
ಚಾ.ನಗರ: ಸತತ ಮಳೆಯಿಂದ ಮನೆ ಕುಸಿತ; ಕೆಲ ಗ್ರಾಮಗಳು ಜಲಾವೃತ
Team Udayavani, Aug 29, 2022, 11:33 AM IST

ಚಾಮರಾಜನಗರ: ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದು ಕೆಲವು ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ನಾಯಕರ ಬೀದಿಯಲ್ಲಿ ಇಂದು ಮನೆಯೊಂದು ಕುಸಿದಿದ್ದು, ಅದೃಷ್ಟವಶಾತ್ ಮನೆಯವರೆಲ್ಲರೂ ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಇಂದು (ಆ. 29) ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ನಗರದ ಡೀವಿಯೇಷನ್ ರಸ್ತೆ ಬದಿಯ ನಾಯಕರ ಬೀದಿಯಲ್ಲಿ ಕುಮಾರ್ ಎಂಬುವರ ಮನೆ ಕುಸಿದಿದೆ. ಇದು ಹಳೆಯ ನಾಡ ಹೆಂಚಿನ ಮನೆಯಾಗಿದ್ದು, ಗೋಡೆ ಬೀಳುವ ಸಂಭವ ಕಂಡು ಬರುತ್ತಿದ್ದಂತೆ ಮನೆಯವರೆಲ್ಲ ಹೊರಗೆ ಓಡಿ ಬಂದಿದ್ದಾರೆ. ಹಾಗಾಗಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ರಾತ್ರಿ ಸಂಭವಿಸಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ಟಿವಿ, ಫ್ರಿಜ್, ಬಟ್ಟೆ, ದವಸ ಧಾನ್ಯ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದ್ದು ಸುಮಾರು 2 ಲಕ್ಷ ರೂ ನಷ್ಟವಾಗಿದೆ. ಫುಟ್‌ಪಾತ್ ನಲ್ಲಿ ಫಾಸ್ಟ್ ಫುಡ್ ಗಾಡಿ ಇಟ್ಡುಕೊಂಡಿರುವ ಕುಮಾರ್ ಅವರು ನಷ್ಟ ಭರಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ವೇಳೆ ಮಳೆ ಬರುತ್ತಿತ್ತು. ಆದರೆ ಭಾನುವಾರ ರಾತ್ರಿ ಆರಂಭವಾದ ಮಳೆ, ಸೋಮವಾರವೂ ಮುಂದುವರೆದಿದೆ.
ಸತತ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ತುಂಬಿದೆ. ಸುವರ್ಣಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ಪಾತ್ರದ ಕೆಲವು ಗ್ರಾಮಗಳಿಗೆ ತೊಂದರೆಯಾಗಿದೆ. ಅಂಬಳೆ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಮಹಾ ಮಳೆಯಿಂದಾಗಿ ಅನೇಕ ಕಡೆ, ಜಮೀನುಗಳಿಗೆ ಕರೆಯೋಪಾದಿಯಲ್ಲಿ ನೀರು ನುಗ್ಗಿದೆ. ದೊಡ್ಡರಾಯಪೇಟೆ, ಕುದೇರು ಉಮ್ಮತ್ತೂರು ಅಂಬಳೆ ಮಹಾಂತಾಳಪುರ ಮತ್ತಿತರ ಗ್ರಾಮಗಳಲ್ಲಿ ಜಮೀನಿಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜೋಳದ ಬಿತ್ತನೆ ಹಾಳಾಗಿದೆ. ಹುಲ್ಲೇಪುರ ಗ್ರಾಮ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ.
24 ಮನೆಗಳ ಕುಸಿತ: ಮಳೆಯಿಂದಾಗಿ ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ 24 ಮನೆಗಳು ಕುಸಿತವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ಉದಯವಾಣಿಗೆ ತಿಳಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದಲ್ಲದೇ ಬೆಳೆಗಳು ಹಾನಿಗೊಳಗಾಗಿದ್ದು ಒಟ್ಟು ಹಾನಿಯ ವಿವರ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದರು.
ಮಹಾ ಮಳೆಯಿಂದಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ಸೋಮವಾರ ರಜೆ ಘೋಷಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
