ಮಳೆಗೆ ಚೆಲ್ಲಾಟ ರೈತರಿಗೆ ಬೆಳೆ ಸಂಕಟ

Team Udayavani, Aug 5, 2019, 3:00 AM IST

ಗುಂಡ್ಲುಪೇಟೆ: ತಾಲೂಕಿನಲ್ಲಿ ಮುಂಗಾರು ಕೊರತೆಯಿಂದಾಗಿ ಬಿತ್ತನೆ ಮಾಡಿರುವ ಸೂರ್ಯಕಾಂತಿ, ಹತ್ತಿ, ಕಬ್ಬು ಮುಸುಕಿನ ಜೋಳ ಸೇರಿದಂತೆ ಹಲವು ಬೆಳೆಗಳು ಕಮರುತ್ತಿವೆ. ಕೆಲ ದಿನಗಳ ಹಿಂದೆ ಸುರಿದ ತುಂತುರು ಮಳೆ ರೈತರಲ್ಲಿ ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ ಮತ್ತೆ ಭರದ ಛಾಯೆ ಆವರಿಸಿದ್ದು, ರೈತರು ಮತ್ತೆ ಸಂಕಷ್ಟದಲ್ಲಿ ಸಿಲುಕುವ ಭೀತಿಯಲ್ಲಿದ್ದಾರೆ.

ನಷ್ಟದ ಭೀತಿಯಲ್ಲಿ ರೈತರು: ತಾಲೂಕಿನ ಪ್ರಮುಖ ಮಳೆ ಬೀಳುವ ಪ್ರದೇಶಗಳಾದ ಕಾಡಂಚಿನ ಹಂಗಳ, ಮಂಗಲ, ಯಲಚಟ್ಟಿ, ಗೋಪಾಲಪುರ, ಬೇರಂಬಾಡಿ, ಆಲತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಬಾರಿ ಮುಂಗಾರು ಮಳೆ ಪರವಾಗಿಲ್ಲ ಎನ್ನಬಹುದು. ಆದರೆ ಮಳೆಯನ್ನು ನಂಬಿ ಬಿತ್ತನೆ ಕಾರ್ಯ ಮಾಡಿದ್ದ ರೈತರು ಕೈ ಹಿಸುಕೊಳ್ಳುವಂತಾಗಿದೆ. ಆಳೆತ್ತರಕ್ಕೆ ಬೆಳೆಯಬೇಕಾಗಿದ್ದ ಸೂರ್ಯಕಾಂತಿ, ಜೋಳ, ಮುಸುಕಿನ ಜೋಳ ಕೇವಲ ಪೈರೊಡೆದು ಒಣಗುತ್ತಿವೆ. ಹೀಗಾಗಿ ರೈತರು ಮಾಡಿದ ದುಡಿಮೆ, ಬಿತ್ತನೆಗೆ ಖರ್ಚಾಗಿರುವ ಹಣವೂ ಬರದಂತಹ ಸ್ಥಿತಿ ಎದುರಾಗಿದೆ. ಹೀಗೆ ಆದರೆ ಮುಂಬರುವ ದಿನಗಳಲ್ಲಿ ಹೊಟ್ಟೆಗೆ ಹಾಗೂ ಜಾನುವಾರಗಳ ಮೇವಿಗೆ ಏನು ಮಾಡಬೇಕೆಂದು ಚಿಂತಿಸುವ ಕಾಲ ಬಂದೊದಗಿದೆ ಎಂಬುದು ರೈತರ ಅಳಲಾಗಿದೆ.

ಕಮರುತ್ತಿರುವ ಬೆಳೆಗಳು: ಮಳೆಯ ಕೊರತೆಯಿಂದ ಭೂಮಿಯಲ್ಲಿ ತೇವಾಂಶವಿಲ್ಲದಂತಾಗಿದೆ. ಇದರಿಂದಾಗಿ ಸೂರ್ಯಕಾಂತಿ, ಜೋಳ ಸೇರಿದಂತೆ ಹಲವು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಸೂರ್ಯಕಾಂತಿ ಬೆಳೆ ಸಂಪೂರ್ಣವಾಗಿ ಒಣಗಿದ್ದು ಕಾಳುಗಳು ಕಟ್ಟುವ ಮೊದಲೇ ಜಳ್ಳು ಹಿಡಿಯುತ್ತಿವೆ. ತೆರಕಣಾಂಬಿ ಹಾಗೂ ಕಸಬಾ ಹೋಬಳಿಗಳಲ್ಲಿಯೂ ಮಳೆಯ ಕೊರತೆಯಾಗಿದ್ದು, ಸೂರ್ಯಕಾಂತಿ, ಮುಸುಕಿನಜೋಳ, ಜೋಳ ಮುಂತಾದ ಬೆಳೆಗಳು ಬಿಸಿಲಿಗೆ ಒಣಗುತ್ತಿವೆ.

ಸೂರ್ಯಕಾಂತಿ ಗಿಡಗಳು ಎತ್ತರಕ್ಕೆ ಬೆಳೆಯಲು ಸಾಧ್ಯವಾಗದೆ ಗೇಣುದ್ದಕ್ಕೆ ಹೂ ಬಿಡುತ್ತಿದ್ದು ಅರಳುವ ಮೊದಲೇ ಬಾಡುತ್ತಿವೆ. ಆಳೆತ್ತರಕ್ಕೆ ಬೆಳೆಯಬೇಕಾದ ಜೋಳದ ಪೈರುಗಳು ನೆಲದಲ್ಲಿಯೇ ಮುದುಡಿಕೊಳ್ಳುತ್ತಿದೆ. ಇದರಿಂದಾಗಿ ಕೆಲವೆಡೆ ಈಗಾಗಲೇ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣದ್ದರೂ ಗಾಳಿಗೆ ಭೂಮಿಯಲ್ಲಿನ ತೇವಾಂಶ ಆರಿ ಹೋಗುತ್ತಿದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಬೆಳೆಗಳೂ ಒಣಗುತ್ತಿದ್ದು ಬೆಳೆಗಳೂ ನಾಶವಾಗುವ ಭೀತಿ ರೈತರಿಗೆ ಎದುರಾಗಿದೆ.

ಕೆರೆಗಳಲ್ಲಿ ನೀರಿಲ್ಲ: ಪಟ್ಟಣದ ಪ್ರಮುಖ ಕೆರೆಯಾದ ದೊಡ್ಡಕೆರೆ ಮತ್ತು ಚಿಕ್ಕಕೆರೆಗಳು ಸೇರಿದಂತೆ ಹಲವು ಗ್ರಾಮಗಳ ಕೆರೆಗಳಲ್ಲಿ ನೀರಿಲ್ಲ. ಇದು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಕೆರೆಗಳನ್ನು ಆಶ್ರಯಿಸಿ 800 ಎಕರೆಯಷ್ಟು ಪ್ರದೇಶಗಳಲ್ಲಿ ವ್ಯವಸಾಯ ಮಾಡಲಾಗುತ್ತಿತ್ತು. ಆದರೆ ಈಗ ಎರಡೂ ಕೆರೆಗಳಲ್ಲೂ ಹೂಳು ತುಂಬಿ ಮಳೆಯಾದರೂ ನೀರು ಸಂಗ್ರಹವಾಗದಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಕೆರೆಗೆ ಕಬಿನಿ ನದಿಯಿಂದ ನೀರು ಹರಿಸಬೇಕು ಎಂಬುದು ರೈತರ ಅಳಲಾಗಿದೆ.

ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ. ಬೇಗೂರಿನಲ್ಲಿ ಸಾಮಾನ್ಯವಾಗಿ 7.5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರೂ, ಮಳೆಯ ಕೊರತೆಯಿಂದ ಕೇವಲ 2.5 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಬಿತ್ತನೆ ಕಾರ್ಯ ಸೀಮಿತವಾಗಿದೆ. 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ, 13 ಸಾವಿರದ 738 ಹೆಕ್ಟೇರ್‌ ಸೂರ್ಯಕಾಂತಿ, 6 ಸಾವಿರ ಹೆಕ್ಟೇರ್‌ ನೆಲಗಡಲೆ ಇನ್ನುಳಿದ ಪ್ರದೇಶಗಳಲ್ಲಿ ದ್ವಿದಳ ಧಾನ್ಯ ಬಿತ್ತನೆ ಮಾಡಲಾಗಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿದ ಸೂರ್ಯಕಾಂತಿ ಮತ್ತು ಜೋಳದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿದೆ. ನಷ್ಟದ ಭೀತಿ ಎದುರಾಗಿದೆ. ಈಗ ಬೆಳೆದಿರುವ ಬೆಳೆ ಜಾನುವಾರುಗಳಿಗೆ ಮೇವಿಗೂ ಸಾಲದು.
-ವೀರಭದ್ರಪ್ಪ, ಹೊಸೂರು ರೈತ

ಮಳೆ ಕೊರತೆ ಕುರಿತು ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ತಿಂಗಳಲ್ಲಿ ಮಳೆ ಬೀಳದಿದ್ದರೆ ರೈತರು ತೀವ್ರ ನಷ್ಟ ಎದುರಿಸಬೇಕಾಗುತ್ತದೆ. ರೈತರು ಬೆಳೆವಿಮೆ ಮಾಡಲು ಅವಕಾಶವಿದೆ. ಎಲ್ಲಾ ರೈತರೂ ತಮ್ಮ ಬೆಳೆಗಳಿಗೆ ವಿಮೆ ಮಾಡಿ, ನಷ್ಟ ತಪ್ಪಿಸಿಕೊಳ್ಳಬೇಕು.
-ವೆಂಕಟೇಶ್‌, ಸಹಾಯಕ ಕೃಷಿ ನಿರ್ದೇಶಕ, ಗುಂಡ್ಲುಪೇಟೆ

* ಸೋಮಶೇಖರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ