ಚಾಮುಲ್‌ ಹುದ್ದೆಗೆ ಭಾರೀ ಭ್ರಷ್ಟಾಚಾರ

Team Udayavani, Nov 14, 2019, 3:00 AM IST

ಚಾಮರಾಜನಗರ: ಚಾಮರಾಜನಗರ ಹಾಲು ಉತ್ಪಾದಕರ ಒಕ್ಕೂಟ (ಚಾಮುಲ್‌) ದಲ್ಲಿ ಖಾಲಿಯಿರುವ 72 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಹಣ ನೀಡಿದ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡಲಾಗಿದೆ ಎಂದು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಲ್‌ನಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 72 ಹುದ್ದೆಗಳಿಗೆ ನೇರ ನೇಮಕಾತಿ ಇತ್ತು. ಆನ್‌ಲೈನ್‌ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ, ಉಗ್ರಾಣಾಧಿಕಾರಿ, ಕೃಷಿ ಅಧಿಕಾರಿ, ಆಡಳಿತಾಧಿಕಾರಿ ಮತ್ತಿತರ ಹುದ್ದೆಗಳಿಗೆ ಸುಮಾರು 5 ಸಾವಿರ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಿಗೆ ಕಳೆದ ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಪರೀಕ್ಷಾ ವಿಧಾನದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಪಾರದರ್ಶಕವಾಗಿ ನಡೆಯದ ಪರೀಕ್ಷೆ: ಪರೀಕ್ಷೆ ನಡೆಸುವ ಏಜೆನ್ಸಿಯನ್ನು ಆಯ್ಕೆ ಮಾಡುಕೊಳ್ಳುವಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ತಮಗೆ ಅನುಕೂಲವಾಗು ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ನಡೆಸುವ ಅಧಿಕಾರ ನೀಡಿದ್ದಾರೆ. ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳಲು ಸಹಕರಿಸುವ ವಿವಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪರೀಕ್ಷೆ ನಡೆಸುವ ಅಧಿಕಾರ ನೀಡಬಹುದಿತ್ತು. ಆಗ ಪಾರದರ್ಶಕವಾಗಿ ಪರೀಕ್ಷೆ ನಡೆಯುತ್ತಿತ್ತು ಎಂದು ಅವರು ಹೇಳಿದರು.

10 ರಿಂದ 15 ಕೋಟಿ ರೂ. ಅವ್ಯವಹಾರ: ಚಾಮರಾಜನಗರ ಜಿಲ್ಲೆಯಲ್ಲಿ ಚಾಮುಲ್‌ ಇದ್ದರೂ, ಮೈಸೂರಿನ ವಿವಿಧ ಖಾಸಗಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಯಾವ ಅಭ್ಯರ್ಥಿ ಹೆಚ್ಚು ಹಣ ನೀಡುತ್ತಾನೋ ಅವನು ಉತ್ತರ ಪತ್ರಿಕೆಯಲ್ಲಿ ಬಹುಮಾದರಿ ಆಯ್ಕೆಗೆ ಉತ್ತರ ಬರೆಯದೇ ಖಾಲಿ ಬಿಟ್ಟಿದ್ದಾನೆ. ಹಣ ನೀಡಿದ ಅಭ್ಯರ್ಥಿಗೆ ಬಳಿಕ ಸರಿ ಉತ್ತರಗಳನ್ನು ತುಂಬುವ ಕೆಲಸ ಮಾಡಲಾಗಿದೆ. ಪ್ರತಿ ಹುದ್ದೆಗೆ 5 ರಿಂದ 20 ಲಕ್ಷ ರೂ. ಹಣ ಪಡೆಯಲಾಗಿದೆ. ಒಟ್ಟು 10 ರಿಂದ 15 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವೀರಭದ್ರಸ್ವಾಮಿ ಆರೋಪಿಸಿದರು.

ನ್ಯಾಯಕ್ಕಾಗಿ ಹೋರಾಟ: ಯಾರಿಂದ ಹಣ ಪಡೆದಿದ್ದಾರೋ ಅವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿದೆ. ನಿಯಮದನ್ವಯ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗೆ ನೀಡಬೇಕು. ಆದರೆ ಇಲ್ಲಿ ನೀಡಿಲ್ಲ. ಇದರಿಂದಲೇ ಅವ್ಯವಹಾರ ನಡೆದಿರುವುದು ಖಾತ್ರಿಯಾಗುತ್ತಿದೆ. ಪರೀಕ್ಷಾ ಕೊಠಡಿಯಲ್ಲಿ ನಡೆದ ಈ ಅನ್ಯಾಯದಿಂದ ಕಂಗಾಲಾದ ಅನೇಕ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

ಕಾನೂನಾತ್ನಕ ಹೋರಾಟ: ಈ ಅವ್ಯವಹಾರದಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು, ಆಡಳಿತಾಧಿಕಾರಿ, ಒಕ್ಕೂಟದ ಅಧ್ಯಕ್ಷರು ಶಾಮೀಲಾಗಿದ್ದು, ಸರ್ಕಾರ ಕೂಡಲೇ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ, ಪ್ರಕರಣದ ತನಿಖೆಯನ್ನು ಸಿಓಡಿ ಅಥವಾ ಸಿಬಿಐಗೆ ವಹಿಸಬೇಕು. ಇಲ್ಲವಾದರೆ, ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಉಪಾಧ್ಯಕ್ಷ ಮೂಡ್ನಾಕೂಡು ಅಸ್ಲಂ ಷರೀಫ್, ಸಂಘಟನಾ ಕಾರ್ಯದರ್ಶಿ ಮಾದಾಪುರ ರವಿಕುಮಾರ್‌, ಗೋವಿಂದರಾಜು ಇದ್ದರು.

ಒಕ್ಕೂಟ ಅಧ್ಯಕ್ಷರ ಮೊಮ್ಮಗನಿಗೆ ಮೊದಲ ರ್‍ಯಾಂಕ್‌!: ಜಿಲ್ಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ, ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ಹಾಲು ಒಕ್ಕೂಟದ ಅಧ್ಯಕ್ಷ ಸಿ.ಎಸ್‌. ಗುರುಮಲ್ಲಪ್ಪ ಅವರ ಮೊಮ್ಮಗನಿಗೆ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ದೊರೆತಿದ್ದು, ಇದು ಅವ್ಯವಹಾರ ನಡೆದಿರುವುದಕ್ಕೆ ಪ್ರಬಲ ನಿದರ್ಶನವಾಗಿದೆ ಎಂದು ಆರೋಪಿಸಿದರು. ಒಕ್ಕೂಟದ ಹೊರಗುತ್ತಿಗೆ ನೇಮಕಾತಿಯಲ್ಲೂ ಅವ್ಯವಹಾರ ನಡೆದಿದೆ. ಈಗ ನೇರ ನೇಮಕಾತಿಯಲ್ಲೂ ಅವ್ಯವಹಾರ ನಡೆದಿದೆ. ಸರ್ಕಾರ ಕೂಡಲೇ ನೇಮಕಾತಿಗಳ ಪ್ರಕ್ರಿಯೆಯನ್ನು ರದ್ದುಮಾಡಬೇಕು. ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ