ಗುಂಡ್ಲುಪೇಟೆ: ಓಂ ಶಕ್ತಿಗೆ ತೆರಳಿದ್ದ 8 ಮಂದಿಗೆ ಕೋವಿಡ್ ಪಾಸಿಟಿವ್
Team Udayavani, Jan 12, 2022, 9:10 AM IST
ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಿಂದ ಓಂ ಶಕ್ತಿಗೆ ತೆರಳಿ ವಾಪಸ್ ಆದ 8 ಮಂದಿಗೆ ಕೊರೊನಾ ಪಾಸಿಟವ್ ಧೃಡಪಟ್ಟಿದೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಓಂ ಶಕ್ತಿಗೆ ಬಸ್ ನಲ್ಲಿ ತೆರಳಿದ್ದ 63 ಮಂದಿ ಬುಧವಾರ ಬೆಳಗಿನ ಜಾವ ಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಎಲ್ಲರನ್ನು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆಸಿದ ವೇಳೆ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದವರ ಪರೀಕ್ಷೆ ಮಾದರಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಇದರ ವರದಿ ನಾಳೆ (ಗುರುವಾರ) ಬರಲಿದೆ.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂದೀಪ್ ಕುಮಾರ್, ಡಾ.ಹೇಮಾ ಮೂರ್ತಿ ಮಾರ್ಗದರ್ಶನದಲ್ಲಿ ಆರೋಗ್ಯಾಧಿಕಾರಿ ಯತೀಶ್, ರವಿಕುಮಾರ್, ಲೀಲಾವತಿ, ಮಂಜುಳ, ವಿಜಯ, ಶುಶ್ರೂಷಕಿ ಅರುಣಾಕ್ಷಿ, ನಾಗೇಂದ್ರ ಸೇರಿದಂತೆ ಇತರರು ಕೊರೊನಾ ಪರೀಕ್ಷೆ ನಡೆಸಿದ್ದಾರೆ.
ಮತ್ತೊಂದು ತಡ ಸಿದ್ದತೆ: ಓಂ ಶಕ್ತಿಗೆ ತೆರಳಲು ಹಂಗಳ ಗ್ರಾಮದ ಮತ್ತೊಂದು ತಂಡ ಸಿದ್ದವಾಗಿದೆ. ಸೋಂಕಿನ ತೀವ್ರತೆ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಓಂಶಕ್ತಿಗೆ ಹೋಗಲು ಸಿದ್ದತೆ ನಡೆಸುತ್ತಿರುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸ್ಥಳೀಯರಾದ ಸುನಿಲ್ ಒತ್ತಾಯಿಸಿದ್ದಾರೆ.