮನವಿ ಮಾಡಲಾಗಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 2 ಟಿಎಂಸಿ ನೀರು ಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಆ ನೀರು ಪಂಢರಪುರದವರೆಗೆ ಬಂದಿದೆ. ನಾಲ್ಕೈದು ದಿನದಲ್ಲಿ ನಮ್ಮ ಭಾಗಕ್ಕೆ ನೀರು ಬರಬಹುದು.
ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್‌

ಪಟ್ಟಣದಲ್ಲಿ 20 ದಿನದಿಂದ ನೀರು ಬಿಟ್ಟಿಲ್ಲ. ಹೀಗಾಗಿ ದೂರದ ಬೋರ್‌ವೆಲ್‌ಗಳಿಗೆ ಹೋಗಿ ನೀರು ತರಬೇಕಾಗಿದೆ. ನೀರು ಬಿಡದೆ ಇರುವುದರಿಂದ ಖಾಸಗಿ ಬೋರ್‌ವೆಲ್‌ ಗಳಲ್ಲಿಯೂ ಜನರು ಸಾಲು-ಸಾಲಾಗಿ ನಿಂತು ನೀರು ತುಂಬಿಕೊಳ್ಳುತ್ತಿದ್ದೇವೆ. ಪುರಸಭೆಯವರು ನೀರು ಬಿಟ್ಟು ನಮ್ಮ ಸಮಸ್ಯೆ ಪರಿಹರಿಸಬೇಕು.
ವಿದ್ಯಾಶ್ರೀ ಪಾಟೀಲ, ಸ್ಥಳೀಯ ನಿವಾಸಿ

„ಉಮೇಶ ಬಳಬಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ