ಕುಡಿಯುವ ನೀರಿಗಾಗಿ ವಿವಿಧ ಗ್ರಾಮಸ್ಥರ ಪರದಾಟ

Team Udayavani, Apr 21, 2019, 5:25 PM IST

ಚಳ್ಳಕೆರೆ: ಚಟ್ಟೇಕಂಬ ಗ್ರಾಮದಲ್ಲಿ ಟ್ಯಾಂಕರ್‌ನಿಂದನೀರು ಪಡೆಯಲು ಮುಗಿ ಬಿದ್ದಿರುವ ಮಹಿಳೆಯರು.

‌ಚಳ್ಳಕೆರೆ: ತಾಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.

ಪರಶುರಾಂಪುರ ಹೋಬಳಿ ವ್ಯಾಪ್ತಿಯ ಚಟ್ಟೇಕಂಬ, ಚನ್ನಮ್ಮನಾಗತಿಹಳ್ಳಿ, ಮತ್ಸಮುದ್ರ, ಅಲ್ಲಾಪುರ, ಚೌಳೂರು, ನನ್ನಿವಾಳ ಗ್ರಾಪಂ ವ್ಯಾಪ್ತಿಯ ಇಮಾಂಪುರ, ಗೋರ್ಲಕಟ್ಟೆ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಪ್ರತಿನಿತ್ಯ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂದು ಇತ್ತೀಚಿಗೆ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಪಂ ಸಿಇಒ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಯಾವ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಇರುವ
ಗ್ರಾಮಗಳಿಗೆ ತೆರಳಿ ಸಮಸ್ಯೆ ಪರಿಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದರೂ ಸಹ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಚೆಟ್ಟೇಕಂಬ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದ್ದು, ಪ್ರತಿನಿತ್ಯ
ಗ್ರಾಪಂನಿಂದ 5 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಟ್ಯಾಂಕರ್‌ ಬಂದ ಕೂಡಲೇ ನೂರಾರು ಜನರು ಖಾಲಿ ಕೊಡಗಳನ್ನು ಹಿಡಿದು ನೀರು ಪಡೆಯಲು ಟ್ಯಾಂಕರ್‌ಗಳಿಗೆ ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮಾತ್ರವಲ್ಲ, ಕೆಲವೇ ಕೆಲವು ನಿಮಿಷಗಳಲ್ಲಿ
ಟ್ಯಾಂಕರ್‌ ನೀರು ಖಾಲಿಯಾಗುತ್ತದೆ. ಪುನಃ ಮತ್ತೂಂದು ಟ್ಯಾಂಕರ್‌ ಬರುವುದರೊಳಗೆ ಕುಡಿಯುವ ನೀರಿಗಾಗಿ ಜನ ಜಾತ್ರೆಯೇ ಸೇರಿರುತ್ತದೆ.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎರಡೂ ಬೋರ್‌ವೆಲ್‌ನಲ್ಲಿ ನೀರು ಬತ್ತಿದ್ದು, ಹೆಚ್ಚುವರಿಯಾಗಿ ಮತ್ತೆ ಬೋರ್‌ ಕೊರೆಸಿ ನೀರು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎರಡೂ ಬೋರ್‌ವೆಲ್‌ಗ‌ಳು ದುರಸ್ತಿಯಲ್ಲಿರುವುದರಿಂದ ಬೋರ್‌ಗಳು ತಟಸ್ಥವಾಗಿವೆ. ಒಂದು ಬೋರ್‌ವೆಲ್‌ನಲ್ಲಿ ನೀರಿದ್ದು, ಅದನ್ನು ಮೇಲೆತ್ತಲು ನೂತನ ಮೋಟಾರ್‌ ಪಂಪ್‌ ಅಳವಡಿಸಬೇಕಿದೆ. ಈಗಾಗಲೇ ಮೇಲಧಿಕಾರಿಗಳು ನಿರ್ದೇಶನ ನೀಡಿದ್ದು, ಒಂದೆರಡು ದಿನಗಳಲ್ಲಿ ಮೋಟಾರ್‌ ಪಂಪ್‌ ಅಳವಡಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ನೀಡಲಾಗುವುದು ಎಂದು ಗ್ರಾಪಂ ಪಿಡಿಒ ಮಂಜುನಾಥ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ