ಅದ್ಧೂರಿ ಶೋಭಾಯಾತ್ರೆ

ಗಣೇಶನಿಗೆ ಭಕ್ತಿಯ ವಿದಾಯ•ಹರಿದು ಬಂದ ಜನ ಸಾಗರ

Team Udayavani, Sep 9, 2019, 1:40 PM IST

ಚಳ್ಳಕೆರೆ: ನಗರದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.

ಚಳ್ಳಕೆರೆ: ನಗರದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳ ಸಂಯುಕ್ತಾಶ್ರಯದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಹಿನ್ನೆಲೆಯಲ್ಲಿ ಅದ್ಧೂರಿ ಶೋಭಾಯಾತ್ರೆ ನೆರವೇರಿತು.

ನಿರೀಕ್ಷೆಗೂ ಮೀರಿದ ಭಕ್ತ ಸಾಗರವೇ ಹರಿದು ಬಂದಿದ್ದು, ನಗರದಾದ್ಯಂತ ಕೇಸರಿ ಧ್ವಜಗಳ ಕಲರವ ಕಂಡು ಬಂತು.

ನಗರದ ಬಿಇಒ ಕಚೇರಿ ಆವರಣದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ನಡೆದಿದ್ದು, ಬೆಳಗ್ಗೆ 11ಕ್ಕೆ ಶೋಭಾಯಾತ್ರೆ ಪ್ರಾರಂಭವಾಯಿತು. ಚಿತ್ರದುರ್ಗದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಶೋಭಾಯಾತ್ರೆಗೆ ಚಾಲನೆ ನೀಡಿದರು. ಸಾವಿರಾರು ಕಾರ್ಯಕರ್ತರ ಜಯಘೋಷ, ಮಂಗಳವಾದ್ಯ, ಡೊಳ್ಳು ಕುಣಿತ, ಜಾನಪದ ನೃತ್ಯ, ಗೊಂಬೆ ಕುಣಿತ, ಮಹರ್ಷಿ ವಾಲ್ಮೀಕಿ ಹಾಗೂ ಮದಕರಿ ನಾಯಕ, ಓನಕೆ ಓಬ್ವವ ವೇಷಧಾರಿಗಳು ಜನರ ಗಮನ ಸೆಳೆದರು. ಉಡುಪಿಯ ಚಂಡೆ ಕುಣಿತ ಸಹ ಜನರ ಗಮನ ಸೆಳೆಯಿತು.

ಮೆರವಣಿಗೆ ಚಿತ್ರದುರ್ಗ ರಸ್ತೆ ಮೂಲಕ ವಾಲ್ಮೀಕಿ ವೃತ್ತಕ್ಕೆ ಬಂದಾಗ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಗಣೇಶ ಭಕ್ತರು ಕ್ಷೀರಾಭಿಷೇಕ ಮಾಡಿದರು. ವಾಲ್ಮೀಕಿ ವೃತ್ತದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಲ್ಲಿ ಕೆಲವೊತ್ತು ಸಂಚಾರ ಅಸ್ತವ್ಯಸ್ತವಾಯಿತು.

ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಭಕ್ತರು ಕಂಡು ಬಂದಿದ್ದು, ಕೇಸರಿ ಧ್ವಜ ಹಿಡಿದು ಸಾವಿರಾರು ಯುವಕರು ರಸ್ತೆಯ ಮೇಲೆ ಧ್ವಜವನ್ನು ವೃತ್ತಾಕಾರದಲ್ಲಿ ತಿರುಗಿಸಿದಾಗ ನೆರೆದಿದ್ದ ಸಾವಿರಾರು ಭಕ್ತರು ಜಯಕಾರ ಹಾಕಿದರು.

ಮೆರವಣಿಗೆ ಹಂತ, ಹಂತವಾಗಿ ಸಾಗುತ್ತಾ ನಡೆದಂತೆಲ್ಲಾ ಭಕ್ತರ ಸಂಖ್ಯೆ ಹೆಚ್ಚಾಗುತ್ತಿತ್ತು. ಬೆಳಗ್ಗೆ 11ಕ್ಕೆ ಮೆರವಣಿಗೆ ಪ್ರಾರಂಭವಾದರೂ ಮಧ್ಯಾಹ್ನ 4ಕ್ಕೆ ಇಲ್ಲಿನ ನೆಹರೂ ವೃತ್ತಕ್ಕೆ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಕೆಲವೊತ್ತು ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆಯಲಾಗಿತ್ತು. ನೆಹರು ಸರ್ಕಲ್ ಸುತ್ತಲೂ ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಜಮಾಯಿಸಿದ್ದು, ಹಿಂದೆಂದೂ ಕಾಣದಂತಹ ಭಕ್ತರು ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತಕ್ಕೆ ತೆರಳಿ ಮತ್ತೆ ಅಲ್ಲಿಂದ ಪುನಃ ನೆಹರು ಸರ್ಕಲ್ಗೆ ಬಂದು ಬಳ್ಳಾರಿ ರಸ್ತೆಯ ಮೂಲಕ ಬುಡ್ನಹಟ್ಟಿ ಗ್ರಾಮಕ್ಕೆ ಮೆರವಣಿಗೆ ತೆರಳಿ ಅಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು.

ಹಿಂದೂ ಮಹಾ ಗಣಪತಿಯ ಮೊದಲ ವರ್ಷವೇ ಭಕ್ತರಿಂದ ಹೆಚ್ಚಿನ ಉತ್ತೇಜನ ದೊರಕಿದ್ದು, ಪ್ರಾರಂಭದ ಹಂತದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದ್ದರೂ ಮೆರವಣಿಗೆ ಸಾಗಿದಂತೆಲ್ಲಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ವ್ಯವಸ್ಥಾಪಕರಿಗೆ ಹೆಚ್ಚು ಸಂತಸವನ್ನುಂಟು ಮಾಡಿತ್ತು. ಮೆರವಣಿಗೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದು, 10 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆ ವೀಕ್ಷಿಸಿದರು.

ಡಿ.ಜೆ ಸೌಂಡ್‌ ಹಾಡುಗಳಿಗೆ ಜನತೆ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಭಕ್ತರಿಗೆ ಬಾಳೆಹಣ್ಣು, ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂ ಮಹಾಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ಹಲವಾರು ಮಹಿಳೆಯರು ವಾಲ್ಮೀಕಿ ವೃತ್ತದಲ್ಲಿ ವಿಶೇಷವಾದ ರಂಗೋಲಿ ಹಾಕುವ ಮೂಲಕ ಜನರ ಗಮನ ಸೆಳೆದರು. ಚಕ್ರದಾರದ ರಂಗೋಲಿ ಹಾಕಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶುಭ ಸೋಮಶೇಖರ್‌, ವಕೀಲೆ ಮಧುಮತಿ, ಇಂದುಮತಿ, ಸುನೀತಾ ಬಸವರಾಜು, ಗೀತಾಂಜಲಿ, ಉಮಾ, ಗಿರಿಜಾ ಗಂಗಾಧರ ಮುಂತಾದವರು ರಂಗೋಲಿ ಹಾಕಿದರು.

ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠ, ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಿ.ಸೋಮಶೇಖರ ಮಂಡಿಮಠ, ಅಧ್ಯಕ್ಷ ಬಾಳೆಮಂಡಿ ರಾಮದಾಸ್‌, ಉಪಾಧ್ಯಕ್ಷ ಬಿ.ಎಸ್‌.ಶಿವಪುತ್ರಪ್ಪ, ಶೋಭಾಯಾತ್ರೆ ಪ್ರಮುಖ ಜೆ.ಪಿ.ಜಯಪಾಲಯ್ಯ, ಬಿ.ಸಿ.ಸಂಜೀವಮೂರ್ತಿ, ಪ್ರಕಾಶ್‌ಶೆಟ್ಟಿ, ಕಾರ್ಯದರ್ಶಿ ಮಾತೃಶ್ರೀ ಎನ್‌.ಮಂಜುನಾಥ, ಕೆ.ಎಂ.ಯತೀಶ್‌, ಮೋಹನ್‌, ಸಿ.ಎಸ್‌.ಪ್ರಸಾದ್‌, ಡಿ.ಎಂ.ತಿಪ್ಪೇಸ್ವಾಮಿ, ಪ್ರಕಾಶ್‌, ನಗರಸಭೆ ಸದಸ್ಯ ನಾಗರಾಜು, ಶ್ರೀನಿವಾಸ್‌, ತಾಪಂ ಸದಸ್ಯರಾದ ಈ.ರಾಮರೆಡ್ಡಿ, ಸಣ್ಣಸೂರಯ್ಯ, ಹಿರೇಹಳ್ಳಿ ಮೋಹನ್‌, ಎಸ್‌.ಎಂ.ಗಂಗಾಧರ ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ