ಕಾಳಸಂತೆಯಲ್ಲಿ ಪೌಷ್ಟಿಕ ಆಹಾರ ಮಾರಾಟ

Team Udayavani, Jul 9, 2019, 11:39 AM IST

ವಿಜಯಪುರ: ನಗರದಲ್ಲಿರುವ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.

ವಿಜಯಪುರ: ಅಂಗನವಾಗಿ ಮಕ್ಕಳಿಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರ ಕಾಳ ಸಂತೆಯಲ್ಲಿ ಮಾರಾಟ, ದೂರುಗಳ ಆಗರವಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ನಿರ್ವಹಣೆಗೆ ವಿಷಯಗಳ ಕುರಿತು ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು.

ಸೋಮವಾರ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಪಂ ಸಭೆಯಲ್ಲಿ ಪಾಲನಾ ವರದಿ ಮೇಲಿನ ಚರ್ಚೆ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಜೋತಿ ಅಸ್ಕಿ, ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರೈಸುತ್ತಿರುವ ಗುಣಮಟ್ಟದ ಅಹಾರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಲ್ಲದೇ 5 ಮಕ್ಕಳಿದ್ದರೂ ಸರಿ, 50 ಮಕ್ಕಳಿದ್ದರೂ ಸರಿ ಏಕ ರೂಪದಲ್ಲಿ ಆಹಾರ ಪೂರೈಕೆ ನಡೆಯುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಸಂಖ್ಯೆ ತೋರಿಸಿ, ಮಕ್ಕಳ ಹೆಸರಿನಲ್ಲಿ ಮೇಲಿನಿಂದ ಕೆಳ ಹಂತದವರೆಗೆ ಅಧಿಕಾರಿಗಳು ಲೂಟಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿಸಿದಾಗ, ಪ್ರತಿಕ್ರಿಯಿಸಿದ ಜಿಪಂ ಸಿಇಒ ವಿಕಾಸ ಸುರಳಕರ, ಅಂಗನವಾಡಿ ಕೇಂದ್ರಗಳಲ್ಲಿ ಇಂತ ದುರವಸ್ಥೆಗೆ ಕಡಿವಾಣ ಹಾಕಲು ಮಕ್ಕಳ ಹಾಜರಾತಿಗೆ ಬಯೋಮೆಟ್ರಿಕ್‌ ಸೇವೆ ಅಳವಡಿಸಲು ಚಿಂತನೆ ನಡೆಸಿದೆ. ಇಂಥದ್ದೇ ವಿಷಯಗಳು ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸುದೀರ್ಘ‌ ಚರ್ಚೆ ಬಳಿಕ ಅಂಗನವಾಡಿ ಕೇಂದ್ರಗಳಲ್ಲೂ ಮಕ್ಕಳ ಹಾಜರಿಗೆ ಬಯೋಮೆಟ್ರಿಕ್‌ ಅಳವಡಿಸಲು ಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಇನ್ನು ಜಿಲ್ಲೆಯ ಗ್ರಾಮಿಣ ಭಾಗದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿದ್ದು, ಜನಪ್ರತಿನಿಧಿಗಳ ಫೋಟೋ ಹಾಕಿಕೊಂಡು ಪ್ರದರ್ಶನಕ್ಕಿಟ್ಟಂತಾಗಿದೆ. ವಾಸ್ತವಿಕವಾಗಿ ಜಿಲ್ಲೆಯ ಬಹುತೇಕ ಕೇಂದ್ರಗಳು ಸ್ಥಗಿತಗೊಂಡಿದ್ದು, ಜನರಿಂದ ಟೀಕೆಗಳಿಗೆ ಕಾರಣವಾಗುತ್ತಿದೆ ಎಂದು ಗುರುರಾಜ ಪಾಟೀಲ ದೂರಿದಾಗ, ಜಿಲ್ಲೆಯ ಎಲ್ಲೆಡೆ ಇಂದೇ ದುಸ್ಥಿತಿ ಇದೆ. ಹೀಗಾಗಿ ಆರ್‌ಒ ಕೇಂದ್ರಗಳನ್ನು ಮುಚ್ಚುವುದೇ ಲೇಸು ಎಂದು ಉಮೇಶ ಕೋಳಕೂರು ಹದಿಹಾಯ್ದರು. ಇದಕ್ಕೆ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿಇಒ ರಾಜ್ಯಾದ್ಯಂತ ಆರ್‌ಒ ಕೇಂದ್ರಗಳ ನಿರ್ವಹಣೆ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರತಿ ಕೇಂದ್ರಕ್ಕೆ ವಾರ್ಷಿಕ 36 ಸಾವಿರ ರೂ. ಅನುದಾನ ನೀಡಿ, ನಿರ್ವಹಣೆಗೆ ಪ್ರತಿ ತಾಲೂಕಿಗೆ ಪ್ರತ್ಯೇಕ ಏಜೆನ್ಸಿ ನೇಮಿಸಲು ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಹಂತದಲ್ಲಿ ರಾಮು ರಾಠೊಡ, ನನ್ನ ಕ್ಷೇತ್ರದಲ್ಲಿ ಆರ್‌ಡಬ್ಲುಎಸ್‌ ಯೋಜನೆಯಲ್ಲಿ 45 ಲಕ್ಷ ರೂ. ವೆಚ್ಚದ ಯೋಜನೆಗೆ ಟೆಂಡರ್‌ ಕರೆ ದಾಗ ಕಡಿಮೆ ಮೊತ್ತ ದಾಖಲಿಸಿದ ಗುತ್ತಿಗೆದಾರನಿಗೆ ಯೋಜನೆ ನೀಡಿಲ್ಲ. ಇದರಿಂದ ಸದರಿ ಗುತ್ತಿಗೆ ದಾರ ಇಲಾಖೆ ಮೇಲಧಿಕಾರಿಗಳ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳ ವರ್ತನೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಅಧಿಕಾರಿಗಳು ನೀಡುವ ಸಮಜಾಯಿಸಿ ಸೂಕ್ತವಾಗಿಲ್ಲ. ಈ ಕುರಿತು ತನಿಖೆ ನಡೆಸಿ ಎಂದು ಆಗ್ರಹಿಸಿದರು.

ಮತ್ತೂಂದೆಡೆ ಸಿಂದಗಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಎಲ್ಲೆಡೆ ನೀರು ಪೂರ್ಯೆಸಿದ್ದು ಸಮಸ್ಯೆ ಇಲ್ಲ ಎಂದೇ ವರದಿ ನೀಡುತ್ತಿದ್ದಾರೆ. ಒಂದೊಮ್ಮೆ ನನ್ನ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದರೆ ಬಹುತೇಕ ಗ್ರಾಮಗಳಲ್ಲಿ ಮನುಷ್ಯರು ಕುಡಿಯುವುದಕ್ಕೆ ಇರಲಿ, ಕನಿಷ್ಠ ಗುಬ್ಬಿಗಾದರೂ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಿದ್ದನ್ನು ತೋರಿಸಿ. ನಿಮ್ಮ ಮಾತು ಸತ್ಯವೇ ಆಗಿದ್ದರೆ ನಾನು ಜಿಪಂ ಸಾಮಾನ್ಯ ಸಭೆಗೆ ಬರುವುದನ್ನೇ ನಿಲ್ಲಿಸುತ್ತೇನೆ ಎಂದು ಅಧಿಕಾರಿಗಳಿಗೆ ಸವಾಲು ಎಸೆದರು.

ಇದಕ್ಕೆ ಸಮಜಾಯಿಸಿ ನೀಡಿದ ಸಿಇಓ ಸುರಳಕರ, ಕೂಡಲೇ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಡಲಾಗುತ್ತದೆ, ಜಲ ಮೂಲಗಳು ಲಭ್ಯ ಇಲ್ಲದಿದ್ದರೆ ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬರಗಾಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಸರ್ಕಾರ ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಲಾದ ಮೇವು ಬ್ಯಾಂಕ್‌ಗಳಲ್ಲಿ ಗುಣಮಟ್ಟದ ಮೇವು ಸಿಗುತ್ತಿಲ್ಲ. ಗುಣಮಟ್ಟದ ಮೇವಿನ ಕುರಿತು ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ರೈತರ ಹೆಸರು ನೋಂದಣಿಗೆ ಪ್ರತಿ ಗ್ರಾಪಂ ಹಾಗೂ ಹೋಬಳಿವಾರು ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಶೇ. 90 ಅರ್ಜಿ ಸಹ ಸ್ವೀಕರಿಸಿದ್ದು, ಶೇ. 80 ಆನ್‌ಲೈನ್‌ ಮಾಡಲಾಗಿದೆ. ಜಿಲ್ಲೆಯಲ್ಲಿರುವ 3.62 ಲಕ್ಷ ರೈತರ ಪೈಕಿ 2.45 ಲಕ್ಷ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ವಿವರಿಸಿದರು.

ಜಿಲ್ಲೆಯ ತೋಟಗಾರಿಕೆ ಇಲಾಖೆ ಯೋಜನೆಗಳ ಫ‌ಲಾನುಭವಿಗಳ ಆಯ್ಕೆಯಲ್ಲಿ ಆಕ್ರಮ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದ ನನ್ನ ಮೇಲೆ ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಅಧಿಕಾರಿಗಳು ಬಿಜೆಪಿ ಸದಸ್ಯರು ನೀಡುವ ಶಿಫಾರಸನ್ನು ಫ‌ಲಾನುಭವಿಗಳ ಆಯ್ಕೆಯಲ್ಲಿ ಪರಿಗಣಿಸಲಾಗದು ಎನ್ನುತ್ತಿದ್ದಾರೆ ಎಂದು ಸಾಬು ಮಾಶಾಳ ದೂರಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಆಡಳಿತ ನಡೆಸುವ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ವಿಷಯ ಮುಂದುವರಿಸಲು ಬಿಡದೇ ಈ ಕುರಿತು ಸೂಕ್ತ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

2019-20ನೇ ಸಾಲಿನ ಜಿಪಂ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ವಿವಿಧ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 435.41 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ಫಲಾನುಭವಿ ಕಾರ್ಯಕ್ರಮಗಳಿಗಾಗಿ 3.99 ಕೋಟಿ ರೂ., ಸಂಬಳಕ್ಕಾಗಿ 148.91 ಕೋಟಿ ರೂ. ಕಾಮಗಾರಿ ಕಾರ್ಯಕ್ರಮಗಳಿಗಾಗಿ 16.46 ಕೋಟಿ ರೂ., ಇತರೆ ಕಾರ್ಯಕ್ರಮಗಳಿಗಾಗಿ 266.04 ಕೋಟಿ ರೂ.ಸೇರಿದಂತೆ ಒಟ್ಟು 435.41 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಜಿಲ್ಲೆಯಲ್ಲಿ ಶಿಕ್ಷಕರು ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿ-ಸಿಬ್ಬಂದಿಯನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡಬಾರದು. ಇದರಿಂದ ಶಿಕ್ಷಣ ಹಾಗೂ ಗ್ರಾಮೀಣ ಭಾಗದ ರೈತರಿಗೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಈ ಕುರಿತು ಸಭೆಯಲ್ಲಿ ನಿರ್ಣಯ ಆಂಗೀಕರಿಸಬೇಕು ಎಂದು ಸೂಚಿಸಿದಾಗ ಸಭೆ ಅಸ್ತು ಎಂದಿದೆ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ವೇದಿಕೆಯಲ್ಲಿದ್ದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಕೊಡಬಾಗಿ, ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕವಿತಾ ರಾಠೊಡ, ಸಾಮಾಜಿಕ ಹಾಗೂ ನ್ಯಾಯ ಸಮಿತಿ ಅಧ್ಯಕ್ಷ ಜಯಸಿಂಗ್‌ ನಾಯಕ ಸೇರಿದಂತೆ ಜಿಪಂ ಬಹುತೇಕ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕ್ರಿಯಾಯೋಜನೆ ಸಿದ್ಧ: 2019-20ನೇ ಸಾಲಿನ ಜಿಪಂ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ವಿವಿಧ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 435.41 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ಫಲಾನುಭವಿ ಕಾರ್ಯಕ್ರಮಗಳಿಗಾಗಿ 3.99 ಕೋಟಿ ರೂ., ಸಂಬಳಕ್ಕಾಗಿ 148.91 ಕೋಟಿ ರೂ. ಕಾಮಗಾರಿ ಕಾರ್ಯಕ್ರಮಗಳಿಗಾಗಿ 16.46 ಕೋಟಿ ರೂ., ಇತರೆ ಕಾರ್ಯಕ್ರಮಗಳಿಗಾಗಿ 266.04 ಕೋಟಿ ರೂ.ಸೇರಿದಂತೆ ಒಟ್ಟು 435.41 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ