ಕೇಂದ್ರಕ್ಕೆ ಶೀಘ್ರ ಬರ ಸಮೀಕ್ಷೆ ವರದಿ

Team Udayavani, Mar 1, 2019, 6:09 AM IST

ವಿಜಯಪುರ: ರಾಜ್ಯದಲ್ಲಿ ಬರ ಅಧ್ಯಯನ ನಡೆಸಿರುವ ನಮ್ಮ ತಂಡ ಸಮಗ್ರ ಮಾಹಿತಿ ದಾಖಲಿಸಿಕೊಂಡಿದೆ. ರಾಜ್ಯದ ಎಲ್ಲ ತಂಡಗಳ ಸಮೀಕ್ಷೆ ಮುಕ್ತಾಯದ ಬಳಿಕ ಸರ್ಕಾರಕ್ಕೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಕೇಂದ್ರ ಅಧ್ಯಯನ ತಂಡದ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಜಂಟಿ ಆಯುಕ್ತ ಎಸ್‌.ಕೆ. ಕಂಬೋಜ್‌ ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಅಥರ್ಗಾ, ಹಿರೇರೂಗಿ ಚಂದೂನ ತಾಂಡಾದಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆ ನಡೆಸಿದರು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಸ್ತುಸ್ಥಿತಿ ಅರಿಯಲು ಕೇಂದ್ರ ಬರಗಾಲ ಅಧ್ಯಯನ ತಂಡ ಈ ಭಾಗಕ್ಕೆ ಕಳುಹಿಸಿದೆ. ರಾಜ್ಯದಲ್ಲಿ ಇನ್ನೂ ಕೆಲ ತಂಡಗಳು ಬೇರೆ-ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿವೆ. ನಮ್ಮ ತಂಡ ನಾಲ್ಕು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದ್ದು, ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿದರೆ ಈ ಭಾಗದಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದರು.

ಅಥರ್ಗಾ ಹಾಗೂ ಹಿರೇರೂಗಿ ರೈತರಿಂದ ಮಾಹಿತಿ ಪಡೆದ ಬರ ಅಧ್ಯಯನ ತಂಡ ಕೃಷಿ ಬೆಳೆಗೆ ಜಲ ಮೂಲ ಏನಿದೆ, ಯವ್ಯಾವ ಬೆಳೆ ಬೆಳೆಯುತ್ತೀರಿ, ಬರ ತಡೆಯುವ ಪರ್ಯಾಯ ಬೆಳೆಗಳನ್ನು ಏನು ಬೆಳೆಯುತ್ತೀರಿ, ಮಳೆ ಕೈಕೊಟ್ಟರೆ ಸಾಮಾನ್ಯವಾಗಿ ಹಾನಿಯಾಗುವ ಬೆಳೆಗಳಿಂದ ನಷ್ಟವಾಗುವ
ಅಂದಾಜು ಎಷ್ಟು ಎಂದು ಮಾಹಿತಿ ಪಡೆದರು. ಕೇಂದ್ರ ತಂಡಕ್ಕೆ ಜಿಲ್ಲೆ ಬರ ಪರಿಸ್ಥಿತಿಯ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಈ ಹಿಂದೆ ಕೇಂದ್ರ ಬರಗಾಲ ಅಧ್ಯಯನ ತಂಡ ನೀಡಿದ ವರದಿಯ ವಸ್ತುಸ್ಥಿತಿ ಅರಿಯಲು ಕೇಂದ್ರ ತಂಡ ಆಗಮಿಸಿದೆ. ಭೀಕರ ಬರದ ಹಿನ್ನೆಲೆ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಟ್ಯಾಂಕರ್‌ ಮುಖಾಂತರ ನೀರು ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ ಎಂದು ವಿವರಿಸಿದರು. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಆಯುಕ್ತ ಎಸ್‌.ಕೆ. ಕಂಬೋಜ್‌, ಕೇಂದ್ರ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ತರುಣ್‌ಕುಮಾರ ಸಿಂಗ್‌, ಕೇಂದ್ರ ಆಹಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಹಾಪ್ರಬಂಧಕ ಸತ್ಯಕುಮಾರ್‌ ಅವರನ್ನಗೊಳಗೊಂಡ ತಂಡ ಇಂಡಿ ತಾಲೂಕಿನ ಅಥರ್ಗಾ, ರಾಜನಾಳ ತಾಂಡಾ, ತಡವಲಗಾ,
ಹಿರೇರೂಗಿ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿತು.

ಬರ ಅಧ್ಯಯನ ತಂಡದೊಂದಗಿದ್ದ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ, ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಸಿಇಒ ವಿಕಾಸ ಸುರಳ್ಕರ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ, ಪಶು ಸಂಗೋಪನಾ ಇಲಾಖೆ
ಉಪನಿರ್ದೇಶಕ ಡಾ| ಪ್ರಾಣೇಶ ಜಹಾಗೀರದಾರ ಸೇರಿದಂತೆ ಹಲವು ಅಧಿಕಾರಿಗಳು ಬರ ಮಾಹಿತಿ ನೀಡಿದರು.

ಬೆಳೆ ಪರಿಹಾರ ಕೊಟ್ಟ ಪುಣ್ಯ ಕಟ್ಟಗೊಳಿಸಿ
ವಿಜಯಪುರ: ನಾಲ್ಕ ವರ್ಷದಿಂದ ಮಳಿ ಇಲ್ಲ. ಹತ್ತಾರ ಚೀಲ ಕಾಳ ಬೆಳಿಯೋ ಹೊಲದಾಗ ಹಾಕಿದ ಕಾಳು, ಆಳಿನ ಬಂಡವಾಳ ಬಂದಿಲ್ಲ. ಇನ್ನ ನಿಂಬಿ, ದಾಳಿಂಬಿ ಬೆಳಿಯೂ ಒಣಗಿ ಬದುಕು ಕಣ್ಣೀರಾಗೇತ್ರಿ. ಇಂಥ ದುಸ್ಥಿತಿಯಾಗ ಸಾವಿರಾರು ಜನ ಹೊಲ ಇದ್ರೂ ಗುಳೆ ಹೋಗ್ಯಾರ. ಇನ್ನ ನಮಗೂ ಈಗ ಗುಳೆ ಹೋಗದೇ ಗತಿ ಇಲ್ಲ. ಹಿಂಗ್‌ ಬಂದ್‌ ಹಂಗ್‌ ಹೋಗಬ್ಯಾಡ್ರಿ, ನಿಮ್ಮ ಕೈಮುಗಿತೀವಿ. ಏನಾರ ಸಹಾಯ ಮಾಡಿ ಪುಣ್ಯ ಕಟ್ಟಿಗೊಳ್ಳಿ ಸಾಹೇಬ್ರ. ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಎಸ್‌.ಕೆ. ಕಂಬೋಜ್‌ ನೇತೃತ್ವದ ಬರ ಅಧ್ಯಯನ ತಂಡದ ಎದುರು ಅಥರ್ಗಾ, ಹಿರೇರೂಗಿ, ಚಂದೂ ತಾಂಡಾ ಗ್ರಾಮಗಳಲ್ಲಿ ಜಮೀನು-ತೋಟಗಳಿಗೆ ಭೇಟಿ ನೀಡಿದ ಅಧಿಕಾರಿಗಳಿಗೆ ರೈತರು ಕಣ್ಣೀರು ಹಾಕಿ
ಸಹಾಯಕ್ಕೆ ಮೊರೆ ಇಟ್ಟರು.

ಅಥರ್ಗಾ ಗ್ರಾಮದ ರೈತ ಶರಣಪ್ಪ ಗೋಟ್ಯಾಳ ಅವರ ಜಮೀನಿಗೆ ಭೇಟಿ ನೀಡಿದ್ದ ತಂಡಕ್ಕೆ ಸುತ್ತಲಿನ ಹಲವು ಗ್ರಾಮಗಳ ರೈತರು ಕೂಡ ಆಗಮಿಸಿ ಭೀಕರ ಬರ ತಮ್ಮ ಬದುಕನ್ನು ಬರಿದು ಮಾಡಿರುವ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.

ಒಳ್ಳೆ ಮಳೆ ಆಗಿದ್ದರೆ ಏನಿಲ್ಲಂದ್ರೂ 55 ಚೀಲ ಜೋಳ ಬೆಳಿಯಾ ಶಕ್ತಿ ಇರೋ ಹೊಲದಾಗ ಸೆರಿ ಜ್ವಾಳ ಬಂದಿಲ್ಲಿ, ಬೀಜ, ಗೊಬ್ಬರ, ಬಿತ್ತನೆ ಬಾಡಿಗೆ,
ಆಳಿನ ಕೂಲಿ ಅಂತೆಲ್ಲ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಹತ್ತ ರೂಪಾಯಿ ಕೈಗೆ ಬಂದಿಲ್ಲ. ಮ್ಯಾಲಿಂದ ಮ್ಯಾಲೆ ಇಂಥ ಬರ ಬಿದ್ದ
ಬಿತ್ತಾಕ ಮಾಡಿದ ಸಾಲಕ್ಕ ಹೊಲ ಮಾರುವ ಕಷ್ಟ ಎದುರಾಗೇತಿ. ಇನ್ನೇನು ಹೊಲ ಮಾರಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಗೆ ದುಡಿಯಲು
ಹೋಗುತ್ತಿದ್ದೇನೆ ಎಂದು ಶರಣಪ್ಪ ಗೋಟ್ಯಾಳ ಗೋಳು ನಿವೇದಿಸಿಕೊಂಡರು.

ಕೃಷಿಯನ್ನೇ ನಂಬಿರುವ ನನ್ನ ಕುಟುಂಬ ಲಕ್ಷಾಂತರ ರೂಪಾಯಿ ಸಾಲ ಮಾಡಿ 9 ಕಡೆ ಬೋರ್‌ವೆಲ್‌ ಕೊರಸೀನ್ರಿ, ಒಂದೊಂದ್‌ ಬೋರ್‌ವೆಲ್‌ ಸಾವಿರಾರು ಅಡಿ ಆಳ ಕೊರಸಿದ್ರೂ ಹನಿ ನೀರ ಬಂದಿಲ್ಲ. ಹಿಂಗಾದ್ರ ರೈತ ಬದುಕೂದಾದ್ರೂ ಹೆಂಗ್‌. ನೀವು ಸಮೀಕ್ಷೆ ಮಾಡಿ ಹೊಕ್ಕೀರಿ. ಆದ್ರ ಈ ತನಕ ನಮ್ಮ ನೆರವಿಗೆ ಯಾರೂ ಬಂದಿಲ್ಲ. ಕುಟುಂಬ ನಡೆಸುವುದು ಕಷ್ಟ ಆಗೇತ್ರಿ. ಸಾಲಗಾರರಿಗೆ ಮುಖ ತೋರಾದ ದುಸ್ತರ ಆಗೇತಿ ಎಂದು ಶರಣಪ್ಪ ಅವರ ಪಕ್ಕದ ಜಮೀನಿನ ಭೋಸಗಿ ಎಂಬ ರೈತ ತನ್ನ ಸಂಕಷ್ಟವನ್ನು ಬರ ಅಧ್ಯಯನ ತಂಡದ ಎದುರು ತೆರೆದಿಟ್ಟ.

ಚಂದೂನ ತಾಂಡಾದ ಲಾಲು ಕೇಸೂ ಪವಾರ್‌, ಹಸಿರಿನಿಂದ ನಳನಳಿಸುತ್ತ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ನನ್ನ ತೋಟದಲ್ಲಿನ ಲಿಂಬೆ ಬೆಳನಿಧೀಗ ನೀರಿಲ್ಲದೇ ಒಣಗಿ ನಿಂತಿವೆ. ಆದರ ಇತರ ರೈತರಂಗ ಟ್ಯಾಂಕರ್‌ ನೀರು ಹಾಕಿ ಮಾಡಿಕೊಂಡ ಸಾಲ ಏರಿತೆ ಹೊರತು ಬೆಳೆ ಉಳಿಯುವ ಭರವಸೆ ಇಲ್ಲವಾಗಿದೆ. ಹೀಗಾಗಿ ನೀರಿಲ್ಲದೇ ಲಿಂಬೆ ಗಿಡಗಳು ಸಂಪೂರ್ಣ ಒಣಗಿದ್ದು, ಕಿತ್ತು ಎಸೆಯುವುದಕ್ಕೆ ಕೂಲಿ ಹಣವೂ ಇಲ್ಲದೇ ಕುಳಿತಿದ್ದೇನೆ ಎಂದು ಸಂಕಷ್ಟದ ಪರಿಯನ್ನು ಕೇಂದ್ರದ ಬರ ಅಧ್ಯಯನ ತಂಡದ ಮುಂದಿಟ್ಟರು.

ಮಳೆ ಇಲ್ಲದೇ ಒಣಗಿ ನಿಂತ ಬೆಳೆಗಳು, ಮತ್ತೂಂದೆಡೆ ಮಳೆ ಇಲ್ಲದೇ ಬಿತ್ತನೆ ಮಾಡದೇ ಬೋಳು ಬೋಳಾಗಿ ಕಾಣುತ್ತಿದ್ದ ಜಮೀನಗಳನ್ನು ಕಂಡ ಕೇಂದ್ರ ತಂಡ ಕೂಡ ಮರುಗಿತು. ಹಿರೇರೂಗಿಯಲ್ಲಿ ಸ್ಥಾಪಿಸಲಾಗಿರುವ ಮೇವು ಬ್ಯಾಂಕ್‌ಗೂ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ತೋಟಗರಿಕೆ ಬೆಳೆಗಾರರು ಆಗ್ರಹಿಸುತ್ತಿರುವಂತೆ ಟ್ಯಾಂಕರ್‌ ನೀರು ಪೂರೈಕೆ ಅಗತ್ಯವೂ ಇದೆ ಎಂಬುದನ್ನು ಕೇಂದ್ರ ತಂಡ ಬರ
ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿದ್ದೇವೆ. ಇದಕ್ಕಾಗಿ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಪ್ರಸ್ತುತ ನಿಯಮಾವಳಿ ಅನುಸರಿಸಿ ಬೆಳೆಗಳಿಗೆ ಟ್ಯಾಂಕರ್‌ ನೀರು ಪೂರೈಕೆಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ಲಿಂಬೆ ಬೆಳೆಗೆ ಈ ಸೌಲಭ್ಯ ಕಲ್ಪಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ವೈ.ಎಸ್‌. ಪಾಟೀಲ, ಜಿಲ್ಲಾಧಿಕಾರಿ

ರಾಜ್ಯದಲ್ಲೇ ವಿಜಯಪುರ ಜಿಲ್ಲೆ ಲಿಂಬೆ ಕಣಜ ಎನಿಸಿದ್ದು, ಅದರಲ್ಲೂ ಇಂಡಿ ತಾಲೂಕಿನ ಅಥರ್ಗಾ, ಇಂಡಿ, ಸಿಂದಗಿ ತಾಲೂಕಿಮ ಹಲವು ಭಾಗಗಳಲ್ಲಿ ಲಿಂಬೆ ಜೊತೆಗೆ ದಾಳಿಂಬೆ ಬೆಳೆಯನ್ನೂ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕೇವಲ ಅಥರ್ಗಾ ಸುತ್ತಲೂ ಸಾವಿರಾರು ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆ ಇದ್ದರೆ, 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಲಿಂಬೆ ಬೆಳೆ ಇದೆ. ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ತೋಟದ ಬೆಳೆಗಳಿಗೆ ನೀರು ಹಾಕುತ್ತಿದ್ದೇವೆ. ಇಷ್ಟಾದರೂ ಮಾಡಿದ ಸಾಲ ತೀರುವ ಭರವಸೆ ಮೂಡುತ್ತಿಲ್ಲ ಎಂದು ಕಣ್ಣೀರಿಟ್ಟ ರೈತರು.

ಆಲಮಟ್ಟಿ ಜಲಾಶಯ ವೀಕ್ಷಣೆ
ಆಲಮಟ್ಟಿ: 2018ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬರದಿಂದ ಹಾನಿಯಾಗಿರುವ ಬೆಳೆಗಳ ಅಧ್ಯಯನಕ್ಕೆ ಜಿಲ್ಲೆಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ ಆಲಮಟ್ಟಿ ಜಲಾಶಯವನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಬರ ಅಧ್ಯಯನದ ತಂಡದ ಮುಖ್ಯಸ್ಥ, ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಜಂಟಿ ಆಯುಕ್ತ
ಎಸ್‌.ಕೆ. ಕಂಬೋಜ್‌, ಈಗಾಗಲೇ ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಅಧಯಯನ ಕೈಗೊಳ್ಳಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಿಂಗಾರು ಹಂಗಾಮಿನ ಜೋಳ, ಗೋದಿ , ಕಡಲೆ ಹಾಗೂ ತೋಟಗಾರಿಕಾ ಬೆಳೆಗಳೂ ಕೂಡ ಹಾನಿಯಾಗಿವೆ ಎಂದರು.

ಈ ಜಿಲ್ಲೆಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಇದರಿಂದ ಈ ಭಾಗದ ಜನತೆ ಬರದಿಂದ ಬಸವಳಿದಿದ್ದಾರೆ. ಹಾನಿಯ ಪ್ರಮಾಣವನ್ನು ಈಗಾಗಲೇ ಹೇಳಲಾಗುವುದಿಲ್ಲ. ಈ ಕುರಿತು ಸರ್ಕಾರ ನಿಗದಿಪಡಿಸಿದಂತೆ ಎರಡು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ನಂತರ ಲಾಲ್‌ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ತೆರಳಿ ನೀರಿನ ಸಂಗ್ರಹ, ನೀರಿನ ಬಳಕೆ ಹಾಗೂ ಜಲಾಶಯದ ಗೇಟ್‌ಗಳ ನಿರ್ವಹಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳಾದ ನರೇಂದ್ರ ಎಚ್‌ .ಸಿ ಹಾಗೂ ಎಸ್‌.ಎಸ್‌.ಚಲವಾದಿ ಅವರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಅಸಿಸ್ಟಂಟ ಕಮೀಷನರ್‌ ರುದ್ರೇಶ, ಕೇಂದ್ರ ತಂಡದ ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯ ಎಫ್‌.ಆರ್‌.ಐ.ಓ ತರುಣಕುಮಾರಸಿಂಗ್‌, ಸಾರ್ವಜನಿಕ ಹಾಗೂ ಆಹಾರ ವಿತರಣಾ ಇಲಾಖೆಯ ಡಿಜಿಎಂ ಸತ್ಯಕುಮಾರ ಹಾಗೂ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳಾದ ನರೇಂದ್ರ ಎಚ್‌.ಸಿ, ಎಸ್‌.ಎಸ್‌.ಚಲವಾದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಜಯಪುರ: ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಜೀವಂತಿಕೆ ಉಳಿಸಿಕೊಂಡಿರುವ ಕ್ರಿಯಾಶೀಲತೆ ಮೈಗೂಡಿಸಿಕೊಂಡಿರುವ ಏಕೈಕ ರಂಗ ಎಂದರೆ ಕನ್ನಡ ರಂಗಭೂಮಿ ಮಾತ್ರ ಎಂದು...

  • ಆಲಮಟ್ಟಿ: ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಆಗುವವರೆಗೂ ಸಂವಿಧಾನದಲ್ಲಿ ನೀಡಿರುವ ಮೀಸಲಾತಿ ಮುಂದುವರಿಸಬೇಕು ಎಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಚಾಲಕ...

  • •ಜಿ.ಎಸ್‌. ಕಮತರ ವಿಜಯಪುರ: ದೇಶದಾದ್ಯಂತ ಮೋದಿ ಸರ್ಕಾರ ಮೋಟಾರು ವಾಹನ ನೂತನ ಕಾಯ್ದೆ ಜಾರಿಗೆ ತಂದದ್ದೇ ತಡ ವಾಹನಗಳ ಮಾಲೀಕರು ವಾಹನಗಳನ್ನು ರಸ್ತೆ ಇಳಿಸಲು ಬೆದರುವಂತೆ...

  • ವಿಜಯಪುರ: ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳ ಕುರಿತಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಇದಕ್ಕಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ...

  • ವಿಜಯಪುರ: ರಾಜ್ಯದ 22 ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್‌...

ಹೊಸ ಸೇರ್ಪಡೆ

  • ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ವಡ್ಡು ಗ್ರಾಮದಲ್ಲಿ ಆರು ವರ್ಷದ ಬಾಲಕಿ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ...

  • ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಉಲ್ಬಣಿಸಿದ ನೆರೆ ಹಾಗೂ ಅತಿವೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು...

  • ಗಜೇಂದ್ರಗಡ: ರಾಜ್ಯ ಶಿಕ್ಷಣ ಇಲಾಖೆ, ಜಿಲ್ಲಾ ಸ್ವಿಪ್‌ ಸಮಿತಿ, ಜಿಪಂ ಹಾಗೂ ಬಿ.ಎಸ್‌. ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮತದಾರ...

  • ಗಜೇಂದ್ರಗಡ: ವಾಯು ವಿವಾಹರ ಜೊತೆಗೆ ಪಟ್ಟಣದ ಜನರ ಮನತಣಿಸುವ ಉದ್ದೇಶದಿಂದ ನಿರ್ಮಿಸಿದ್ದ ಉದ್ಯಾನವನ ಇದೀಗ ಕುರಿಗಳ ದೊಡ್ಡಿಯಾಗಿ ಪರಿವರ್ತನೆಯಾಗಿದೆ. ಇದು...

  • ಸವದತ್ತಿ: ಹಳ್ಳಿಗಳ ರಾಷ್ಟ್ರ ಭಾರತದಲ್ಲಿರುವ ಪ್ರತಿ ಕುಟುಂಬಗಳಿಗೆ ನೀರಿನ ಕೊರತೆಯಾಗದಂತೆ ನಳಗಳ ಮೂಲಕ ನೀರಿನ ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರಕಾರದ್ದು...