ತಲಕಾವೇರಿಯಿಂದ ಬೆಂಗಳೂರಿಗೆ ರೈತಸಂಘ ಜಾಥಾ

Team Udayavani, Sep 30, 2019, 3:00 AM IST

ಚಾಮರಾಜನಗರ: ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಪುನರ್ವಸತಿ, ಪರಿಹಾರ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಲಕಾವೇರಿಯಿಂದ ಬೆಂಗಳೂರಿನವರೆಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.12ರ ಬೆಳಗ್ಗೆ 8ಕ್ಕೆ ತಲಕಾವೇರಿಯಿಂದ ಹೊರಟು, ಅ. 14ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡು ಬಹಿರಂಗ ಅಧಿವೇಶನ ನಡೆಸಲಾಗುವುದು. ಈ ಮೂಲಕ ಕೇಂದ್ರ-ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹಕ್ಕೊತ್ತಾಯ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಸರ್ಕಾರಗಳನ್ನು ಎಚ್ಚರಿಸಿ: ಜಾಥಾ ಮತ್ತು ಬಹಿರಂಗ ಅಧಿವೇಶನದಲ್ಲಿ ಮಠಾಧಿಪತಿಗಳು, ಹೋರಾಟಗಾರರು, ಪ್ರಗತಿಪರ ಚಿಂತರಕು, ಹಲವಾರು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ, ರಾಜ್ಯ-ಕೇಂದ್ರ ಸರ್ಕಾರವನ್ನು ಎಚ್ಚರಿಸಬೇಕೆಂದು ಮನವಿ ಮಾಡಿದರು.

ಭೀಕರ ಸ್ಥಿತಿ: ರಾಜ್ಯ ಹಿಂದೆಂದೂ ಕಂಡರಿಯದಂತಹ ಭೀಕರ ಪ್ರವಾಹಕ್ಕೆ ಒಳಗಾಗಿದೆ. ಅಕಾಲಿಕ ಮಳೆಯಿಂದಾಗಿ ನಲುಗಿದೆ. 22 ಜಿಲ್ಲೆಗಳ 103 ತಾಲೂಕು ಪ್ರವಾಹಕ್ಕೆ ತುತ್ತಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು, ಅರಿಶಿಣ, ಬಾಳೆ, ದಾಳಿಂಬೆ, ದ್ರಾಕ್ಷಿ, ಈರುಳ್ಳಿ, ಸೂರ್ಯಕಾಂತಿ, ಹತ್ತಿ, ಜೋಳ ಸಂಪೂರ್ಣ ನಾಶವಾಗಿವೆ.

ನೂರಾರು ಹಳ್ಳಿಗಳು ಜಲಾವೃತವಾಗಿ ಮನೆಗಳು ಕುಸಿದು ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ತೆಂಗು, ಅಡಕೆ, ಕಾಫಿ ಮತ್ತು ಉಪಬೆಳೆಗಳು ನಾಶವಾಗಿ ಜನರು ನಲುಗಿದ್ದಾರೆ. ಮೈಸೂರು , ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಕೆಲವು ಗ್ರಾಮಗಳು ಜಲಾವೃತಗೊಂಡು, ಮನೆಗಳು ಕುಸಿದಿವೆ. ಫ‌ಸಲು ಮತ್ತಿತರ ಆಸ್ತಿಗಳು ನಷ್ಟವಾಗಿವೆ ಎಂದು ಹೇಳಿದರು.

ಬರಪೀಡಿತ ಪ್ರದೇಶಗಳು: ಒಂದೆಡೆ ಅತಿವೃಷ್ಟಿ ಉಂಟಾದರೆ, ಇನ್ನೊಂದೆರಡೆ ರಾಜ್ಯದ 156 ತಾಲೂಕುಗಳಲ್ಲಿ ಐದು ವರ್ಷಗಳಿಂದ ನಿರಂತರ ಬರ ಪರಿಸ್ಥಿತಿಯಿದೆ. ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಕಾಯಂ ಬರಗಾಲ ಪ್ರದೇಶಗಳಾಗಿದ್ದು, ಈ ಪ್ರದೇಶದಲ್ಲಿ ನಾಲ್ಕು ಲಕ್ಷಕ್ಕಿಂತಲೂ ಅಧಿಕ ತೆಂಗಿನ ಮರ ಒಣಗಿ ನಾಶವಾಗಿವೆ. 2 ಸಾವಿರ ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಜಾನುವಾರುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬೇಡಿಕೆ ಈಡೇರಿಸಿ: ಕೇಂದ್ರ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಇದುವರೆಗೂ ಪರಿಹಾರ ಘೋಷಿಸಿಲ್ಲ. ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಪಡೆಯಲು ಸಾಧ್ಯವಾಗದೇ ಅಸಹಾಯಕತೆಯಿಂದ ಪರಿತಪಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶದ ಕಬ್ಬು ಬೆಳೆಗಳಿಗೆ ವೈಜ್ಞಾನಿಕ ಪರಿಹಾರ, ಮನೆ ಮಠ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ, ಹಳ್ಳಿಗಳ ಪುನರ್‌ಸ್ಥಾಪನೆ, ಪ್ರವಾಹ ಪೀಡಿತ ಮತ್ತು ಬರ ಪೀಡಿತ ಪ್ರದೇಶಗಳ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಕಾರ್ಯದರ್ಶಿ ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಬಸವಣ್ಣ, ಪ್ರ.ಕಾರ್ಯದರ್ಶಿ ಸಿದ್ದರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.

ರೈತ ಸಂಘ ಜಾಥಾ ಮಾರ್ಗ: ಅ.12ರ ಬೆಳಗ್ಗೆ ತಲಕಾವೇರಿಯಿಂದ ಹೊರಟು, ಮಡಿಕೇರಿ, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆ, ಇಲವಾಲ ಮೈಸೂರಿನಲ್ಲಿ ರಾತ್ರಿ ವಾಸ್ತವ್ಯ. ಅ.13ರ ಬೆಳಗ್ಗೆ ಮೈಸೂರಿನ ಟೌನ್‌ಹಾಲ್‌ನಲ್ಲಿ ಸಭೆ. ಶ್ರೀರಂಗಪಟ್ಟಣ, ಮಂಡ್ಯ, ಗೆಜ್ಜಲಗೆರೆ, ಮದ್ದೂರು, ಶಿವಪುರ, ಚೆನ್ನಪಟ್ಟಣ ವಾಸ್ತವ್ಯ. ಅ.14 ಚನ್ನಪಟ್ಟಣದಿಂದ ಬೆಳಗ್ಗೆ ಹೊರಟು, ರಾಮನಗರ, ಬಿಡದಿ, ಕೆಂಗೇರಿ, ಬೆಂಗಳೂರು. ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಮಧ್ಯಾಹ್ನ 1 ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹನೂರು: ಧಾರಾಕಾರ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿ ಮೂವರು ಮಕ್ಕಳು ಮೃತಪಟ್ಟಿದ್ದ ರಾಮೇಗೌಡನದೊಡ್ಡಿ ಗ್ರಾಮಕ್ಕೆ ಶಾಸಕ ನರೇಂದ್ರ,...

  • ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ತಮಿಳುನಾಡು ಮತ್ತು ಕೇರಳದ ಹೆದ್ದಾರಿಯಲ್ಲಿ ಹಗಲು ಸಂಚಾರ ನಿರ್ಭಂದಿಸದಂತೆ...

  • ಕೊಳ್ಳೇಗಾಲ: ವೀರಶೈವ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಬೇಕು ಎಂದು ರಾಷ್ಟ್ರೀಯ...

  • ಹನೂರು: ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವಂತಹ‌ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಇಂದಿನ...

  • ಚಾಮರಾಜನಗರ: ಬಂಡೀಪುರ ಅರಣ್ಯದಂಚಿನ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಭಾನುವಾರ ...

ಹೊಸ ಸೇರ್ಪಡೆ