ಮಹೇಶ್‌ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಲಿ

Team Udayavani, Sep 11, 2019, 3:00 AM IST

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಸಂತನಂತೆ ಮಾತನಾಡಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಪಕ್ಷದ ಆದೇಶವನ್ನು ಧಿಕ್ಕರಿಸಿರುವ ಅವರು ರಾಜ್ಯದ ಜನತೆಯ ಹಾಗೂ ಬಿಎಸ್‌ಪಿ ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಬೇಕು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದರು. ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಆಯೋಜಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಸುಳ್ಳು ಹೇಳಿದ ಮಹೇಶ್‌: ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರದ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿದ್ದು ಸರ್ಕಾರಕ್ಕೆ ಬೆಂಬಲ ನೀಡುವಂತೆ ಅವರಿಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸೂಚಿಸಿದ್ದರು. ಆದರೆ ಮಹೇಶ್‌ ಅವರು, ತಟಸ್ಥರಾಗಿರುವಂತೆ ಮಾಯಾವತಿ ಅವರು ಹೇಳಿದ್ದರು ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅವರು ಸದನಕ್ಕೆ ಗೈರು ಹಾಜರಾಗಿದ್ದರು ಎಂದು ಆರೋಪಿಸಿದರು.

ಬಾಹ್ಯ ಬೆಂಬಲ ನೀಡುವೆ ಎಂದು ಮಾತು ತಪ್ಪಿದರು: ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಲಖನೌದಲ್ಲಿ ನಡೆದ ಬಿಎಸ್‌ಪಿ ಅಧಿವೇಶನದ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಇದೆ. ಬಿಎಸ್‌ಪಿಯ ಶಾಸಕರಾದ ನೀವು ವಿರೋಧ ಪಕ್ಷದೊಡನೆ ಗುರುತಿಸಿಕೊಂಡರೆ ಬಿಜೆಪಿ ಜೊತೆ ಗುರುತಿಸಿಕೊಂಡಂತಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕು ಎಂದು ಎನ್‌. ಮಹೇಶ್‌ ಅವರಿಗೆ ಸೂಚಿಸಿದ್ದರು. ಇದಾದ ಬಳಿಕ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಆರಂಭವಾದವು. ಭಿನ್ನಮತ ಶುರುವಾಯಿತು. ಜು. 6ರಂದು ಎನ್‌. ಮಹೇಶ್‌ ಅವರು ಯಳಂದೂರು ತಾಲೂಕಿನ ಮದ್ದೂರಿನಲ್ಲಿ ನಾನು ಬಿಜೆಪಿ ಬೆಂಬಲಿಸುವುದಿಲ್ಲ. ಜೆಡಿಎಸ್‌ಗೆ ಬಾಹ್ಯ ಬೆಂಬಲ ನೀಡುತ್ತೇನೆ ಎಂದಿದ್ದರು.

ಸದನಕ್ಕೆ ಹಾಜರಾಗಿ ಎಂದು ತಿಳಿಸಿದರೂ ಗೈರು: ಜು. 21ರಂದು ಮಾಧ್ಯಮಗಳ ಜೊತೆ ಮಾತನಾಡಿ, ವಿಶ್ವಾಸಮತದ ಅಧಿವೇಶನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ತಟಸ್ಥರಾಗಿರುವಂತೆ ಮಾಯಾವತಿಯವರು ಸೂಚಿಸಿದ್ದಾರೆ ಎಂದು ಹೇಳಿದರು. ಈ ವಿಷಯ ತಿಳಿದ ಮಾಯಾವತಿ ಎನ್‌. ಮಹೇಶ್‌ ಅವರಿಗೆ ಮೊಬೈಲ್‌ ಕರೆ ಮಾಡಿದರು. ಬಳಿಕ ಟ್ವೀಟ್‌ ಮಾಡಿ ಸಹ ಸೂಚಿಸಿದರು. ಅವರ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು.

ಕೂಡಲೇ ಬಿಎಸ್‌ಪಿ ರಾಜ್ಯ ಉಸ್ತುವಾರಿ ಅಶೋಕ ಸಿದ್ಧಾರ್ಥ ಅವರನ್ನು ಬೆಂಗಳೂರಿಗೆ ಕಳುಹಿಸಿದರು. ಅಶೋಕ್‌ ಅವರು ಜು. 22ರಂದು ಬೆಂಗಳೂರಿಗೆ ಬಂದು ಮಹೇಶ್‌ ಮನೆಗೆ ಹೋಗಿ, ಅವರ ಪತ್ನಿ ಮತ್ತು ಗನ್‌ಮ್ಯಾನ್‌ ಮಾತನಾಡಿಸಿ ಎನ್‌. ಮಹೇಶ್‌ ಅವರ ಇನ್ನೊಂದು ಮೊಬೈಲ್‌ ಸಂಖ್ಯೆ ಪಡೆದುಕೊಂಡು ಮಾತನಾಡಿ, ಮಾಯಾವತಿ ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಮತ ನೀಡುವಂತೆ ನಿಮಗೆ ಸೂಚಿಸಿದ್ದಾರೆ. ನೀವು ಸದನಕ್ಕೆ ಹಾಜರಾಗಿ ಸರ್ಕಾರದ ಪರ ಮತ ನೀಡಬೇಕು ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದ ಪರ ಮತ ನೀಡಿದರೆ ವೀರಶೈವರು ನನಗೆ ಓಟ್‌ ಹಾಕಲ್ಲ: ಆಗ ಮೊಬೈಲ್‌ನಲ್ಲಿ ಮಾತನಾಡಿದ ಎನ್‌. ಮಹೇಶ್‌ ನಾನೀಗ ಸಮ್ಮಿಶ್ರ ಸರ್ಕಾರದ ಪರ ಮತ ಹಾಕಿದರೆ ಕ್ಷೇತ್ರದಲ್ಲಿರುವ ವೀರಶೈವರು ನನಗೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಈ ಸರ್ಕಾರ ಹೇಗೂ ಉಳಿಯುವುದಿಲ್ಲ. ಮುಂದೆ ಬಿಜೆಪಿ ಸರ್ಕಾರ ಬರುತ್ತದೆ. ನಾನೇನಾದರೂ ಜೆಡಿಎಸ್‌ ಪರ ಮತ ಹಾಕಿದರೆ ಬಿಜೆಪಿ ಸರ್ಕಾರ ಅನುದಾನ ನೀಡುವುದಿಲ್ಲ. ಹಾಗಾಗಿ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದರು ಎಂದು ಕೃಷ್ಣಮೂರ್ತಿ ಹೇಳಿದರು.

ಮಾತು ತಪ್ಪಿದಕ್ಕೆ ಉಚ್ಚಾಟನೆ: ತಾವು ಮತ ಹಾಕಿದರೂ ಸರ್ಕಾರ ಉಳಿಯುವುದಿಲ್ಲ ಎಂದು ಮಹೇಶ್‌ ಹೇಳಿದ್ದಾರೆ. ಸರ್ಕಾರ ಉಳಿಯುತ್ತಾ ಬೀಳುತ್ತಾ ಎಂಬುದು ಮುಖ್ಯವಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಹೇಳಿದರೂ, ಆ ಪಕ್ಷದ ಶಾಸಕ ಅವರ ಮಾತನ್ನು ಧಿಕ್ಕರಿಸಿದ ಕಾರಣ ಅವರು ಪಕ್ಷದಿಂದ ಉಚ್ಚಾಟನೆ ಮಾಡಿದರು ಎಂದು ತಿಳಿಸಿದರು.

ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು: ಉಚ್ಚಾಟನೆ ಮಾಡಿದ ನಂತರ, ದೆಹಲಿಗೆ ತೆರಳಿ ಮಾಯಾವತಿಯವರ ಬಳಿ ಕೋರಿಕೆ ಸಲ್ಲಿಸಿ ಉಚ್ಛಾಟನೆ ಹಿಂತೆಗೆದು ಕೊಳ್ಳುವಂತೆ ಅವರು ಮನವಿ ಮಾಡಿ ಕ್ಷಮೆ ಯಾಚಿಸಬಹುದಿತ್ತು. ಆದರೆ ಇದುವರೆಗೂ ಮಾಯಾವತಿಯರನ್ನು ಭೇಟಿಯಾಗಿಲ್ಲ. ತಮ್ಮ ಬಳಿ ತಪ್ಪುಗಳನ್ನಿಟ್ಟುಕೊಂಡು ಪಕ್ಷದ ವಿಷಯದಲ್ಲಿ ಸುಳ್ಳು ಹೇಳಿರುವುದರಿಂದ ಮಹೇಶ್‌ ಅವರು ರಾಜ್ಯದ ಜನತೆಯ ಹಾಗೂ ಬಿಎಸ್‌ಪಿ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ರಾಜ್ಯಾಧ್ಯಕ್ಷರು ಒತ್ತಾಯಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹೇಶ್‌ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರಾಗಿ ಕೊಳ್ಳೇಗಾಲ ಕ್ಷೇತ್ರದಲ್ಲಿ 71 ಸಾವಿರ ಮತಗಳನ್ನು ಪಡೆದ ಮಹೇಶ್‌ ಅವರು, ಲೋಕಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ 13600 ಮತಗಳನ್ನು ಗಳಿಸಿಕೊಡುತ್ತಾರೆ. ಇದರ ಅರ್ಥವೇನು? ಎಂದು ಮರು ಪ್ರಶ್ನಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್‌, ಪ್ರಧಾಯ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಇದ್ದರು.

ಸೂಚ್ಯವಾಗಿ ಬಿಜೆಪಿಗೆ ಮಹೇಶ್‌ ಬೆಂಬಲ?
ಚಾಮರಾಜನಗರ: ಬಿಜೆಪಿ ಪರವಾಗಿ ಶಾಸಕರು ಹೊರ ರಾಜ್ಯಗಳಿಗೆ ಹೋದ ಸಂದರ್ಭದಲ್ಲೇ ಬಿಎಸ್‌ಪಿ ಶಾಸಕರೂ ಕಾಣೆಯಾದರೆ ಅದಕ್ಕೆ ಬಿಜೆಪಿಯೇ ಕಾರಣ ತಾನೇ? 12 ಜನರಿಗೆ ಕಚ್ಚಿರುವ ಮಲೇರಿಯಾ ಸೊಳ್ಳೆಯೇ ಇವರಿಗೂ ಕಚ್ಚಿರುವುದೂ ತಾನೇ? ಎಂದು ಸೂಚ್ಯವಾಗಿ ಬಿಜೆಪಿಗೆ ಮಹೇಶ್‌ ಬೆಂಬಲ ನೀಡಿದ್ದಾರೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.

ಸದನಕ್ಕೆ ಹೋಗದೇ ತಟಸ್ಥನಾಗಿರುತ್ತೇನೆ ಎಂದು ಎನ್‌. ಮಹೇಶ್‌ ಹೇಳುತ್ತಾರೆ. ಒಂದು ಸರ್ಕಾರದ ಅಳಿವು ಉಳಿವಿನ ಸಂದರ್ಭದಲ್ಲಿ ಮಾತನಾಡಲು ಬಾರದಿರುವ ಶಾಸಕರೇ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇಂತಿರುವಾಗ ಪ್ರಜಾಪ್ರಭುತ್ವ, ಅಂಬೇಡ್ಕರ್‌ ವಾದದ ಬಗ್ಗೆ ಮಾತನಾಡುವ ಶಾಸಕ ಮಹೇಶ್‌ ಅವರು ಚರ್ಚೆಯಲ್ಲಿ ಪಾಲ್ಗೊಳ್ಳದೇ, ಧ್ಯಾನ ಮಾಡಲು ಎಲ್ಲೋ ಹೋಗಿದ್ದೆ ಎನ್ನುವುದು ಎಷ್ಟು ಸರಿ? ಎಂದರು.

ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ
ಚಾಮರಾಜನಗರ: ಬಿಎಸ್‌ಪಿಗೆ ತಮ್ಮ ಬೆಂಬಲಿಗರ ರಾಜೀನಾಮೆ ಕೊಡಿಸುವ ಮೂಲಕ ಎನ್‌. ಮಹೇಶ್‌ ಅವರು ಸಣ್ಣತನ ತೋರಿದ್ದಾರೆ. ಹಾಗಿದ್ದ ಮೇಲೆ ಇವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲು ಹಾಕಿದರು. ಮಾಯಾವತಿಯವರು ಸದನಕ್ಕೆ ಹಾಜರಾಗಲು ನನಗೆ ತಿಳಿಸಿಲ್ಲ. ಅವರ ಟ್ವೀಟ್‌ ಅನ್ನು ನಾನು ನೋಡಿಲ್ಲ.

ನನಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಬಳಸಲು ಸರಿಯಾಗಿ ಗೊತ್ತಿಲ್ಲ ಎಂದು ಮಹೇಶ್‌ ಹೇಳಿದ್ದಾರೆ. ಆದರೆ ಸದನದಲ್ಲಿ ಒಮ್ಮೆ ಮೊಬೈಲ್‌ ನಲ್ಲಿ ಫೋಟೋ ನೋಡುತ್ತಿದ್ದ ದೃಶ್ಯವನ್ನು ಮಾಧ್ಯಮಗಳು ಸೆರೆ ಹಿಡಿದಾಗ, ನನ್ನ ಮಗನಿಗೆ ವಧು ನೋಡಲು ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಕಳುಹಿಸಿದ್ದರು ಅದನ್ನು ನೋಡುತ್ತಿದ್ದೆ ಎಂದಿದ್ದರು! ವಾಟ್ಸ್‌ಆ್ಯಪ್‌ ಗೊತ್ತಿಲ್ಲದವರು ಸದನದಲ್ಲಿ ಹೇಗೆ ಬಳಸುತ್ತಿದ್ದರು? ಎಂದು ಕೃಷ್ಣಮೂರ್ತಿ ವ್ಯಂಗ್ಯವಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ