ಗುಂಡ್ಲುಪೇಟೆಯ ಜೋಡಿ ರಸ್ತೆ ಕಾಮಗಾರಿ ವಿಳಂಬ

Team Udayavani, Oct 6, 2019, 3:00 AM IST

ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜೋಡಿ ರಸ್ತೆ ಕಾಮಗಾರಿಯ ವಿಳಂಬವಾಗುತ್ತಿದೆ. ಇದರಿಂದ ಕಳೆದ ಒಂದೂವರೆ ವರ್ಷದಿಂದ ವಾಹನ ಸವಾರರು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಹೊಂದಿರುವ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ವರ್ಷದ ಹಿಂದೆ ಪಟ್ಟಣದ ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದವರೆಗೆ ಜೋಡಿ ರಸ್ತೆಯನ್ನು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ಪ್ರಾರಂಭಿಸಲಾಯಿತು.

ಅಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಮೋಹನ ಕುಮಾರಿ ಭೂಮಿ ಪೂಜೆ ನೆರವೇರಿಸಿ, ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದರು. ಆದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚಾರ ಮಾಡಲು ವಾಹನ ಸವಾರರು ಹಾಗೂ ಈ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ನಡೆಸುವ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಏಕಮುಖ ರಸ್ತೆಯಲ್ಲಿಯೇ ಸಂಚಾರ: ಡಾಂಬರು ಹಾಕದ ರಸ್ತೆಯಲ್ಲಿ ಲಾರಿ, ಆಟೋ ಮುಂತಾದ ವಾಹನಗಳು ನಿಲ್ಲುತ್ತಿದ್ದು, ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರ ಮಾಡಬೇಕಾಗಿದೆ. ಎದುರು ಬರುವ ವಾಹನಕ್ಕೆ ದಾರಿ ಕೊಡಲೂ ಸಾಧ್ಯವಾಗದೇ ಏಕಮುಖ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ. ಶಿವಾನಂದ ವೃತ್ತದ ಬಳಿ ಡಾಂಬರು ಕಿತ್ತು ಭಾರೀ ಹಳ್ಳವುಂಟಾಗಿದ್ದು, ಇದನ್ನು ದಾಟಲು ವಾಹನ ಸವಾರರು ಹರಸಾಹಸ ಮಾಡಬೇಕಾಗಿದೆ.

ನಿತ್ಯ ಸಾವಿರಾರು ವಾಹನ ಸಂಚಾರ: ಇನ್ನೊಂದು ಬದಿಯಲ್ಲಿ ಅಳವಡಿಸಿದ್ದ ಯುಜಿಡಿ ಸಂಪೂರ್ಣವಾಗದೇ ಕಾಮಗಾರಿಯು ತೀವ್ರ ವಿಳಂಬವಾಗಿದೆ. ಈಗಾಗಲೇ ಒಂದು ಬದಿಯಲ್ಲಿ ಮಾತ್ರ ಒಳಚರಂಡಿ, ಪಾದಚಾರಿ ಮಾರ್ಗ ಹಾಗೂ ರಸ್ತೆಗೆ ಡಾಂಬರೀಕರಣ ಮಾಡಿ ಕಾಮಗಾರಿ ನಿಲ್ಲಿಸಿದ್ದಾರೆ. ಆದರೆ, ನೂತನ ರಸ್ತೆಯು ಹೆಚ್ಚಿನ ವಾಹನಗಳ ಒತ್ತಡವನ್ನು ತಾಳದೇ ಈಗಾಗಲೇ ಡಾಂಬರು ಕಿತ್ತುಬರುತ್ತಿದೆ. ಕಾಮಗಾರಿ ಪ್ರಾರಂಭಿಸಿದ ನಂತರವೂ ಪುರಸಭೆಯು ಒತ್ತುವರಿಯನ್ನು ತೆರವುಗೊಳಿಸದ ಪರಿಣಾಮ ಕುಂಟುತ್ತಾ ಸಾಗಿದೆ. ಪ್ರಮುಖ ವಾಣಿಜ್ಯ ಮಳಿಗೆಗಳನ್ನು ಹೊಂದಿದ ಹಾಗೂ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ.

ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ: ಇತ್ತೀಚೆಗೆ ಪುರಸಭೆಯು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಆದರೆ, ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ನಿಗಮ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಎಲ್ಲಾ ವಾಹನಗಳೂ ಒಂದೇ ಬದಿಯಲ್ಲಿ ಸಾಗಬೇಕಾಗಿದೆ. ಸುಗಮ ಸಂಚಾರ ಎಂಬುದು ಕನಸಾಗಿದೆ. ಒಂದು ಬದಿಯಲ್ಲಿ ಇನ್ನೂ ಸಮರ್ಪಕವಾಗಿ ಚರಂಡಿ ನಿರ್ಮಿಸದೇ ಕೊಳಚೆ ಮತ್ತು ಮಳೆ ನೀರು ನಿಲ್ಲುತ್ತಿದ್ದು, ಬಹುತೇಕ ಅಂಗಡಿಗಳ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ಹಿಡಿಶಾಪ ಹಾಕುತ್ತಿದ್ದಾರೆ.

ಗುಣಮಟ್ಟದ ಡಾಂಬರು ಹಾಕಿಲ್ಲ: ಕಾಮಗಾರಿ ಮುಗಿಯುವ ವೇಳೆಗೆ ಒಂದು ಬದಿಯಲ್ಲಿ ಹಾಕಿರುವ ಡಾಂಬರು ಕಿತ್ತು ಮತ್ತೆ ಹಾಳಾಗಲಿದೆ. ಮೊದಲೇ ಚೆನ್ನಾಗಿದ್ದ ರಸ್ತೆಗೆ ಡಾಂಬರು ಹಾಕಿದ್ದರೆ ಇನ್ನೂ ಹೆಚ್ಚಿನ ಬಾಳಿಕೆ ಬರುತ್ತಿದ್ದರೂ ಸರ್ಕಾರದ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿ ಸಾರ್ವಜನಿಕರಿಕೆ ತೊಂದರೆ ನೀಡಲಾಗುತ್ತಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿ: ಈ ಹಿಂದೆ ಜೋಡಿ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಗುಣಮಟ್ಟ ನಿರ್ವಹಣೆ ಮಾಡದೆ ಹಾಳಾಗಿದ್ದರೂ ಡಾಂಬರು ಹಾಕಿದ್ದರೆ ಸಾಕಾಗಿತ್ತು. ಆದರೆ, ಅಗಲೀಕರಣ ಮಾಡಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ವಾಹನ ಸವಾರರು ಹಾಗೂ ಅಂಗಡಿ ಮುಂಗಟ್ಟು ಹೊಂದಿರುವವರಿಗೆ ತೊಂದರೆಯಾಗಿದೆ. ಸಣ್ಣಪುಟ್ಟ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಿ, ಕಾಮಗಾರಿ ಮುಗಿಸಬೇಕು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು ಎಂದು ಗುಂಡ್ಲುಪೇಟೆ ನಿವಾಸಿ ಜಿ.ಎನ್‌.ಮಂಜುನಾಥ್‌ ಆಗ್ರಹಿಸಿದ್ದಾರೆ.

ಪುರಸಭೆಯಿಂದ ಒಳ ಚರಂಡಿ ಸ್ಥಳಾಂತರಕ್ಕೆ 40 ಲಕ್ಷ ರೂಪಾಯಿ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಸದ್ಯದಲ್ಲೇ ರಸ್ತೆ ಕಾಮಗಾರಿಯ ಬಗ್ಗೆ ತುರ್ತು ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ಸಿ.ಎಸ್‌.ನಿರಂಜನ ಕುಮಾರ್‌, ಶಾಸಕ

* ಸೋಮಶೇಖರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ