ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

Team Udayavani, Sep 23, 2019, 3:00 AM IST

ಚಾಮರಾಜನಗರ: ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ದಸರಾ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಉತ್ತಮ ಕ್ರೀಡಾ ಪ್ರದರ್ಶನ ಮಾಡಬೇಕು. ಕ್ರೀಡೆಗೆ ಪ್ರಾಮುಖ್ಯತೆ ನೀಡಿ ಒಳ್ಳೆಯ ಕ್ರೀಡಾಪಟುವಾಗಿ ಹೊರಹೊಮ್ಮಬೇಕು ಎಂದು ಹಾರೈಸಿದರು.

ನಿರಂತರ ಪರಿಶ್ರಮದಿಂದ ಗೆಲುವು: ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ. ಬಸವಣ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ, ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಮೊದಲಿಗೆ ಸ್ಪರ್ಧಿಸುವ ಮನೋಭಾವನೆಯನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಎಂದರು.

ಮುಂದಿನ ಹಂತಕ್ಕೆ ಅವಕಾಶ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಚೆಲುವಯ್ಯ ಮಾತನಾಡಿ, ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಮುಂದಿನ ಹಂತದಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಲಿದೆ ಎಂದು ಮಾಹಿತಿ ನೀಡಿದರು. ಡಿ.ವೈ.ಎಸ್‌.ಪಿ ಮೋಹನ್‌ ಮತ್ತಿತರರು ಇದ್ದರು. 100 ಮೀ, 200ಮೀ, 400 ಮೀ, 800, ಮೀ, 1500 ಮೀ. ಓಟ, ಕಬ್ಬಡಿ, ಖೋ ಖೋ, ವಾಲಿಬಾಲ್‌ ಇನ್ನಿತರ ಆಟೋಟಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿದರು.

ಆಯೋಜಕರು-ಕ್ರೀಡಾಪಟುಗಳ ನಡುವೆ ವಾಗ್ವಾದ
ಚಾಮರಾಜನಗರ: ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೆಲವು ಕ್ರೀಡಾಪಟುಗಳನ್ನು ಮುಂಚಿತವಾಗಿಯೇ ಆಯ್ಕೆ ಮಾಡಿದ ವಿಚಾರವಾಗಿ, ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಕೂಟ ಆಯೋಜಕರು ಮತ್ತು ಕ್ರೀಡಾಪಟುಗಳ ನಡುವೆ ವಾಗ್ವಾದ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸ್ಪರ್ಧೆ ಮಾಡಲು,ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿದ ಕೆಲವು ಕ್ರೀಡಾಳುಗಳಿಗೆ ಅವಕಾಶ ಸಿಗದ ಹಿನ್ನಲೆ ಆಯೋಜಕರ ಮೇಲೆ ಆಕ್ರೋಶಗೊಂಡರು.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿದ್ದ ಕ್ರೀಡಾಪಟುಗಳು ಜಿಲ್ಲಾ ಕ್ರೀಡಾಕೂಟಕ್ಕೆ ಆಗಮಿಸಬೇಕೆಂದು ತಿಳಿಸಲಾಗಿತ್ತು. ಆದರೆ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡುವ ಸಲುವಾಗಿ ಕೆಲವು ಕ್ರೀಡೆಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸಲಾಗಿತ್ತು. ಈ ಮಾಹಿತಿ ಹಲವರಿಗೆ ತಲುಪಿರಲಿಲ್ಲ. ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಬಂದ ಹಲವು ಕ್ರೀಡಾಪಟುಗಳು ಇದರಿಂದ ಕೆರಳಿ ಆಯೋಜಕರನ್ನು ಪ್ರಶಿ. ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯುವ ಮುನ್ನವೇ ಕೆಲವು ಕ್ರೀಡಾಳುಗಳನ್ನು ಕರೆಸಿ ನಿನ್ನೆಯೇ ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಿದ್ದೀರಾ ಇದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ವಿಭಾಗ ಮಟ್ಟದ ಕ್ರೀಡಾಕೂಟಗಳು ಮಂಗಳೂರಿನಲ್ಲಿ ನಡೆಯುತ್ತಿದ್ದು, ಈಗ ನಿಮ್ಮನ್ನು ವಿಭಾಗ ಮಟ್ಟಕ್ಕೆ ಕಳುಹಿಸಲು ಸಾಧ್ಯವಿಲ್ಲ. ಇಂದು ಜಿಲ್ಲಾ ಮಟ್ಟದ ಕೆಲವು ಕ್ರೀಡಾಕೂಟಗಳು ನಡೆದಿದ್ದರೂ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಆದ್ದರಿಂದ ಶುಕ್ರವಾರ ಬಂದವರಿಗೆ ಸ್ಪರ್ಧೆ ಮಾಡಿ ಕಳುಹಿಸಲಾಗಿದೆ ಮುಂದೆ ಇಂಥ ತಪ್ಪು ನಡೆಯದಂತೆ ಕ್ರಮ ವಹಿಸುತ್ತೇವೆ ನಮ್ಮಿಂದ ತಪ್ಪಾಗಿದೆ ಎಂದು ಕ್ರೀಡಾಕೂಟ ಆಯೋಜಕರು ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ