ಸರ್ವಧರ್ಮ ಪ್ರಿಯರಾಗಿದ್ದ ಶಿವಾಜಿ

Team Udayavani, Feb 20, 2018, 11:46 AM IST

ವಿಜಯಪುರ: ಛತ್ರಪತಿ ಶಿವಾಜಿ ಮಹಾರಾಜರು ಶೂರ ಸಾಮ್ರಾಟ ಮಾತ್ರವಲ್ಲದೇ ಪ್ರಜಾಹಿತ ರಕ್ಷಕ, ಸರ್ವಧರ್ಮ ಸಹಿಷ್ಣತೆ ಹೊಂದಿದ್ದ ಅಪ್ಪಟ್ಟ ರಾಷ್ಟ್ರಪ್ರೇಮಿ ಆಗಿದ್ದರು. ದೇಶಕ್ಕಾಗಿಯೇ ಪ್ರಾಣತ್ಯಾಗ ಮಾಡಿ ಇತಿಹಾಸ ಸೇರಿದ್ದಾರೆ ಎಂದು ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸೋಮವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಅವರು ಮಹಿಳಾ ರಕ್ಷಣೆ, ಗೋಹತ್ಯೆ ವಿರೋಧಿಯಾಗಿದ್ದರು ಎಂದು ವಿವರಿಸಿದರು.

ಹೆತ್ತ ತಾಯಿ ಜೀಜಾಬಾಯಿ ಶಿಕ್ಷಣ ಮಾತ್ರವಲ್ಲ, ಬಾಲ್ಯದಲ್ಲೇ ಜೀವನ ಮೌಲ್ಯ, ಯುದ್ಧ ಗೆಲ್ಲುವ ಛಲಗಾರಿಕೆ ಮೈಗೂಡಿಸಿಕೊಂಡಿದ್ದರು. ಶಿಕ್ಷಣ ಗುರು ದಾದಾಜಿ ಕೊಂಡದೇವ ಅವರಿಂದ ಶಸ್ತ್ರಾಸ್ತ್ರ ವಿದ್ಯೆ ಕರಗತ ಮಾಡಿಕೊಂಡು ಹಲವು ಯುದ್ಧ ಗೆದ್ದು ಚಕ್ರವರ್ತಿ ಎನಿಸಿಕೊಂಡಿದ್ದರು.

ಸಾಹಿತಿ ಮಾರುತಿ ಪಾಂಡುರಂಗ ತರಸೆ ವಿಶೇಷ ಉಪನ್ಯಾಸ ನೀಡಿ, ಛತ್ರಪತಿ ಶಿವಾಜಿ ಮಹಾರಾಜರು ದಮನ, ದೌರ್ಜನ್ಯ, ಅನ್ಯಾಯಕ್ಕೆ ಒಳಗಾದವರಿಗೆ ರಕ್ಷಣೆ ಮಾಡುವಲ್ಲಿ ಮುಂದಾದ ಮಹಾನ್‌ ವ್ಯಕ್ತಿಯಾಗಿದ್ದು ಹಿಂದೂ ಧರ್ಮದ ಸಂಸ್ಕೃತಿ ಪರಂಪರೆ ರಕ್ಷಿಸುವಲ್ಲಿ ಹೋರಾಡಿದ ಶೂರ ಎಂದರು.

ಶಿವಾಜಿ ಮಹಾರಾಜರು ಮೊಘಲರು, ವಿಜಯಪುರದ ಆದಿಲ್‌ ಶಾಹಿಗಳ ವಿರುದ್ಧ ಹೋರಾಡುವ ಜೊತೆಗೆ ಭಾರತೀಯರಲ್ಲಿ ದೇಶಪ್ರೇಮ ಮೈಗೂಡಿಸುವಲ್ಲಿ ಇವರ ಕೊಡುಗೆ ಅಪಾರ. ಹಾಗಾಗಿ ಇವರ ತತ್ವಾದರ್ಶ, ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಸಲಹೆ ನೀಡಿದರು.

ಅವಸಾನದ ಅಂಚಿನಲ್ಲಿದ್ದ ಹಿಂದೂ ಧರ್ಮವನ್ನು ಮತ್ತೆ ಚಿಗುರಿ ಹೆಮ್ಮರವಾಗಿ ಬೆಳೆಯುವಂತೆ ಮಾಡುವ ಮೂಲಕ ಧರ್ಮ ರಕ್ಷಣೆಯಂಥ ಮಹತ್ವದ ಕಾರ್ಯ ಮಾಡಿದರು. ಸ್ವಧರ್ಮ ಪ್ರಿಯರಾದರೂ ಅನ್ಯಮತಗಳನ್ನೂ ಗೌರವಿಸುವ ಮನೋಭಾವ ಹೊಂದಿದ್ದರು. ಜಗತಿಕ ಮಟ್ಟದಲ್ಲಿ ಪ್ರಚಲಿತದಲ್ಲಿ ಗೆರಿಲ್ಲಾ ಯುದ್ಧ ತಂತ್ರ ಎಂದು ಕರೆಸಿಕೊಳ್ಳು
ಯುದ್ಧ ಕೌಶಲ್ಯ ಛತ್ರಪತಿ ಶಿವಾಜಿ ಅವರ ಕಾಲದಲ್ಲೇ ಜನ್ಮತಳೆದುದು ಎಂದು ವಿವರಿಸಿದರು.

ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್‌ ಸಂಗೀತಾ ಪೋಳ, ಉಪ ಮೇಯರ್‌ ರಾಜೇಶ ದೇವಗಿರಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಕ್ಕಪ್ಪ ಯಡವೆ, ಪಾಲಿಕೆ ಸದಸ್ಯ ರಾಹುಲ್‌ ಜಾಧವ, ಸಮಾಜದ ಮುಖಂಡರಾದ ವಿಜಯಕುಮಾರ ಚವ್ಹಾಣ, ಸದಾಶಿವ ಪವಾರ, ರಾಜಾರಾಮ ಗಾಯಕವಾಡ, ಬಾಪೂಜಿ ನಿಕ್ಕಂ,
ಶಿವಾಳಕರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ್‌ ಯೋಜನಾಧಿಕಾರಿ ಅಲ್ಲಾಪುರ ಸೇರಿದಂತೆ ಸಮಾಜದ ಮುಖಂಡರು, ಶಾಲಾ ಮಕ್ಕಳು ಇದ್ದರು.

ನಿರ್ಮಲಾ ಥಿಟೆ ಹಾಗೂ ಸಂಗಡಿಗರಿಂದ, ಸುಗಮ ಸಂಗೀತ ಕಾರ್ಯಕ್ರಮ ಹಾಗೂ ರಂಗಕರ್ಮಿ ಡಿ.ಎಚ್‌. ಕೊಲ್ಹಾರ ನಿರ್ದೇಶನದಲ್ಲಿ ಜಲಜಮಿತ್ರ ಕಲಾ ವೇದಿಕೆಯಿಂದ ಕರುಣಾಮಯ ಶಿವಾಜಿ ಮಹಾರಾಜ ನಾಟಕ ಪ್ರದರ್ಶಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಇದಕ್ಕೂ ಮುನ್ನ ಛತ್ರಪತಿ ಶಿವಾಜಿ ವೃತ್ತದಿಂದ ಕಂದಗಲ್‌ ಹನುಮಂತರಾಯ ರಂಗಮಂದಿರದವರೆಗೆ ಜಾನಪದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.

ಬಸವನಬಾಗೇವಾಡಿ: ಶಿವಾಜಿ ಮಹಾರಾಜರುಹಿಂದೂ ಸಮ್ರಾಜ್ಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
ಎಂದು ತಹಶೀಲ್ದಾರ ಎಂ.ಎನ್‌. ಚೋರಗಸ್ತಿ ಹೇಳಿದರು. ಪಟ್ಟಣದಲ್ಲಿ ಸೋಮವಾರ ವಿಠ್ಠಲ ಮಂದಿರದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಛತ್ರಪತಿ ಶಿವಾಜಿ ಮಹಾರಾಜರು ಮಾನವ ಕುಲ ಉದ್ಧಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಒಂದೇ ಸಮುದಾಯಕ್ಕೆ ಸಿಮೀತವಾಗದೇ ಇಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂತಹ ಮಹಾ ಪುರುಷರನ್ನು ಪ್ರತಿಯೊಬ್ಬರೂ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ದೇಶದಲ್ಲಿ ಮೊಘಲರ ಆಡಳಿತ ಕಾಲದಲ್ಲಿ ಹಿಂದೂತ್ವ ಆಳಿದು ಹೊಗುವ ಪರಿಸ್ಥಿತಿಯಲ್ಲಿ ಇತ್ತು. ಅಂತಹ ಸಂದರ್ಭದಲ್ಲಿ ಶಿವಾಜಿ ಮಹಾರಾಜರು ಸಾಮಾನ್ಯ ಜನರನ್ನು ಸಂಘಟಿಸಿ ಸೈನ್ಯ ಕಟ್ಟಿ ವಿಶಾಲ ಸಾಮ್ರಾಜ್ಯ ಸ್ಥಾಪಿಸಿ ನಿರಂತರ ಹೋರಾಟ ಮಾಡುವ ಮೂಲಕ ಹಿಂದೂತ್ವವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಗ್ರೇಡ್‌-2 ತಹಶೀಲ್ದಾರ್‌ ಪಿ.ಜಿ. ಪವಾರ ಮಾತನಾಡಿದರು. ಪುರಸಭೆ ಸದಸ್ಯ ಶ್ರೀಕಾಂತ ನಾಯಕ, ಪ್ರವೀಣ ಪವಾರ, ಕಾಶೀನಾಥ ಹಿಂಗೋಲಿ, ಬಾಬು ನಿಕ್ಕಂ, ಅಮರ ಗಾಯಕವಾಡ, ಅನಿಲ ಪವಾರ, ಜ್ಯೋತಿಬಾ ಪವಾರ ವೇದಿಕೆಯಲ್ಲಿದ್ದರು. ಸುಧೀರ ಗಾಯಕವಾಡ ಸ್ವಾಗತಿಸಿದರು. ರಾಜು ಬಿಜಾಪುರ ನಿರೂಪಿಸಿದರು.

ತೊಟ್ಟಿಲು ಕಾರ್ಯಕ್ರಮ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆ ಬಾಲ ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಮಹಿಳೆಯರು ಬಾಲ ಶಿವಾಜಿಯನ್ನು ತೋಟ್ಟಿಲಲ್ಲಿ ಹಾಕಿ ತೂಗಿ, ಜೋಗುಳ ಹಾಡಿದರು. ಮರಾಠಾ ಸಮಾಜ ಬಾಂಧವರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
 
ಚಡಚಣ: ಬರಡೋಲ ಗ್ರಾಮದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಗ್ರಾಮದ ಮರಾಠಾ ಸಮಾಜ ಬಾಂಧವರು ಹಾಗೂ ಗ್ರಾಮಸ್ಥರು ಸೋಮವಾರ ಅದ್ಧೂರಿಯಾಗಿ ಆಚರಿಸಿದರು. 

ಎಪಿಎಂಸಿ ನಿರ್ದೇಶಕಿ ದಾನಮ್ಮಗೌಡತಿ ಪಾಟೀಲ ಮಾತನಾಡಿ, ಶಿವಾಜಿ ಮಹಾರಾಜರ ಆದರ್ಶಗಳು ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಬಾರದು. ದೇಶದ ಪ್ರಗತಿ ಕಾಣಲು ಯುವ ಸಮೂಹ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ತೋಳನೂರ, ಗ್ರಾಪಂ ಸದಸ್ಯರಾದ ಮುದಕಪ್ಪ ಕೋಳಿ, ಅಶೋಕ ಜಾಲಗೇರಿ, ಹಸನಸಾಬ ಬಾಗವಾನ, ಪರಶುರಾಮ ನಾಗೇನವರ, ಅಂಬಾದಾಸ ಕಟ್ಟಿಮನಿ, ಶಿವಣ್ಣಗೌಡ ಪಾಟೀಲ, ಬಾಪುರಾಯಗೌಡ ಪಾಟೀಲ, ನ್ಯಾಯವಾದಿ ಗಜಾನಂದ ಪವಾರ, ಮುಖಂಡರಾದ ಮಹೇಶ ಕುಲಕರ್ಣಿ, ಅಜೀತ
ಜೋಶಿ, ಬಸವರಾಜ ತೋಡಕರ, ಹನುಮಂತ ನಿಕ್ಕಂ, ಅಜೀತ ಶಿಂಧೆ, ತುಕಾರಾಮ ಸಿಂಧೆ, ಶಂಕರ ಪವಾರ
ಇದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ