ಇತಿಹಾಸ ತಿರುಚುವ ಹುನ್ನಾರ: ಆಕ್ರೋಶ

Team Udayavani, Nov 14, 2019, 3:00 AM IST

ಚಾಮರಾಜನಗರ: ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾಶಂಕರ್‌ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತನಾಡಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಉಮ್ಮತ್ತೂರು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಸರ್ಕಾರದ ಅಧೀನ ಕಾರ್ಯದರ್ಶಿ ಉಮಾಶಂಕರ್‌ ಅಂಬೇಡ್ಕರ್‌ ಮಾತ್ರ ಸಂವಿಧಾನ ಬರೆದಿಲ್ಲ. ಇತರ ಸಂವಿಧಾನ ತಜ್ಞರು ಇದರಲ್ಲಿ ಭಾಗವಹಿಸಿದ್ದರು ಮತ್ತು ಸಂವಿಧಾನ ಅಂಬೇಡ್ಕರ್‌ ಕೊಡುಗೆ ಮಾತ್ರವಲ್ಲ ಎಂಬ ಹೇಳಿಕೆ ನೀಡಿದ್ದಾರೆ. ದಲಿತ ಸಮುದಾಯಗಳ ಮೇಲೆ ದೌರ್ಜನ್ಯ, ದಲಿತರ ಆತ್ಮಗೌರವಕ್ಕೆ ಧಕ್ಕೆ ಉಂಟು ಮಾಡುವ ಸಲುವಾಗಿ ಇಂಥ ಹೇಳಿಕೆಯನ್ನು ಸರ್ಕಾರದ ಕಾರ್ಯದರ್ಶಿ ನಡೆಸಿದ್ದಾರೆ ಇದು ಖಂಡನೀಯ ಎಂದರು.

ಜಿಲ್ಲಾಧಿಕಾರಿಗೆ ಮನವಿ: ಘಟನೆಯನ್ನು ಖಂಡಿಸಿ ಬುಧವಾರದ ನ್ಯಾಯಾಲಯ ಕಲಾಪದಿಂದ ಹೊರಗುಳಿಯಲು ತೀರ್ಮಾನಿಸಿದರು. ಅದರಂತೆ ಕಲಾಪದಿಂದ ಹೊರಗುಳಿದು, ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಗೆ ಮನವಿ ಸಲ್ಲಿಸಿದರು.

ಜಾಣಕುರುಡು ಪ್ರದರ್ಶನ: ಸಂಘದ ಅಧ್ಯಕ್ಷ ಇಂದುಶೇಖರ್‌ ಮಾತನಾಡಿ, ಕೇವಲ ಉಮಾಶಂಕರ್‌ ಅವರು ಮಾತ್ರವಲ್ಲ, ಪ್ರೌಢ ಶಿಕ್ಷಣ ಆಯುಕ್ತ ಜಗದೀಶ್‌ ಅವರು ಸಹ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಸಾಮೂಹಿಕ ಹೊಣೆಗಾರಿಕೆಯಿಂದ ರಚನೆಯಾದ ಸಂವಿಧಾನ ಎಂದು ಹೇಳುವ ಮೂಲಕ ಇತಿಹಾಸ ತಿರುಚುವ ಹುನ್ನಾರ ನಡೆಸಿದ್ದಾರೆ. ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರಿಗೆ ಈ ಎಲ್ಲ ವಿಚಾರ ಗೊತ್ತಿದ್ದರೂ ಜಾಣಕುರುಡು ಪ್ರದರ್ಶಿಸುವ ಮೂಲಕ ಜಾರಿಕೊಳ್ಳುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಹುದ್ದೆಯಿಂದ ವಜಾಗೊಳಿಸಿ: ವಕೀಲರ ಸಂಘ ಈ ಕಾರ್ಯದರ್ಶಿಗಳ ಹೊಣೆಗೇಡಿತನವನ್ನು ಖಂಡಿಸುತ್ತದೆ. ಸರ್ಕಾರದ ಉನ್ನತ ಸ್ಥಾನದಲ್ಲಿದ್ದು, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸದ ಸರ್ಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಮತ್ತು ಸರ್ಕಾರದ ಪ್ರೌಢ ಶಿಕ್ಷಣ ಆಯುಕ್ತರನ್ನು ಅವರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಎಂ.ಶಿವರಾಮು, ಕಾರ್ಯದರ್ಶಿ ಮಂಜು ಹರವೆ, ಖಚಾಂಚಿ ನಾಗಮ್ಮ, ಜಂಟಿ ಕಾರ್ಯದರ್ಶಿ ಬಿ ಮಂಜು, ವಕೀಲರಾದ ನಾಗಣ್ಣ, ಪುಟ್ಟಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ರಾಜೇಂದ್ರ, ನಂಜುಂಡಸ್ವಾಮಿ, ಮಹಾಲಿಂಗರ್ಗಿ, ಸಿ. ಚಿನ್ನಸ್ವಾಮಿ, ಸವಿತಾ, ಶ್ವೇತಾ, ಮೇಘಾ, ಕುಮಾರ್‌, ಮಂಜುನಾಥಸ್ವಾಮಿ, ಮಾದೇಶ್‌, ಅರುಣ್‌ಕುಮಾರ್‌, ಡಿ.ರಂಗಸ್ವಾಮಿ, ಮಾದೇಶ್‌, ಮಹೇಶ್‌ಕುಮಾರ್‌, ಜಾವೀದ್‌ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ