ಲಕ್ಷ ಜನರಿಂದ ಸಾಮೂಹಿಕ ಸೂರ್ಯ ನಮಸ್ಕಾರ

Team Udayavani, Jun 22, 2018, 6:00 AM IST

ವಿಜಯಪುರ: ಜಿಲ್ಲೆಯ ಗಡಿಯಲ್ಲಿರುವ ಕಾತ್ರಾಳ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವಾದ ಗುರುವಾರ ಏಕಕಾಲಕ್ಕೆ ಲಕ್ಷ ಜನ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು. 

ಇದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರುವ ಸಾಧ್ಯತೆ ಇದೆ. ಅಗತ್ಯ ದಾಖಲೆಗಳಿಗಾಗಿ ಇದರ ಚಿತ್ರೀಕರಣ
ನಡೆದಿದ್ದು, ಎರಡು ವಾರದಲ್ಲಿ ಅಧಿಕೃತ ದಾಖಲೆ ಹೊರ ಬೀಳುವ ನಿರೀಕ್ಷೆ ಇದೆ.

ಮಹಾರಾಷ್ಟ್ರದ ಗಡಿಯಲ್ಲಿರುವ ಕಾತ್ರಾಳ ಗ್ರಾಮದ ಗುರುದೇವ ಆಶ್ರಮದ ವಿಶಾಲ ಮೈದಾನದಲ್ಲಿ ಒಂದು
ಲಕ್ಷ ಜನರು ಸಾಮೂಹಿಕವಾಗಿ ಏಕಕಾಲಕ್ಕೆ ಸೂರ್ಯ ನಮಸ್ಕಾರ ಮಾಡಿದರು. ಕಾತ್ರಾಳ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ವಿಭಿನ್ನ ಎಂಟು ಬಗೆಯ ಸೂರ್ಯ ನಮಸ್ಕಾರ ಆಸನ, ಹಸ್ತ ಉತ್ಥಾನಾಸನ, ಹಸ್ತ ಪಾದಾಸನ, ಏಕಪಾದ ಪ್ರಸರಣಾಸನ, ದ್ವಿಪಾದ ಪ್ರಸರಹನಾಸನ, ಸಾಷ್ಟಾಂಗ ಪ್ರಣಿಪತಾಸನ,ಭುಜಂಗಾಸನಗಳನ್ನು ಪ್ರದರ್ಶಿಸಲಾಯಿತು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು, ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು, ಅಗರಖೇಡ ಆಶ್ರಮದ ಮಾತೋಶ್ರೀ ಜಗದೇವಿತಾಯಿ ಸೇರಿದಂತೆ ವಿವಿಧ ಮಠಾಧೀಶರು,ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ,ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ ದಾದಾ ಪಾಟೀಲ, ಶಾಸಕ ವಿಲಾಸರಾವ್‌ ಜಗತಾಪ, ಸಂಸದ ಸಂಜಯ ಪಾಟೀಲ, ಸಾಂಗ್ಲಿ ಜಿಲ್ಲಾಧಿಕಾರಿ ವಿಜಯಕುಮಾರ ಪಾಟೀಲ ಪಾಲ್ಗೊಂಡಿದ್ದರು.

ಎಲ್ಲೂ ಏಕಕಾಲಕ್ಕೆ ಒಂದು ಲಕ್ಷ ಜನರು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿದ ದಾಖಲೆ ಇಲ್ಲ. ಹೀಗಾಗಿ, ಕಾತ್ರಾಳದಲ್ಲಿ ನಡೆದ ಕಾಯಕ್ರಮ ಹೈ ರೇಂಜ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌, ಏಷ್ಯನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌,
ಮಾರ್ವೇಲೆಸ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ಗಳಲ್ಲಿ ದಾಖಲಾಯಿತು. ದಾಖಲೆಗಳನ್ನು ಸಂಗ್ರಹಿಸುವ ಹೊಣೆ ಹೊತ್ತ ಅ ಧಿಕಾರಿಗಳು ಸಂಘಟಕರಿಗೆ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.

ಕಾತ್ರಾಳ ಆಶ್ರಮದಲ್ಲಿ ಲಕ್ಷ ಜನರಿಂದ ಏಕಕಾಲಕ್ಕೆ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಗಿದೆ. ಲಿಮ್ಕಾ ದಾಖಲೆ ಬರೆಯಲು ಲಿಮ್ಕಾ ಸಂಸ್ಥೆ ಅಗತ್ಯ ಕ್ರಮಗಳನ್ನು ದಾಖಲಿಸಿದೆ. ಎರಡು ವಾರಗಳಲ್ಲಿ ಲಿಮ್ಕಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ಗೆ ಸೇರುವ ನಿರೀಕ್ಷೆ ಇದೆ. ಸದರಿ ಕಾರ್ಯಕ್ರಮದ ದಾಖಲೆಗಾಗಿ ಪ್ರಧಾನಿ ಕಚೇರಿಗೂ
ದಾಖಲೆಗಳನ್ನು ರವಾನಿಸಲಾಗಿದೆ.

– ವಿಜಯಕುಮಾರ ಪಾಟೀಲ, ಜಿಲ್ಲಾಧಿಕಾರಿ, ಸಾಂಗ್ಲಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ