ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಿ

Team Udayavani, Jun 12, 2019, 3:00 AM IST

ಚಾಮರಾಜನಗರ: ಶುದ್ಧ ಗಾಳಿ, ನೀರು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯುವುದರ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜಿಪಂ ಅಧ್ಯಕ್ಷೆ ಶಿವಮ್ಮ ಸಲಹೆ ಮಾಡಿದರು.

ತಾಲೂಕಿನ ಚಂದಕವಾಡಿಯ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲಾ ಅವರಣದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಚಂದಕವಾಡಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛತೆ ಇರುವೆಡೆ ಸಮೃದ್ಧ ಆರೋಗ್ಯ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಎಲ್ಲರೂ ಸ್ವಚ್ಛತೆಯನ್ನು ಹೊಂದುವುದರ ಮೂಲಕ ಗ್ರಾಮೀಣ ಜನರ ಆರೋಗ್ಯಕರ ಜೀವನಮಟ್ಟ ಸುಧಾರಿಸುವುದೇ ಸ್ವಚ್ಛ ಮೇವ ಜಯತೇ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಚ್ಛತೆ ಇರುವೆಡೆ ಸಮೃದ್ಧ ಆರೋಗ್ಯ ಇರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಪರಿಣಾಮಕಾರಿಯಾಗಿ ಸ್ವಚ್ಛ ಮೇವ ಜಯತೇ ಆಂದೋಲನ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಗಿಡ ಬೆಳೆಸಿ ಅಂತರ್ಜಲ ಹೆಚ್ಚಿಸಿ: ಜಿಪಂ ಸದಸ್ಯ ಆರ್‌.ಬಾಲರಾಜು ಮಾತನಾಡಿ, ಆಧುನಿಕತೆ ಹೆಸರಿನಲ್ಲಿ ರಸ್ತೆಗಳ ಅಗಲೀಕರಣ, ಡಾಂಬರೀಕರಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಸಲ್ಲದು. ಇಂದಿನ ಬರ ಪರಿಸ್ಥಿತಿ ಸನ್ನಿವೇಶದಲ್ಲಿ ಗಿಡ, ಮರಗಳನ್ನು ಯಥೇಚ್ಚವಾಗಿ ಬೆಳೆಸಬೇಕು. ಇದರಿಂದ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದರು.

ಉತ್ತಮ ಪರಿಸರ ಪ್ರವಾಸಿ ತಾಣ: ಜಿಲ್ಲೆ ಶೇ. 52ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಉತ್ತಮ ಪರಿಸರ ಪ್ರವಾಸಿ ತಾಣವಾಗಿದೆ. ಆದರೆ ಇನ್ನುಳಿದ ಭಾಗದಲ್ಲಿಯೂ ಸಹ ಹೆಚ್ಚಿನ ಮರ ಗಿಡಗಳನ್ನು ನೆಡಬೇಕು. ಹಸಿರೀಕರಣದಿಂದ ಪರಿಸರ ಸಂರಕ್ಷಿಸುವ ಕಾರ್ಯ ನಿರಂತರ ಪ್ರಕ್ರಿಯೆಯಾಗಬೇಕು. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮಾದರಿ ಗ್ರಾಮಗಳಾಗಲೂ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ಜಲಮರುಪೂರಣ ಘಟಕ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಮಾತನಾಡಿ, ಮನುಷ್ಯನಿಗೆ ನೀರು ಅತ್ಯಾವಶ್ಯಕವಾಗಿ ಬೇಕು. ನೀರಿನ ಪ್ರಾಮುಖ್ಯತೆ ಅರಿಯಬೇಕು. ಜನತೆ ನೀರಿನ ಬಗ್ಗೆ ಸಾಕ್ಷರತೆ ಹೊಂದ‌ಬೇಕು. ನೀರಿನ ಸದ್ಭಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1950 ಕಡೆ ಜಲಮರುಪೂರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಚರಂಡಿ ನಿರ್ವಹಣೆ ಮಾಡಿ: ಸ್ವಚ್ಛ ಮೇವ ಜಯತೇ ಕಾರ್ಯಕ್ರಮದ ಅಂಗವಾಗಿ ಶಾಲೆಗಳಲ್ಲಿ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ಸ್ವಚ್ಛತೆ ಮತ್ತು ನೀರಿನ ಸದ್ಭಳಕೆ ವಿಷಯಗಳಿಗೆ ಪ್ರಥಮಾದ್ಯತೆ ನೀಡಬೇಕು. ಶಾಲಾ ಅವರಣದಲ್ಲಿ ಕಸದ ಬುಟ್ಟಿಗಳನ್ನಿಡಬೇಕು. ಗ್ರಾಮಗಳ ಸ್ವಚ್ಛತೆ ಬರೀ ಸರ್ಕಾರದ ಕೆಲಸವಲ್ಲ. ಅದರಲ್ಲಿ ಜನರ ಸಹಭಾಗಿತ್ವ ಇರಬೇಕು. ಚರಂಡಿಗಳಲ್ಲಿ ಕಸವನ್ನು ಹಾಕದೇ ಸೂಕ್ತವಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಬಯಲು ಶೌಚ ಮಾಡದಿರಿ: ಗ್ರಾಮಗಳು ಪ್ಲಾಸ್ಟಿಕ್‌ ಮುಕ್ತವಾಗುವ ಹಾದಿಯಲ್ಲಿ ಪ್ಲಾಸ್ಟಿಕ್‌ ಅನ್ನು ಬಳಸಿದರೆ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಬಯಲು ಶೌಚ ಮಾಡಲೇಬಾರದು. ಅದು ಅನೇಕ ರೋಗರುಜಿನಗಳ ಹರಡುತ್ತದೆ. ಸ್ವಚ್ಛ ಪರಿಸರದ ಸಂಸ್ಕೃತಿ ನಮ್ಮದಾಗಲೂ ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಎಂದು ಹೇಳಿದರು.

ಚಂದಕವಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಸಿದ್ಧಪ್ಪಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹನುಮನರಸಯ್ಯ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯರಾದ ಎಚ್‌.ವಿ. ಚಂದ್ರು, ದೊಡ್ಡತಾಯಮ್ಮ, ಮಹದೇವಶೆಟ್ಟಿ, ಚಂದಕವಾಡಿ ಗ್ರಾ.ಪಂ. ಸದಸ್ಯರಾದ ನಾಗನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷಿ¾àಪತಿ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಚ್ಛ ಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮಗಳ ಭಿತ್ತಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಲೆ ನಟರಾಜು ಪರಿಸರ ಗೀತೆಗಳನ್ನು ಹಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಂದಕವಾಡಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸ್ವಚ್ಛತಾ ಸಾಕ್ಷರತಾ ರಥಕ್ಕೆ ಹಾಗೂ ಮೆರವಣಿಗೆಗೆ ಜಿಲ್ಲಾ ಪ್ರಧಾನ ಹಾಗೂ

-ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಚಾಲನೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಸಿವಿಲ್‌ ನ್ಯಾಯಾಧೀಶೆ ಸಿ.ಜೆ. ವಿಶಾಲಾಕ್ಷಿ ಅವರು ಹಾಜರಿದ್ದರು. ನಂತರ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲಾ ಅವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ