ವಿಜಯಪುರದಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ: ನಡಹಳ್ಳಿ

Team Udayavani, Mar 29, 2019, 4:35 PM IST

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲ. ಜೆಡಿಎಸ್‌ ಅಭ್ಯರ್ಥಿ ಇದ್ದರೂ ಅವರದ್ದು ಅಸ್ತಿತ್ವದಲ್ಲಿ ಇಲ್ಲದ ಪಕ್ಷ. ಸದ್ಯದ ಮಟ್ಟಿಗೆ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಿಸಿಕೊಂಡಿದೆ. ಹೀಗಾಗಿ ಈ ಬಾರಿಯೂ ಮೋದಿ ಅವರನ್ನು ಮತ್ತೆ ದೇಶದ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನೇ ಗೆಲ್ಲಿಸಿ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮನವಿ ಮಾಡಿದರು. ತಾಲೂಕು ಬಿದರಕುಂದಿ ಗ್ರಾಮದಲ್ಲಿ
ಬುಧವಾರ ರಾತ್ರಿ ಮತ್ತೂಮ್ಮೆ ಮೋದಿ ಸರ್ಕಾರ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಣ್ಣಪುಟ್ಟ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಈ ಬಾರಿ ಬಿಜೆಪಿ ಬೆಂಬಲಿಸಿ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದಕ್ಕಾಗಿ, ದೇಶಕೋಸ್ಕರ ಓಟ್‌ ಮಾಡಿ. ಜಿಗಜಿಣಗಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವವರಲ್ಲ. ಅವರು ಜಿಲ್ಲೆಗೆ ಹೆಚ್ಚಿನ ಅನುದಾನ ತಂದಿದ್ದು ದಾಖಲೆ ಸಮೇತ ಕೊಡಲು ಸಿದ್ಧರಿದ್ದೇವೆ.

ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಿಂದ ಲಕ್ಷಕ್ಕೂ ಹೆಚ್ಚು ಮತ ಬಿಜೆಪಿಗೆ ಹಾಕಿಸಲು ನನ್ನ ಕೈ ಬಲಪಡಿಸಿ ಎಂದರು. ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಚುನಾವಣೆ ಮುಗಿದ ಮ್ಯಾಲೆ ನಿಮ್ಮೂರಿಗೆ ಏನ್‌ ಮಾಡಬೇಕೋ ಅದನ್ನ ಮಾಡ್ತೀನಿ. ಈಗ ನಾವೆಲ್ಲ ಸೇರಿ ದೇಶವನ್ನು ಸುಭದ್ರಗೊಳಿಸಬೇಕಾಗಿದೆ. ಇದಕ್ಕಾಗಿ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸಿ ಎಂದರು.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮತ್ತಿತರರು ಮಾತನಾಡಿದರು. ಲೋಕಸಭೆ ಚುನಾವಣೆ ಮತಕ್ಷೇತ್ರ ಉಸ್ತುವಾರಿಗಳಾದ ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ಧುರೀಣರಾದ ಪ್ರಭು ಕಡಿ, ಹೇಮರಡ್ಡಿ ಮೇಟಿ, ಸಂಗಮ್ಮ ದೇವರಳ್ಳಿ, ಎಸ್‌.ಎಚ್‌. ಲೊಟಗೇರಿ, ಬಸವರಾಜ ಗುಳಬಾಳ, ಸಂಗಮೇಶ ಕರಭಂಟನಾಳ, ಶರಣು ಬೂದಿಹಾಳಮಠ ಮತ್ತಿತರರು ಇದ್ದರು.

ಹಲವರು ತಮ್ಮ ಏರಿಯಾದ ಗುಡಿ ಕಟ್ಟಲು ಎಂಪಿ ಅನುದಾನ ಕೊಟ್ಟಿಲ್ಲ ಅಂತ ನನ್ನ ಮೇಲೆ ಸಿಟ್ಟಿಗೆದ್ದಿದ್ದಾರೆ. ಓಣಿಗೊಂದರಂತೆ ಇರುವ ಗುಡಿಗಳಿಗೆ ಎಂಪಿ ಅನುದಾನ ಎಲ್ಲಿಂದ ತರಲಿ. ಊರವರೆಲ್ಲ ಒಟ್ಟಾಗಿ ಆರಾಧಿಸುವ ಗುಡಿಯೊಂದಕ್ಕೆ 5 ಲಕ್ಷ ರೂ. ಗ್ರ್ಯಾಂಟ್ ಕೊಡಲು ಅವಕಾಶ ಇದೆ. ಊರವರೆಲ್ಲ ಒಟ್ಟಾಗಿ ಬಂದಲ್ಲಿ ಹೆಚ್ಚು ಅನುಕೂಲ. ಹೀಗಾಗಿ ನೀವು ಕೇಳಿದ ಗುಡಿಗೆ ರೊಕ್ಕ ಕೊಟ್ಟಿಲ್ಲ ಅಂತ ಸಿಟ್ಟಾಗಬೇಡಿ.
  ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ