ಡೋಣಿ ನದಿಯಲ್ಲಿ ಉಕ್ಕಿದ ಪ್ರವಾಹ

Team Udayavani, Sep 9, 2017, 1:12 PM IST

ತಾಳಿಕೋಟೆ: ಜಿಲ್ಲೆಯ ವಿವಿಧಡೆ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಜನ ಪ್ರವಾಹ ಭೀತಿ ಎದುರಿಸುತ್ತ ಪರದಾಡುವಂತಾಗಿದೆ.

ಎರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಜನ ಸಂಚಾರ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಡೋಣಿ ನದಿ ಪ್ರವಾಹ ದಾಟಲು ಹೋಗಿ ಬೈಕಿನೊಂದಿಗೆ ಕೊಚ್ಚಿ ಹೋದ ಆಘಾತಕಾರಿ ಘಟನೆ ಶುಕ್ರವಾರ ಮಧ್ಯಾಹ್ನ
ಜರುಗಿದ್ದು ಪ್ರವಾಹವನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡಿ ಕೊನೆಗೂ ದಡ ಸೇರಿ ಬದುಕುಳಿದಿದ್ದಾನೆ.

ಸಿಂದಗಿ ತಾಲೂಕಿನ ಅಸ್ಕಿ ಗ್ರಾಮದ ಸಂಗಮೇಶ ವಾಲಿಕಾ ‌(36) ಮುದ್ದೇಬಿಹಾಳದಿಂದ ಸೇತುವೆ ಮಾರ್ಗವಾಗಿ ಬರುತ್ತಿದ್ದಾಗ ಏಕಾ ಏಕಿ ಪ್ರವಾಹ ಬಂದಿರುವದನ್ನು ಲಕ್ಷಿಸದೆ ಮುನ್ನುಗ್ಗಿದ್ದಾನೆ. ನೀರಿನ ರಭಸಕ್ಕೆ ಬೈಕ್‌ ಸಮೇತ ಕೊಚ್ಚಿಕೊಂಡು ಹೋಗಿದ್ದಾನೆ. ಇದನ್ನು ನೋಡಿದ ಜನರು ಈ ವ್ಯಕ್ತಿಯು ಬದುಕುಳಿಯುವುದೇ ಕಷ್ಟವೆಂದು ಭಾವಿಸಿದ್ದರು. ಆದರೆ ಯುವಕ ಈಜುತ್ತ ದಡಕ್ಕೆ ಬಂದಾಗ ಜನ ಅವನ ಬಂಡ ಧೈರ್ಯ ಹೊಗಳದೇ ಬುದ್ಧಿಮಾತು ಹೇಳಿದರು.ಡೋಣಿ ನದಿ ಪ್ರವಾಹದಲ್ಲಿ ಯುವಕನೊಂದಿಗೆ ಕೊಚ್ಚಿ ಹೋದ ಬೈಕ್‌ ತೆಗೆಯಲು ಸುಮಾರು ಎರಡೂಮೂರು ತಂಡಗಳು ಬೆಟ್ಟಿಂಗ್‌ ನಡೆಸುವುದರೊಂದಿಗೆ ಹಣದಾಸೆಗಾಗಿ ಬಂಡ ಧೈರ್ಯ ಮಾಡುತ್ತ ಹಗ್ಗದ ಸಹಾಯದ ಮೂಲಕ ನೀರಿನಲ್ಲಿ ಬೈಕ್‌ನ್ನು ಹುಡುಕಿದರು. ಈ ವೇಳೆ ವೃದ್ಧ ದೇಸಾಯಿ ಎಂಬುವರ ಕೈಯಲ್ಲಿಯ ಹಗ್ಗ ಬಿಚ್ಚಿದ್ದರಿಂದ ಬೈಕ್‌ ಸವಾರ ಸಂಗಮೇಶನ ಮಾದರಿಯಲ್ಲಿಯೇ ಆತನೂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆಯೂ ಜರುಗಿತು. ಆದರೆ ಈ ಸೇತುವೆಯ ಮೇಲೆ ಪ್ರವಾಹ ಭೀತಿ ಎದುರಿಸುತ್ತ ದಿನನಿತ್ಯ ಅಡ್ಡಾಡುತ್ತಿದ್ದ ವೃದ್ಧ ಸಂಗಣ್ಣ ದೇಸಾಯಿ ನೀರಿನ ಮಟ್ಟ, ಸೆಳವು ಅರಿತು ಅವರೂ ಸಹ ಈಜುತ್ತ ದಡ ಮುಟ್ಟಿ ಬದುಕಿದರು.

ಪ್ರವಾಹ ಸಮಸ್ಯೆಗಳು: ಡೋಣಿ ನದಿಯಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೆಲ್ಲ ಪ್ರವಾಹದಿಂದ ಉಕ್ಕಿ ಬರುವ ನೀರಿನಿಂದ ಪುನರ್ವಸತಿ ಹಡಗಿನಾಳ ಮಾರ್ಗವಾಗಿ ಸಂಚರಿಸುವ ಎಲ್ಲ ಗ್ರಾಮಸ್ಥರಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. 2009ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಡೋಣಿ ನದಿ ಪ್ರವಾಹಕ್ಕೆ ನಡುಗಡ್ಡೆಯಾಗಿದ್ದ ಹಳೆ ಹಡಗಿನಾಳವನ್ನು ಪುನರ್ವಸತಿ ಗ್ರಾಮವನ್ನಾಗಿ ರೂಪಿಸಿ ಮನೆಗಳನ್ನು ನಿರ್ಮಿಸಿ ಅಲ್ಲಿಯ ಜನರಿಗೆ ಹಸ್ತಾಂತರಿಸಲಾಗಿದೆ. 

ಆದರೆ ಈ ಡೋಣಿ ನದಿಯ ಪ್ರವಾಹ ಪುನರ್ವಸತಿ ಗ್ರಾಮವಾದರೂ ಸಹ ಬೆಂಬಿಡುತ್ತಿಲ್ಲ. ಈ ಸೇತುವೆ ಮೂಲಕ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ನಾಗೂರ, ಹರನಾಳ ಗ್ರಾಮಗಳ ಜನರು ದಿನನಿತ್ಯ ಕೂಲಿ ನಾಲಿಗಾಗಿ ತಾಳಿಕೋಟೆ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಈ ಡೋಣಿ ನದಿಗೆ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸಬೇಕೆಂದು ಸಾಕಷ್ಟು ಬಾರಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸತ್ತಾ ಬಂದರೂ ಪ್ರಯೋಜನವಾಗಿಲ್ಲ.

ಈ ಸೇತುವೆಯನ್ನು ಮೇಲ್ಮಟ್ಟಕ್ಕೆ ಏರಿಸಬೇಕೆಂದರೆ ಈ ರಸ್ತೆಯೂ ಇನ್ನೂ ಸ್ಥಳೀಯ ಆಡಳಿತದಲ್ಲಿರುವುದಿಂದ ರಸ್ತೆಯನ್ನು ಲೋಕೊಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕೆಂಬುದನ್ನು ಅರೀತ ತಾಲೂಕಾಡಳಿತವೂ ಸುಮಾರು 5 ವರ್ಷಗಳ ಹಿಂದೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಮಟ್ಟದಲ್ಲಿ ಯಾವುದೇ
ಕಾರ್ಯಗಳು ಜರುಗದಿದ್ದರಿಂದ ಈ ಸೇತುವೆಯನ್ನು ಮೇಲ್ಮಟ್ಟಕ್ಕೇ ಏರಿಸಲು ಆಗುತ್ತಿಲ್ಲ ಎಂಬುವುದು ಜಿಲ್ಲಾಡಳಿತ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸೇತುವೆ ಮೂಲಕ ಈ ಗ್ರಾಮಗಳಷ್ಟೇ ಅಲ್ಲದೇ ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ, ಅನೇಕ ಮಹಾನಗರ ಪಟ್ಟಣಗಳಿಗೆ ತೆರಳಲು ಬಹಳ ಅನುಕೂಲಕರವಾದಂತಹ ರಸ್ತೆ ಇದಾಗಿದೆ. ಈ
ಸೇತುವೆಯನ್ನು ಮೇಲ್ಮಟ್ಟಕ್ಕೆ ಏರಿಸುವುದರೊಂದಿಗೆ ಗ್ರಾಮಸ್ಥರಿಗೆ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಪ್ರಜ್ಞಾವಂತರ ಒತ್ತಾಯವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ