ಬೂತ್‌ ಮಟ್ಟದಲ್ಲಿ ಸಂಘಟಿಸದ್ದಕ್ಕೆ ಸೋಲು

Team Udayavani, Aug 7, 2019, 3:00 AM IST

ಚಾಮರಾಜನಗರ: ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ ಪಕ್ಷ ಅಪಾರವಾದ ಕೊಡುಗೆಯನ್ನು ನೀಡಿದೆ. ಆದರೂ ಸಹ ಚುನಾವಣೆಗಳಲ್ಲಿ ಹಿನ್ನಡೆಯಾಗಲು ಕಾಂಗ್ರೆಸ್‌ ಪಕ್ಷವನ್ನು ಬೂತ್‌ ಮಟ್ಟದ ಸಂಘಟನೆಯನ್ನು ಬಲಿಷ್ಠ ಗೊಳಿಸದಿರುವುದು ಪ್ರಮಾದವಾಗಿದೆ ಎಂದು ಸತ್ಯ ಶೋಧನಾ ಸಮಿತಿಯ ಸಂಚಾಲಕ, ಮಾಜಿ ಸಚಿವ ಬಸವರಾಯ ರೆಡ್ಡಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಆರ್‌. ಧ್ರುವನಾರಾಯಣ ಸೋಲಿನ ಕಾರಣ ಕುರಿತ ಸತ್ಯ ಶೋಧನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಬೂತ್‌ಮಟ್ಟದಲ್ಲಿ ಬಲಿಷ್ಠಗೊಳಿಸಿ: ಕಳೆದ 2018ರ ಲೋಕಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ತೃಪ್ತಿಕರವಾದ ಫ‌ಲಿತಾಂಶ ಬರಲಿಲ್ಲ. ಕಾರಣ ಕಾಂಗ್ರೆಸ್‌ ಪಕ್ಷದಲ್ಲಿರುವ ನಾವೆಲ್ಲರೂ ಸಹ ಅಭಿ ವೃ ದ್ಧಿ ಪರವಾದ ಚಿಂತನೆಯಲ್ಲಿ ಇದ್ದೇವೆಯೇ ಹೊರತು ಇತರೇ ವಿಚಾರಗಳಿಗೆ ಅಷ್ಟು ಪ್ರಮುಖ್ಯತೆಯನ್ನು ಕೊಡಲಿಲ್ಲ. ಅಲ್ಲದೇ ಕಾಂಗ್ರೆಸ್‌ ಪಕ್ಷವನ್ನು ಬೂತ್‌ ಮಟ್ಟದಲ್ಲಿ ಸಂಘಟನೆ ಮಾಡುವ ನಿಟ್ಟಿನಲ್ಲಿ ನಾವು ಎಡವಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತದಾರನ್ನು ಕಾಂಗ್ರೆಸ್‌ ಪಕ್ಷದ ಪರವಾಗಿ ಒಲಿಸಿಕೊಳ್ಳಲು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅದರಂತೆ ಸಂಘಟನೆ ಮಾಡಲು ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ: ಚಾಮರಾಜನಗರ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ದಿ.ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿತ್ತು. ಅವರ ಅಕಾಲಿಕ ಮರಣ ನಂತರ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದನ್ನು ಸರಿ ಮಾಡಿಕೊಂಡು ಹೋಗುವ ಜವಾಬ್ದಾರಿ ಜಿಲ್ಲೆಯ ಪ್ರತಿಯೊಬ್ಬರ ಮೇಲಿದೆ. 2008 ಮತ್ತು 2013 ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಇತ್ತು. ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಹಿನ್ನಡೆಯಾಗಿದೆ. ಇದಕ್ಕೆ ಪ್ರಮುಖವಾದ ಕಾರಣವನ್ನು ತಿಳಿದುಕೊಳ್ಳುವ ಜೊತೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದ ಹೆಚ್ಚಿನ ಬಹುಮತವನ್ನು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಲ್ಪ ಮತಗಳ ಅಂತರದಲ್ಲಿ ಧ್ರುವಗೆ ಸೋಲು: ಸಮಿತಿಯ ಸಂಚಾಲಕ ವಿ. ಸುದರ್ಶನ್‌ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿ ವೃ ದ್ಧಿಯಲ್ಲಿ ಸಂಸದರರಾಗಿದ್ದ ಆರ್‌. ಧ್ರುವನಾರಾಯಣ ಹೆಚ್ಚಿನ ಶ್ರಮವಹಿಸಿದ್ದರು. ರಾಜ್ಯದಲ್ಲಿಯೇ ನಂಬರ್‌ ಒನ್‌ ಸಂಸದರಾಗಿದ್ದರು. ಇಂಥವರು ಸೋತಿರುವ ಬಗ್ಗೆ ಪರಾಮೆರ್ಶೆಯಾಗಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಆಶಾದಾಯಕ ಬೆಳವಣಿಗೆ ಎಂದರೆ, ಧ್ರುವ ಅವರ ಸೋಲು ಅಲ್ಪ ಮತಗಳ ಅಂತರದಲ್ಲಿ ಎಂಬುವುದನ್ನು ಅರ್ಥ ಮಾಡಿಕೊಳ್ಳೋಣ. ಮುಂದಿನ ದಿನಗಳಲ್ಲಿ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆ ತೆಗೆದುಕೊಳ್ಳಲು ಮುಂದಾಗೋಣ ಎಂದರು.

ಕಡಿಮೆ ಅಂತರದಲ್ಲಿ ಸೋಲಾಗಿದೆ: ಮಾಜಿ ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ಕ್ಷೇತ್ರದಲ್ಲಿ ಮಾಡಿರುವ ಅಭಿ ವೃ ದ್ಧಿಯನ್ನು ಮುಂದಿಟ್ಟುಕೊಂಡು ನಾವೆಲ್ಲರೂ ಚುನಾವಣೆ ಎದುರಿಸಿದೇವೆ. ಅದರೆ, ಬಿಜೆಪಿ ಜನರಲ್ಲಿ ಭಾವನೆ ಹಾಗೂ ಜಾತಿ, ಧರ್ಮಗಳ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಯಿತು. ರಾಜ್ಯ ಇತರೆ ಕ್ಷೇತ್ರಗಳಲ್ಲಿ ಸೋತಿರುವಷ್ಟು ಅಂತರದಲ್ಲಿ ನಮ್ಮ ಕ್ಷೇತ್ರದಲ್ಲಿ ಜನರು ತಿರಸ್ಕಾರ ಮಾಡಿಲ್ಲ. ಕಡಿಮೆ ಅಂತರದಲ್ಲಿ ಸೋಲಾಗಿದೆ. ಎಲ್ಲರೂ ಸಹ ಕಾಂಗ್ರೆಸ್‌ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡುವ ಮೂಲಕ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲು ಮುಂದಾಗೋಣ ಎಂದು ತಿಳಿಸಿದರು.

ಸತ್ಯ ಶೋಧನಾ ಸಮಿತಿಯ ವೀರಕುಮಾರ್‌ ಪಾಟೀಲ್‌, ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಆರ್‌. ನರೇಂದ್ರ, ಮಾಜಿ ಸಂಸದ ಎಂ. ಶಿವಣ್ಣ, ಮಾಜಿ ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಎಸ್‌.ಜಯಣ್ಣ, ಎಸ್‌.ಬಾಲರಾಜು, ಜಿಪಂ ಅಧ್ಯಕ್ಷೆ ಶಿವಮ್ಮ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್‌ ಅಧ್ಯಕ್ಷರಾದ ತೋಟೇಶ್‌, ಗುರುಸ್ವಾಮಿ, ಮಹಮದ್‌ ಅಸ್ಗರ್‌, ಹೊಂಗನೂರು ಚಂದ್ರು, ಸೈಯದ್‌ ರಫಿ, ಬಿ.ಕೆ. ರವಿಕುಮಾರ್‌, ಜಿಪಂ ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ತಾಪಂ ಅಧ್ಯಕ್ಷೆ ದೊಡ್ಡಮ್ಮ, ನಗರಸಭಾ ಸದಸ್ಯರು, ಜಿಪಂ, ತಾಪಂ ಹಾಗೂ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

370 ರದ್ದತಿಗೆ ಆಕ್ಷೇಪವಿಲ್ಲ – ವಿ.ಸುದರ್ಶನ್‌: ಚಾಮರಾಜನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಅಧಿಕಾರ 370 ಕಲಂ ರದ್ದು ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೆ ಸಂವಿಧಾನದಲ್ಲಿಯೇ ಅವಕಾಶ ಮಾಡಿಕೊಡಲಾಗಿದೆ. ಆದರೆ ಬಿಜೆಪಿ ಇದನ್ನು ತೆಗೆಯಲು ಅನುಸರಿಸಿದ‌ ಮಾರ್ಗಗಳ ಬಗ್ಗೆ ನಮ್ಮ ಪಕ್ಷದ ವಿರೋಧ ವಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ವಿ. ಸುದರ್ಶನ್‌ ಹೇಳಿದರು.

ನಗರದಲ್ಲಿ ನಡೆದ ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖವಾದ 370 ಕಲಂ ತೆಗೆಯಲು ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಅಲ್ಲಿನ ಜನಾಭಿಪ್ರಾಯ ಸಂಗ್ರಹ ಮಾಡದೇ, ಮಿಲಿಟರಿಯನ್ನು ತೆಗೆದುಕೊಂಡು ಹೋಗಿ, ಅಲ್ಲಿನ ಜನರನ್ನು ಕತ್ತಲ್ಲಿನಲ್ಲಿಟ್ಟು ಕಾಯ್ದೆಯನ್ನು ರದ್ದು ಪಡಿಸಿದ್ದೇವೆ ಎಂದು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ