ಸುನೀಲಗೌಡ-ಶಟಗಾರ ಮೇಲ್ಮನೆ ಆಟ

Team Udayavani, Aug 21, 2018, 2:43 PM IST

ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಜಯಪುರ-ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಸೋಮವಾರ ಬಿಜೆಪಿ ಅಭ್ಯರ್ಥಿಯಾಗಿ ಗೂಳಪ್ಪ ಶಟಗಾರ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಸುನೀಲಗೌಡ ಪಾಟೀಲ ಇಬ್ಬರೂ ನಗರ ದೇವತೆ ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆ ದಿನವಾಗಿತ್ತು. ಅಂತಿಮ ದಿನವೇ ಬಿಜೆಪಿ ಅಭ್ಯರ್ಥಿಯಾಗಿ ಮಹಾನಗರ ಪಾಲಿಕೆ ಹಿರಿಯ ಸದಸ್ಯ ಗೂಳಪ್ಪ ಶಟಗಾರ ನಾಮಪತ್ರ ಸಲ್ಲಿಸಿದರು. ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಸಾಸನೂರ, ಸಿದ್ದು ಸವದಿ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ ಸೇರಿದಂತೆ ಇತರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅವರಿಗೆ ನಾಮಪತ್ರ ಸಲ್ಲಿಸಿದರು. ಇತ್ತ ರಾಜ್ಯದ ಸಮ್ಮಿಶ್ರ ಸರ್ಕಾರ ಪಾಲುದಾರ ಪಕ್ಷಗಳಾದ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುನೀಲಗೌಡ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆಡಿಎಸ್‌ನ ಎಂ.ಸಿ. ಮನಗೂಳಿ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ| ಎಂ.ಬಿ.ಪಾಟೀಲ, ಜೆಡಿಎಸ್‌ ಶಾಸಕ ಡಾ| ದೇವಾನಂದ ಚವ್ಹಾಣ, ಮಾಜಿ ಸಚಿವ ಸಿ.ಎಸ್‌. ನಾಡಗೌಡ, ಎಸ್‌. ಆರ್‌. ಪಾಟೀಲ, ಎಚ್‌.ವೈ. ಮೇಟಿ., ಉಮಾಶ್ರೀ ಸೇರಿದಂತೆ ಇತರೆ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅವರಿಗೆ ನಾಮಪತ್ರ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ