ಉಪ ಚುನಾವಣಾ ಬಳಿಕ ಸಿದ್ದು ಮೂಲೆಗುಂಪು : ಯತ್ನಾಳ

Team Udayavani, Dec 4, 2019, 9:14 PM IST

ವಿಜಯಪುರ : ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಈ ಮುನ್ಸೂಚನೆ ದೊರೆಯುತ್ತಲೇ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಜೆಡಿಎಸ್ ಮುಖಂಡರು ಹತಾಷರಾಗಿ, ಏನೇನೋ ಹೇಳಿಕೆ ನೀಡುತ್ತಿದ್ದಾರೆ ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಲಾಗುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧ ಪಕ್ಷಗಳ ಮುಖಂಡರನ್ನು ಕುಟುಕಿದ್ದಾರೆ.

ಬುಧವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊನ್ನೆ ಜೋಡೆತ್ತುಗಳು ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಸಭೆ ನಡೆಸಿವೆ. ಸಿದ್ದರಾಮಯ್ಯ ಅವರನ್ನು ದೂರ ಸರಿಸಿ ತಾವು ಅಧಿಕಾರಕ್ಕೆ ಬರಬೇಕು ಎನ್ನುವ ಹುನ್ನಾರದ ಈ ಸಭೆಯ ಕುತಂತ್ರ ಸಿದ್ರಾಮಯ್ಯ ಅವರ ಗಮನಕ್ಕೆ ಬಂದಿದೆ, ಹಾಗಾಗಿ ಜೋಡೆತ್ತುಗಳು ಅದರಲ್ಲಿ ಸಂಪೂರ್ಣ ವಿಫಲರಾಗುತ್ತಾರೆ ಎಂದು ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ ಅವರನ್ನು ಕುಟುಕಿದರು.

ಸಿದ್ದರಾಮಯ್ಯ ಅವರು ಉಪ ಚುನಾವಣೆಯ ಅಂತಿಮ ಹಂತದಲ್ಲಿ ಸುಮ್ಮನಿದ್ದು ಕಾಂಗ್ರೆಸ್ಸಿಗರು ಸೋಲುವಂತೆ ನಡುವಳಿಕೆ ತೋರಿದರೆ ಸಿದ್ದುಗೆ ಹೆಚ್ಚಿನ ಲಾಭವಾಗಲಿದೆ ಎಂದು ರಾಜಕೀಯ ದಾಳ ಉರುಳಿಸಿದರು.

ತಮ್ಮ‌ ಪಕ್ಷದ ಶಾಸಕರು ಕೈ ಹಿಡಿತ ತಪ್ಪುತ್ತಿರುವುದರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಅವರಿಗೆ ಈಗಲೇ ಭಯ ಕಾಡ ತೊಡಗಿದೆ.
ಜೆಡಿಎಸ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇಲ್ಲದ ಕಾರಣ ಕುಮಾರಸ್ವಾಮಿ ಅವರಿಗೂ ಆತಂಕ ಸೃಷ್ಟಿಯಾಗಿದೆ.

ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಮತ್ತೆ ಅಧಿಕಾರಕ್ಕೆ ಬರುವ ಕನಸು ಭಗ್ನವಾಗುವುದನ್ನು ತಿಳಿದು ಕಂಗಾಲಾಗಿದ್ದಾರೆ.
ಅದರಲ್ಲೂ ಕಳೆದ 3-4 ದಿನಗಳ ಹಿಂದೆ ಚಿತ್ರಣ ಗೊತ್ತಾಗಿ, ದಿನೇಶ ಗುಂಡೂರಾವ್ – ಕುಮಾರಸ್ವಾಮಿ ಸೇರಿ ಕಾಂಗ್ರೆಸ್ – ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಡಿಸೆಂಬರ್ 9ರ ಬಳಿಕ ಸಂಪೂರ್ಣ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಚಿತ್ರಣವಿದೆ. ಇದರಿಂದ ರಾಜ್ಯದಲ್ಲಿ ಭವಿಷ್ಯದ ಮೂರೂವರೇ ವರ್ಷ ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ‌ ಆಗಿರುತ್ತಾರೆ ಎಂದರು.

ಮಂತ್ರಿ ಆಗದಿರುವುದಕ್ಕೆ ನಮಗೆ ಬೇಸರ ಇಲ್ಲ ಎಂದು ನಾವೇ ಸ್ಪಷ್ಟಪಡಿಸಿರುವಾಗ ಬಿಜೆಪಿ ಪಕ್ಷದಲ್ಲಿ ಅಸಮಾಧಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಡಿಯೂರಪ್ಪ ಸರ್ಕಾರ ಉಳಿಯಬೇಕು ಎಂದು ನಾವೇ ಮುಖ್ಯಮಂತ್ರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ ಎಂದರು.

ನಮ್ಮ ಅಭಿಮಾನಿಗಳ ಭಾವನೆ ಮಂತ್ರಿ ಆಗಬೇಕು ಎಂಬುದು ಸಹಜ, ಅದನ್ನು ನಾನು ದೊಡ್ಡದು ಮಾಡುವುದಿಲ್ಲ. ಯಡಿಯೂರಪ್ಪ ನೇತ್ರತ್ವದಲ್ಲಿ ರಾಜ್ಯಕ್ಕೆ ಸುಭದ್ರ ಸರ್ಕಾರ ನಡೆಯಲಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ