ಖಾಸ್ಗತೇಶ್ವರಮಠದ ಜಾತ್ರಾ ವೈಭವ

•ನಿತ್ಯ ನಡೆಯುವ ಸಪ್ತ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ 160ಕ್ಕೂ ಹೆಚ್ಚು ಗ್ರಾಮಗಳ ಭಕ್ತರು

Team Udayavani, Jul 9, 2019, 11:34 AM IST

ತಾಳಿಕೋಟೆ: ಜಾತ್ರೋತ್ಸವ ನಿಮಿತ್ತ ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ಖಾಸ್ಗತೇಶ್ವರ ಮಠ.

ತಾಳಿಕೋಟೆ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ, ವಿರಕ್ತ ಸಂಪ್ರದಾಯದ ಖಾಸ್ಗತೇಶ್ವರ ಮಠ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಜು.16ರವರೆಗೆ ನಡೆಯಲಿವೆ.

ಶ್ರೀಮಠವು ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಈಗಾಗಲೇ ಆರಂಭಗೊಂಡ ಸಪ್ತ ಭಜನೆಯಲ್ಲಿ 160ಕ್ಕೂ ಹೆಚ್ಚು ಗ್ರಾಮಗಳ ಭಕ್ತಾದಿಗಳು ದಿನನಿತ್ಯ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಟ್ರ್ಯಾಕ್ಟರ್‌ ಸೇರಿದಂತೆ ಇನ್ನಿತರೆ ವಾಹನಗಳಲ್ಲಿ ಕೆಲ ಭಕ್ತರು ಆಗಮಿಸುತ್ತಿದ್ದರೆ, ಇನ್ನು ಕೆಲ ಭಕ್ತರು ಪಾದಯಾತ್ರೆ ಮಾಡುತ್ತ ‘ಓಂ ನಮಃ ಶಿವಾಯ’ ಪಂಚಾಕ್ಷರ ಮಂತ್ರ ಪಠಿಸುತ್ತ, ಭಜನೆ ಮಾಡುತ್ತ ಬರುತ್ತಿದ್ದಾರೆ.

9 ದಿನಗಳವರೆಗೆ ಜರುಗಲಿರುವ ಸಪ್ತ ಭಜನಾ ಕಾರ್ಯಕ್ರಮದಲ್ಲಿ 1ಗಂಟೆಗೆ ಒಂದು ಗ್ರಾಮದ ಭಕ್ತ ಸಮೂಹ ಮಾತ್ರ ಪಾಲ್ಗೊಳ್ಳುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಹಗಲು-ರಾತ್ರಿ ನಡೆಯುವ ಶಿವ ಭಜನೆಯಲ್ಲಿ ಸರ್ವ ಜಾತಿ-ಜನಾಂಗದವರು ಪಾಲ್ಗೊಳ್ಳುತ್ತಿದ್ದಾರೆ.

ಮುಂಬೈ, ಪುಣೆ, ಗೋವಾ, ಬೆಂಗಳೂರು, ಹೈದರಾಬಾದ್‌, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳಿಗೆ ತಂಗಲು ಮತ್ತು ದಾಸೋಹದ ವ್ಯವಸ್ಥೆಯನ್ನು ಶ್ರೀಮಠದಲ್ಲಿ ಮಾಡಲಾಗಿದೆ.

ಮುದ್ದೇಬಿಹಾಳ, ಅಮಲ್ಯಾಳ, ಕಲ್ಲದೇವನಹಳ್ಳಿ, ಬ್ಯಾಕೋಡ ಹೀಗೆ ವಿವಿಧೆಡೆಗಳಲ್ಲಿ ಶ್ರೀಮಠವು ಶಾಖಾ ಮಠಗಳನ್ನು ಹೊಂದಿದೆ.

ಮಠಕ್ಕೆ ಭಕ್ತರೊಬ್ಬರು ನೂತನವಾಗಿ ಗೋಪುರ ನಿರ್ಮಿಸಿದ್ದು, ಶ್ರೀಮಠಕ್ಕೆ ಕೂಡಿಸಲಾದ ಬೃಹದಾಕಾರದ ದ್ವಾರ ಬಾಗಿಲು ಭಕ್ತರ ಕಣ್ಮನ ಸೆಳೆಯುತ್ತಿದೆ. ಶ್ರೀಮಠದಲ್ಲಿ ಭಕ್ತರ ಬೇಡಿಕೆಯಂತೆ ಲಿಂ| ವಿರಕ್ತ ಮಹಾಸ್ವಾಮಿಗಳವರ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಗೋಪಾಲ ಕಾವಲಿ ವಿಶೇಷ:ಪ್ರತಿ ವರ್ಷ ಜರುಗಲಿರುವ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದಲ್ಲಿ ಗೋಪಾಲ ಕಾವಲಿ (ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮ ನಡೆಯುತ್ತಿದ್ದು, ಅಸಂಖ್ಯಾತ ಭಕ್ತಸಮೂಹ ಪಾಲ್ಗೊಳ್ಳುತ್ತದೆ. ಪಂಢ‌ರಪುರದ ವಿಠuಲನ ಜಾತ್ರೋತ್ಸವದಂದು ಜರುಗುವ ಗೋಪಾಲ ಕಾವಲಿಗೂ ಇಲ್ಲಿ ಜರುಗುವ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮಕ್ಕೂ ಸಂಬಂಧವಿದೆ ಎಂಬ ಮಾತು ಹಿರಿಯರದ್ದಾಗಿದೆ. ಈ ಮೊಸರು ಗಡಿಗೆ ಒಡೆದಾಗ ಕೆಳಗೆ ನಿಂತ ಭಕ್ತರ ಮೈಮೇಲೆ ಮೊಸರು ಬಿದ್ದರೆ ಖಾಸ್ಗತನಿಗೆ ತಮ್ಮ ಬೇಡಿಕೆ ಮುಟ್ಟುತ್ತದೆ ಎಂಬುದು ಹಾಗೂ ಆ ಭಕ್ತನ ಮನೆಯಲ್ಲಿ ಹಾಲು ಮೊಸರಿನ ಹೈನುಗಾರಿಕೆಯಂತೆ ಸಂಪದ್ಭರಿತವಾಗುತ್ತದೆ ಎಂಬುದು ಭಕ್ತರ ವಾಡಿಕೆ ಇದೆ.

 

•ಜಿ.ಟಿ. ಘೋರ್ಪಡೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ